ಬೆಂಗಳೂರು: ಸಾಮಾನ್ಯ ಕಾರ್ಯಕರ್ತರೂ ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ. ನಾನು ಸಾಮಾನ್ಯ ಕುಟುಂಬದಿಂದ ಬಂದಿದ್ದೇನೆ. ಬಿಜೆಪಿ ಪಕ್ಷವು ಗುರುತಿಸಿ ಸಚಿವ ಸ್ಥಾನ ಕೊಟ್ಟಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ಪ್ರಕೋಷ್ಠಗಳ ಸಮಾವೇಶದಲ್ಲಿ ಭಾಗವಹಿಸಿ, ಸಂಘಟನೆ, ಸಾಧನೆಗಳ ಕುರಿತು ಮಾತನಾಡಿದ ಸಚಿವರು, ಕಾರ್ಯಕರ್ತರಾಗಿ ದುಡಿದರೆ ಪಕ್ಷದಲ್ಲಿ ನಿಮ್ಮನ್ನು ಗುರುತಿಸುತ್ತಾರೆ ಎಂದು ಹೇಳಿದರು.
ಬಿಜೆಪಿ ಇಷ್ಟು ದೊಡ್ಡದಾಗಿ ಬೆಳೆದಿದ್ದು ಕಾರ್ಯಕರ್ತರ ಶ್ರಮದಿಂದ. ಇದು ಕಾರ್ಯಕರ್ತರ ಪಕ್ಷ. ಮುಂಬರುವ ಎಲ್ಲ ಚುನಾವಣೆಗಳಿಗೆ ಪಕ್ಷ ಸಕಲ ಸಿದ್ಧತಾ ಕಾರ್ಯ ಆರಂಭಿಸಿದೆ. ಬಿಬಿಎಂಪಿ ಚುನಾವಣೆಯಲ್ಲಿಯೂ ನಮ್ಮ ಗೆಲುವು ಶತಃಸಿದ್ಧ. ಪ್ರಕೋಷ್ಠದ ಪದಾಧಿಕಾರಿಗಳು ವಿಭಿನ್ನವಾಗಿ ಕೆಲಸಮಾಡಿ, ಸಮಾಜದ ಶೋಷಿತ ವರ್ಗದವರಿಗೆ ಸಹಾಯಕ್ಕೆ ನಿಲ್ಲಬೇಕು. ಆ ಮೂಲಕ ಸಂಘಟನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎನ್. ಆರ್. ರಮೇಶ್, ಶಾಸಕರಾದ ಸತೀಶ್ ರೆಡ್ಡಿ, ಉದಯ್ ಗರುಡಾಚಾರ್, ಎಂ ಕೃಷ್ಣಪ್ಪ, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.