ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಇಷ್ಟೊಂದು ಕೆಟ್ಟದಾಗಿ ಸೋಲನುಭವಿಸುತ್ತೇನೆ ಎಂದುಕೊಂಡಿರಲಿಲ್ಲ. ನಾನು ಪ್ರತೀ ಹಳ್ಳಿಗಳಿಗೆ ಹೋದಾಗ ಜನರೆಲ್ಲ ತುಂಬಾ ಪ್ರೀತಿ ತೋರಿಸಿದರು. ಆದರೆ ನನ್ನ ಸೋಲಿಗೆ ನಮ್ಮ ಪಕ್ಷದವರೂ ಕೂಡ ಕಾರಣರಾದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಅಂದರೆ ತಾಯಿ ಇದ್ದ ಹಾಗೆ. ಕ್ಷುಲ್ಲಕ ಕಾರಣಕ್ಕೆ ಪಕ್ಷ ದ್ರೋಹ ಮಾಡಬಾರದು. ಅವರಿಗೆ ಇಷ್ಟ ಇಲ್ಲ ಅಂದರೆ ಪಕ್ಷ ಬಿಟ್ಟು ಹೋಗಬೇಕು. ಪಕ್ಷ ಮುಖ್ಯವೇ ಹೊರತು ವ್ಯಕ್ತಿಗಳಲ್ಲ. ಪಕ್ಷಕ್ಕೆ ಯಾವುದೇ ವ್ಯಕ್ತಿಗಳು ಅನಿವಾರ್ಯವಲ್ಲ ಎಂದು ಸೋಲಿನ ಬೇಸರ ತೋಡಿಕೊಂಡರು.
ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯವಾಗಿ ಪುನರ್ಜನ್ಮ ಜನ್ಮ ಕೊಟ್ಟಂತಹ ಕ್ಷೇತ್ರ. ಅದೇ ರೀತಿ ರಾಜಕೀಯವಾಗಿ ಅತಿಯಾದ ವೇದನೆ ನೀಡಿದ ಕ್ಷೇತ್ರವೂ ಹೌದು.
ಇದನ್ನೂ ಓದಿ:ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಇನ್ನೂ ತೀರ್ಮಾನಿಸಿಲ್ಲ: ಸಿದ್ದರಾಮಯ್ಯ
ನನ್ನ ಸೋಲಿಗೆ ಇನ್ನೂ ಅನೇಕ ಕಾರಣಗಳಿವೆ, ಅದನ್ನು ಈಗ ಹೇಳುವುದಿಲ್ಲ. ನನ್ನನ್ನು ಸೋಲಿಸುವುದಕ್ಕೆಂದೇ ಜೆಡಿಎಸ್ ಮತ್ತು ಬಿಜೆಪಿಯವರು ಒಳ ಒಪ್ಪಂದ ಮಾಡಿಕೊಂಡರು.ನನ್ನ ವಿರುದ್ದ ಬಿಜೆಪಿಯಿಂದ ದುರ್ಬಲ ಅಭ್ಯರ್ಥಿಯನ್ನು ಹಾಕಿದರು. ಸಿಎಂ ವಿರುದ್ದ ಎಂತಹ ಪ್ರಬಲವಾದ ಅಭ್ಯರ್ಥಿಯನ್ನು ಹಾಕಬೇಕಿತ್ತು. ಆದರೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತವನನ್ನು ತಂದು ನನ್ನ ವಿರುದ್ದ ಅಭ್ಯರ್ಥಿಯನ್ನಾಗಿ ಹಾಕಿದರು. ಇವರದ್ದು ಎಂತಹ ಒಳಸಂಚು ಇರಬೇಕು ಎಂಬುದನ್ನು ಯೋಚನೆ ಮಾಡಿ ಎಂದರು.
ಅಷ್ಟೇ ಅಲ್ಲದೇ ನಮ್ಮವರಲ್ಲೇ ಕೆಲವರಿಗೆ ನಾನು ಮತ್ತೆ ಮುಖ್ಯಮಂತ್ರಿ ಆಗುವುದು ಬೇಕಿರಲಿಲ್ಲ. ಹೀಗಾಗಿ ನನ್ನನ್ನು ಸೋಲುವಂತೆ ಮಾಡಿದರು ಎಂದರು.
ಈ ವೇಳೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನೀವೇ ಬನ್ನಿ ಎಂದು ಕರೆದ ಕಾರ್ಯಕರ್ತನಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇನ್ನೊಂದು ಬಾರಿ ಚೂರಿ ಹಾಕಿದರೆ ಏನು ಮಾಡುವುದು ಎಂದು ಪ್ರಶ್ನಿಸಿದರು.
ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಯ ಪ್ರಚಾರಕ್ಕೆ ನಾನೇ ಬರುತ್ತೇನೆ.ಆಗ ಪಕ್ಷದ ಚಿಹ್ನೆಯ ಜೊತೆಗೆ ಪ್ರಚಾರಕ್ಕೆ ಬರುತ್ತೇನೆ ಎಂದರು.