ಪೂರ್ಣಚಂದ್ರ ತೇಜಸ್ವಿ ಅವರು ಇಂಗ್ಲಿಷ್ ಭಾಷೆಯ “ಗೆರಾಲ್ಡ್ ಡ್ಯುರೆಲ್’ ಅವರ “ತ್ರಿ ಸಿಂಗಲ್ಸ್ ಟು ಅಡ್ವೆಂಚರ್’ ಪುಸ್ತಕವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಅಂದಹಾಗೆ ಇದು ತೇಜಸ್ವಿಯವರ ಮಿಲನಿಯಂ ಸರಣಿಯ 16ನೇ ಹಾಗೂ ಸರಣಿಯ ಕೊನೆಯ ಪುಸ್ತಕ. ಬೇರೆ ಭಾಷೆಯ ಪುಸ್ತಕವನ್ನು ಕನ್ನಡಕ್ಕೆ ತರ್ಜುಮೆ ಮಾಡುವಾಗ ಮೂಲ ಭಾಷೆ, ಶಬ್ದ, ವಾಖ್ಯೆಗಳ ಯಥಾವತ್ತಾದ ಅರ್ಥವನ್ನು ನೀಡದೇ ಇಲ್ಲಿನ ಭಾಷೆ, ಪ್ರದೇಶಕ್ಕೆ ಹೆಚ್ಚು ಆಪ್ತವಾಗುವಂತೆ ಕೊಂಚ ಬದಲಾವಣೆ ಮಾಡಿ ಓದುಗನಿಗೆ ನೀಡುವುದು ತೇಜಸ್ವಿ ಅವರ ವಿಶೇಷತೆಗಳಲ್ಲೊಂದು. ಇದು ಭಾಷಾಂತರ ಕೃತಿಯೋ ಅಥವಾ ಸ್ವಂತ ಬರೆಹದ ಕೃತಿಯೋ ಎಂದು ಓದುಗ ಪೇಚಿಗೀಡಾಗುವಷ್ಟರ ಮಟ್ಟಿಗೆ ತೇಜಸ್ವಿ ಅವರ ತರ್ಜುಮೆ ಕನ್ನಡ ಭಾಷೆಯಲ್ಲಿ ಮೂಡಿಬಂದಿರುವುದು ಅವರ ಸೃಜನಶೀಲತೆಗೆ ಹಿಡಿದ ಕೈಗನ್ನಡಿ.
ಡ್ಯುರೆಲ್ ಅವರು ದಕ್ಷಿಣ ಅಮೆರಿಕದ ಗಯಾನ ದೇಶದಲ್ಲಿದ್ದ ಅಪೂರ್ವ ಹಾಗೂ ವೀಶೇಷ ಪ್ರಾಣಿ ಪ್ರಭೇದಗಳನ್ನು ಸಂಗ್ರಹಿಸಲು ಹೋಗುವ ಪ್ರಯಾಣ ಮತ್ತು ಅವರ ಪ್ರಾಣಿ ಸಂಗ್ರಹದ ಸ್ವಾರಸ್ಯಕರ ಮಾಹಿತಿ “ಅಡ್ವೆಂಚರ್’ನಲ್ಲಿದೆ. ಹೆಸರೇ ಹೇಳುವ ಹಾಗೆ ಇದೊಂದು ಸಾಹಸಗಳ ಕುರಿತಾದ ಪುಸ್ತಕ. ಆದರೆ ಪುಸ್ತಕದ ಹೆಸರು ಮಾತ್ರ ಸಾಹಸಗಳ ಪ್ರತೀಕವಾಗಿ ಇಟ್ಟಿದ್ದಲ್ಲ. “ಅಡ್ವೆಂಚರ್’ ಎನ್ನುವುದು ಗಯಾನಾದ ಒಂದು ಊರಿನ ಹೆಸರು. ಈ ಹಿಂದೆ ಯುರೋಪ್‌ನಾದ್ಯಂತ ಪ್ರಾಣಿ ಸಂಗ್ರಹಾಲಯಗಳಲ್ಲಿ ದಕ್ಷಿಣ ಅಮೆರಿಕ ಹಾಗೂ ಇತರ ಕಡೆಗಳಲ್ಲಿನ ವಿಚಿತ್ರ ಮತ್ತು ವಿಶೇಷವೆನಿಸುವಂತ ಪ್ರಾಣಿಗಳಿಗೆ ಬಹು ಬೇಡಿಕೆ ಇತ್ತು. ಅಲ್ಲದೇ ಇದನ್ನು ನೋಡಲು ತಂಡೋಪ ತಂಡವಾಗಿ ಯುರೋಪಿಯನ್ ಝೂಗಳಿಗೆ ಮುಗಿಬೀಳುತ್ತಿದ್ದರು.
ಸ್ಮಿತ್, ಇವಾನ್, ಬಾಬ್ ಮತ್ತು ಲೇಖಕರು ಸೇರಿ ನಾಲ್ಕು ಜನ ಗಯಾನಕ್ಕೆ ತೆರಳಿ ಅಲ್ಲಿನ “ಅಡ್ವೆಂಚರ್’ ಎಂಬ ಊರಿನಿಂದ ಆರಂಭವಾಗಿ ಕೊನೆಗೆ ಒಂದು ದೊಡ್ಡ ಹಡಗಿನ ತುಂಬ ಪ್ರಾಣಿ ಸಂಗ್ರಹಿಸಿ ತರುವ ಪ್ರಸಂಗ ಮತ್ತು ಅಲ್ಲಿ ಎದುರಾಗುವ ಸಾಹಸ, ಮುಜುಗರ, ನಿರಾಸೆ, ಹಾಸ್ಯ ಪ್ರಸಂಗಗಳು, ಕಂಡು ಕೇಳರಿಯದ ಪ್ರಾಣಿಗಳ ಬಗ್ಗೆ ತಿಳಿಯುತ್ತಾ ಹೋದಂತೆ ಓದುಗನ ಕುತೂಹಲದ ಹರವು ಇನ್ನಷ್ಟು ವಿಸ್ತರಿಸುತ್ತದೆ. ದ. ಅಮೆರಿಕದ ದಟ್ಟಡವಿಗಳಲ್ಲಿ ಕಾಣಸಿಗುವ ವಿಶೇಷ ಸ್ಕೈವಿಂಕೀಸ್, ಸೋಲ್ಜರ್ ಇಲಿ, ಹೌಲರ್ ಮಂಗ, ಬಾರಿಮ್, ಖೇಮ್ಯಾನ್, ಕಫೈಬರ, ಕ್ರ್ಯಾಬ್‌ಡಾಗ್, ಪೀಪಾ ಕಪ್ಪೆ, ಪಿಂಪಾಲ ಹಾಗ್, ಎಲೆಕ್ಟ್ರಿಕ್ ಈಲ್ ಇನ್ನಿತರ ವನ್ಯಜೀವಿಗಳು, ಅವುಗಳ ವರ್ತನೆ, ವಿಶಿಷ್ಟ ನಡವಳಿಕೆ ಮತ್ತು ಮನುಷ್ಯನೊಂದಿಗೆ ಅವುಗಳು ಎಷ್ಟು ಆತ್ಮೀಯ ಹಾಗೂ ಆಪ್ತವಾದವುಗಳು ಎಂದು ಲೇಖಕರು ಇಲ್ಲಿ ಮನಮುಟ್ಟುವಂತೆ ತೋರಿಸಿಕೊಟ್ಟಿದ್ದಾರೆ.
ಲೇಖಕರು ಪ್ರಾಣಿಗಳನ್ನು ಸಂಗ್ರಹಿಸುವಾಗ ಕೆಲವೊಮ್ಮ ತಾವೇ ಖುದ್ದಾಗಿ ಹಿಡಿಯುವುದು ಮತ್ತು ಅಲ್ಲಿನ ಆದಿವಾಸಿಗಳು ಸಂಗ್ರಹಿಸಿ ಇಟ್ಟಿದ್ದ ವಿಶೇಷ ಪ್ರಾಣಿಗಳನ್ನು ದುಡ್ಡಿಗೆ ಕೊಂಡು ಸಂಗ್ರಹಿಸುತ್ತಾರೆ. ಬಾರಿಮ್ ಮತ್ತು ಖೇಮ್ಯಾನ್‌ಗಳನ್ನು ಹಿಡಿಯುವ ಸನ್ನಿವೇಶಗಳು ಅತ್ಯಂತ ಸ್ವಾರಸ್ಯಕರವಾಗಿವೆ. ಬಾರಿಮ್ (ಆ್ಯಂಟ್ ಈಟರ್) ಪ್ರಪಂಚದಲ್ಲೇ ಅತಿದೊಡ್ಡ ಇರುವೆ ಭಕ್ಷಕ ಪ್ರಾಣಿ. ಅದುಇಲಿಯಂತಿರುವ ಸ್ವಲ್ಪ ದೊಡ್ಡಗಾತ್ರದ ಪ್ರಾಣಿ. ನೋಡಲು ಸಾಮಾನ್ಯವಾಗಿದ್ದರು ಸಿಡುಕು ಸ್ವಭಾವ ಮತ್ತು ಮಾನವನ ಕೈಗೆ ಸಿಗದಂತೆ ಪರಾರಿಯಾಗುವ ಚಾಲಾಕಿ.
ಪ್ರಾಣಿಯನ್ನು ಲೇಖಕರು, ಬಾಬ್ ಮತ್ತು ಸ್ಥಳೀಯನೊಬ್ಬ ಸೇರಿ ಹಿಡಿಯವ ಪ್ರಸಂಗ ಓದುಗನ್ನು ನಗಿಸುತ್ತದೆ. ಇನ್ನೊಂದು ಖೇಮ್ಯಾನ್ ದ. ಅಮೆರಿಕದ ಕರನಾಂಬೊ ಎಂಬಲ್ಲಿ ಮೊಸಳೆಗಳಿಗೆ ಖೇಮ್ಯಾನ್ ಎಂದು ಕರೆಯುತ್ತಿದ್ದರು. ಯುರೋಪ್‌ನಲ್ಲಿ ಸಿಗುತ್ತಿದ್ದ ಮೊಸಳೆಗಳಿಗಿಂತ ಇದು ಭಿನ್ನವಾಗಿರುವ ಕಾರಣಕ್ಕೆ ಖೇಮಾನ್‌ನನ್ನು ಸೆರೆ ಹಿಡಿಯುವ ಸಾಹಸಕ್ಕೆ ಮುಂದಾಗುತ್ತಾರೆ. ಇಲ್ಲಿ ಲೇಖಕರು ಸ್ಥಳೀಯನಾದ ಮ್ಯಾಕ್‌ಟರ್ಕ್‌ನ ಸಹಾಯದಿಂದ ಅತ್ಯಂತ ಉಪಾಯದಿಂದ ಹಿಡಿಯುವುದು ಬಲು ಸ್ವಾರಸ್ಯಕರವಾಗಿದೆ.
ಹೀಗೆ ಈ ಪುಸ್ತಕ ಯಾವುದೇ ವಯೋಮಾನದವರಿಗೂ ಇಷ್ಟವಾಗುವಂಥದ್ದು. ಇಲ್ಲಿ ನಾವು ವನ್ಯ ಜೀವಿಗಳ ಬಗ್ಗೆ ಹಲವು ಕೌತುಕಗಳನ್ನು ಅರಿಯಲು ಸಾಧ್ಯವಾಗುತ್ತದೆ. ಓದುಗನಲ್ಲಿ ವನ್ಯ ಜೀವಿಗಳ ಬಗ್ಗೆ ವಿಶೇಷ ಕುತೂಹಲ, ಕಾಳಜಿ ಮತ್ತು ಕಾಡುಗಳ ಪ್ರವಾಸದ ಆಸೆಯನ್ನು ಬಿತ್ತುತ್ತದೆ. ಅಲ್ಲದೇ ಇದೇ ರೀತಿಯ ಇನ್ನೂ 15 ಮಿಲನಿಯಂ ಸರಣಿಗಳಿವೆ ಒಂದೊಂದು ಸರಣಿಯೂ ಒಂದೊಂದು ವಿಷಯಕ್ಕೆ ಸಂಬಂಧಪಟ್ಟ ಕೌತುಕಗಳನ್ನು ಬಿಚ್ಚಿಡುತ್ತವೆ.
ಶಿವಾನಂದ ಎಚ್. ಗದಗ