ತೀರ್ಥಹಳ್ಳಿ: ಸಾಗರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ .ಯಡಿಯೂರಪ್ಪನವರಿಗೆ ಈಡಿಗ ನಾಮಧಾರಿ, ಬಿಲ್ಲವ, ದೀವರು ಹಾಗೂ 26 ಪಂಗಡಗಳ ವತಿಯಿಂದ ಮಾ. 5, ರಂದು ಅದ್ದೂರಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಹರತಾಳು ಹಾಲಪ್ಪ ಹೇಳಿದರು.
ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು
ಈಡಿಗ ಸಮಾಜಕ್ಕೆ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಸರ್ಕಾರದಿಂದ ಕೊಟ್ಟಿರುವ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸುವ ಉದ್ದೇಶದಿಂದ ಹಾಗೂ ಜಾತಿಭೇದ ಮರೆತು ರಾಜಕಾರಣ ಮಾಡಿದ ಹಿರಿಯ ನಾಯಕರಿಗೆ ಸನ್ಮಾನಿಸುವ ಉದ್ದೇಶದಿಂದ ಈ ಸನ್ಮಾನ ನಡೆಸಲಾಗುತ್ತಿದೆ ಎಂದರು.
ಯಡಿಯೂರಪ್ಪನವರ ಸೇವೆ ಎಲ್ಲಾ ಸಮಾಜದವರಿಗೂ ಅನುಕೂಲವಾಗಿದೆ. ನಮ್ಮ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು ಶಕ್ತಿಸಾಗರ ಸಂಗಮದ ಮೂಲಕ ಯಡಿಯೂರಪ್ಪನವರನ್ನು ಸನ್ಮಾನ ಮಾಡುತ್ತಿದ್ದೇವೆ. ಯಡಿಯೂರಪ್ಪ ಅಷ್ಟೇ ಅಲ್ಲದೆ ಬಂಗಾರಪ್ಪನವರು ಕೂಡ ನಮ್ಮ ಸಮಾಜಕ್ಕೆ ಒಳ್ಳೊಳ್ಳೆ ಕೆಲಸ ಮಾಡಿಸಿಕೊಟ್ಟಿದ್ದಾರೆ. ಇಬ್ಬರು ಕೂಡ ನಮ್ಮ ಸಮಾಜದವರು ಮುಖ್ಯಮಂತ್ರಿ ಆಗಿದ್ದರು ಎಂದರು.
ಸುಮಾರು 45000 ಜನ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ತೀರ್ಥಹಳ್ಳಿ ತಾಲೂಕಿನ ಸಮಾಜದ ಬಾಂಧವರು ಪಕ್ಷಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.