Advertisement

ಪ್ರಕೃತಿ, ಜೀವವೈವಿಧ್ಯದ ರಕ್ಷಣೆಯಲ್ಲಡಗಿದೆ ನಮ್ಮ ಉಳಿವು!

11:38 PM May 21, 2023 | Team Udayavani |

ಅಸಂಖ್ಯಾತ ಜೀವರಾಶಿಗಳಿಗೆ ನೆಲೆಯಾಗಿರುವ ಭೂಮಿ ಜೀವ ವೈವಿಧ್ಯಗಳ ಗೂಡು. ಈ ವೈವಿಧ್ಯತೆಯೇ ಈ ಗ್ರಹದ ವೈಶಿಷ್ಟ್ಯ. ವೈವಿಧ್ಯತೆಯು ಗ್ರಹದ ಜೈವಿಕ ವ್ಯವಸ್ಥೆಯ ಅಸ್ತಿತ್ವದ ಪ್ರತಿಬಿಂಬ. ಜೀವನೆಲೆಯ ಉಸಿರಿನಂತಿರುವ ಪ್ರಕೃತಿ ಹಾಗೂ ಜೀವರಾಶಿಗಳ ವೈವಿಧ್ಯವನ್ನು ಈಗ ಉಳಿಸಿಕೊಳ್ಳಬೇಕಾಗಿದೆ. ಅಳಿವಿನಂಚಿಗೆ ಸಾಗುತ್ತಿರುವ ಜೀವಪ್ರಭೇದಗಳ ಸಂರಕ್ಷಣೆಗೆ ಹಲವು ರಾಷ್ಟ್ರಗಳು ಪಣ ತೊಡುತ್ತಿವೆ. ವಿಶ್ವಸಂಸ್ಥೆಯ 15ನೇ ಸಮ್ಮೇಳನದಲ್ಲಿ ಜೀವ ವೈವಿಧ್ಯತೆಯ ಸಂರಕ್ಷಣೆಯ ಯೋಜನೆಗಳನ್ನು ಜೀವ ವೈವಿಧ್ಯತೆಯ ಕಾಪ್‌-15 (ಇOಕ -15)  ಸಭೆಯಲ್ಲಿ ದೇಶಗಳು ಅಳವಡಿಸಿಕೊಂಡಿವೆ. ಈ ಬಾರಿಯ ಅಂತಾರಾಷ್ಟ್ರೀಯ ಜೀವ ವೈವಿಧ್ಯತೆಯ ದಿನದಂದು “ಒಪ್ಪಂದದಿಂದ ಕ್ರಿಯೆಗೆ; ಜೀವ ವೈವಿಧ್ಯತೆಯನ್ನು ಪುನಃ ಸ್ಥಾಪಿಸಿ” ಎಂಬ ಧ್ಯೇಯದೊಂದಿಗೆ ಜೀವ ವೈವಿಧ್ಯದ ಸಂರಕ್ಷಣೆಯೆಡೆಗೆ ಹೆಜ್ಜೆಯಿಡುತ್ತಿವೆ.

Advertisement

ಪ್ರಪಂಚದ ಅಂದಾಜು 8 ಮಿಲಿಯನ್‌ಗಳಷ್ಟಿರುವ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳಲ್ಲಿ ಒಂದು ಮಿಲಿ ಯನ್‌ನಷ್ಟು ಅಪಾಯ ಹಾಗೂ ಅಳಿವಿನಂಚಿನಲ್ಲಿದೆ ಎಂದು ಹೇಳಲಾಗಿದೆ.  ಇಂಟರ್‌ನ್ಯಾಶನಲ್‌ ಯುನಿಯನ್‌ ಫಾರ್‌ ಕನ್ಸರ್‌ವೇಶನ್‌ ಆಫ್ ನೇಚರ್‌ ಪ್ರಕಾರ 42,100ಕ್ಕಿಂತಲೂ ಹೆಚ್ಚು ಪ್ರಭೇದಗಳು ಕೆಂಪುಪಟ್ಟಿಯಲ್ಲಿ ಅದರಲ್ಲೂಅಪಾಯ ಮತ್ತು ಅಳಿವಿನಂಚಿನಲ್ಲಿವೆ.

ಏನಿದು ಐಯುಸಿಎನ್‌ ರೆಡ್‌ ಲಿಸ್ಟ್‌?

ಅಪಾಯ ಹಾಗೂ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣೆಗಾಗಿ 1964ರಲ್ಲಿ ಇಂಟರ್‌ನ್ಯಾಶನಲ್‌ ಯುನಿಯನ್‌ ಫಾರ್‌ ಕನ್ಸìವೇಶನ್‌ ಆಫ್ ನೇಚರ್‌(ಐಯುಸಿಎನ್‌) ಅನ್ನು ಆರಂಭಿಸಲಾಯಿತು. ವಿಶ್ವದಲ್ಲಿರುವ ವಿವಿಧ ಪ್ರಭೇದಗಳ ಸಂರಕ್ಷಣೆಯ ಸ್ಥಿತಿಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಇದು ಕಲೆ ಹಾಕುತ್ತದೆ. ಜೀವವೈವಿಧ್ಯತೆಯ ಸಂರಕ್ಷಣೆಯ ನೀತಿ ಹಾಗೂ ಅದರಲ್ಲಿ ಮಾಡಬೇಕಾದ ಬದಲಾವಣೆಗಳನ್ನು ರೂಪಿಸಲು ಇದು ಪ್ರಬಲ ಸಾಧನವಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ 1,50,300 ಪ್ರಭೇದ ಗಳು ಐಯುಸಿಎನ್‌ನ ರೆಡ್‌ ಲಿಸ್ಟ್‌ನಲ್ಲಿದೆ. ಅದರಲ್ಲಿ 42,100ಕ್ಕೂ ಅಧಿಕ ಪ್ರಭೇದಗಳು ಅಪಾಯ ಹಾಗೂ ಅಳಿವಿನಂಚಿನಲ್ಲಿವೆ.

ಭಾರತದಲ್ಲಿ ಹೇಗೆ?

Advertisement

ಪ್ರಪಂಚದ 190 ದೇಶಗಳ ಪೈಕಿ 17 ದೇಶಗಳು ಮೆಗಾಡೈವರ್ಸ್‌ ಎಂಬ ಬಿರುದನ್ನು  ಪಡೆದಿವೆ. ಅಂದರೆ ಈ ದೇಶಗಳು ಶೇ.70 ರಷ್ಟು ಜೀವವೈವಿಧ್ಯತೆಯನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿವೆ.  ಭಾರತವೂ ಈ ದೇಶಗಳಲ್ಲಿ ಒಂದು. ಅಂದರೆ ವಿಶ್ವದ ಶೇ. 7ರಿಂದ 8ರಷ್ಟು ಪ್ರಭೇದಗಳು ಭಾರತದಲ್ಲಿ ಕಾಣ ಸಿಗುತ್ತವೆ. ಇದರಲ್ಲಿ ಅಂದಾಜು 96,000 ಪ್ರಾಣಿ ಪ್ರಭೇದಗಳು,  47,000 ಸಸ್ಯ ಪ್ರಭೇದಗಳು. ದೇಶವು ಹಸುರು ಹಾಗೂ ಪ್ರಾಕೃತಿಕ ವಾಗಿ ಸಂಪದ್ಭರಿತವಾಗಿದೆ ಎಂದು ಖುಷಿಯೇನೋ ಪಡಬಹುದು. ಆದರೆ ಈ ಸಂಪತ್ತು ನಶಿಸುತ್ತಿದೆ ಎಂಬುದು ವಾಸ್ತವದ ಸ್ಥಿತಿಯಾಗಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ.

ಭಾರತದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳು

n          12.6% ಸಸ್ತನಿಗಳು

n          4.5%  ಪಕ್ಷಿಗಳು

n          45.8% ಸರೀಸೃಪಗಳು

n          55.8% ಉಭಯಚರಗಳು

n          33%ರಷ್ಟು ಭಾರತೀಯ ಸ್ಥಳೀಯ ಸಸ್ಯಗಳು ನಶಿಸಿ ಹೋಗಿದ್ದು ಎಲ್ಲಿಯೂ ಕಂಡುಬರುತ್ತಿಲ್ಲ.

ಪ್ರಕೃತಿಯೇ ಉಸಿರು, ಪ್ರಕೃತಿಯನ್ನು ಉಳಿಸಿ ಬೆಳೆಸಿ ಅನ್ನುವ ಸಾಲುಗಳು ಕೇವಲ ಘೋಷಣೆ,  ಮಾತುಗಳಿಗೆ ಸೀಮಿತವಾಗದೇ ಪ್ರಕೃತಿಯ ಉಳಿವಿಗಾಗಿ ನಿಜವಾಗಿಯೂ ಶ್ರಮಿಸುವ ಕಾಲವಿದು. ಇದಾಗಲೇ ಪರಿಸರವಾದಿಗಳು ಪ್ರಕೃತಿಯ ಉಳಿವಿಗೆ ಎಚ್ಚರಿಕೆಯ ಕರೆಘಂಟೆಯನ್ನು ನೀಡಿದ್ದಾಗಿದೆ. ಈ ಅವಕಾಶವೂ ಕೈ ತಪ್ಪಿದರೆ ಆ ಬಳಿಕ ಮಾನವ ಕುಲಕ್ಕೆ ಯಾವ ಅವಕಾಶವೂ ಇಲ್ಲ ಎಂಬುದನ್ನು ಬಹುತೇಕ ವರದಿಗಳು ಸಾರಿ ಹೇಳುತ್ತಿವೆ. ಸರಕಾರಗಳು  ಪ್ರಕೃತಿ, ಜೀವವೈವಿಧ್ಯಗಳ ರಕ್ಷಣೆಗಾಗಿ ಎಷ್ಟೇ ಯೋಜನೆಗಳನ್ನು  ಜಾರಿಗೆ ತಂದರೂ ಪ್ರತೀ ಒಬ್ಬ ಮನುಷ್ಯನೂ  ಪ್ರಕೃತಿಯ ಸಂರಕ್ಷಣೆಯೆಡೆಗೆ ಹೆಜ್ಜೆ ಇರಿಸಿದರೆ ಮಾತ್ರ ಪ್ರಕೃತಿಯೊಂದಿಗೆ ನಾವು ಉಳಿಯಲು ಸಾಧ್ಯ!.

ಪಶ್ಚಿಮ ಘಟ್ಟದಲ್ಲೇ ಹೆಚ್ಚು

ವಿಶ್ವದಲ್ಲಿರುವ 30ಕ್ಕೂ ಹೆಚ್ಚು ಜೀವವೈವಿಧ್ಯದ ಹಾಟ್‌ಸ್ಪಾಟ್‌ಗಳಲ್ಲಿ ಭಾರತ ನಾಲ್ಕು ಹಾಟ್‌ಸ್ಪಾಟ್‌ಗಳನ್ನು ಹೊಂದಿವೆ. ಹಿಮಾಲಯ, ಇಂಡೋ-ಬರ್ಮಾ ಪ್ರದೇಶ, ಪಶ್ಚಿಮ ಘಟ್ಟಗಳು ಹಾಗೂ ಸುಂದರ್‌ಲ್ಯಾಂಡ್‌. ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಸುಮಾರು 325 ಜಾತಿಯ ಪ್ರಭೇದಗಳು ಪಶ್ಚಿಮ ಘಟ್ಟದಲ್ಲೇ ಕಂಡುಬರುತ್ತವೆ. ಇದರಲ್ಲಿ 229 ಸಸ್ಯ ಪ್ರಭೇದಗಳು, 31 ಸಸ್ತನಿ ಪ್ರಭೇದಗಳು, 15 ಪಕ್ಷಿ ಪ್ರಭೇದಗಳು, 43 ಉಭಯಚರಗಳ ಪ್ರಭೇದಗಳು, 5 ಸರೀಸೃಪ ಪ್ರಭೇದಗಳು ಹಾಗೂ ಒಂದು ಮೀನಿನ ಪ್ರಭೇದ ಅಳಿವಿನಂಚಿನಲ್ಲಿದೆ.

~ ವಿಧಾತ್ರಿ ಭಟ್‌, ಉಪ್ಪುಂದ

Advertisement

Udayavani is now on Telegram. Click here to join our channel and stay updated with the latest news.

Next