ಹೊಸದಿಲ್ಲಿ: ಭಾರತೀಯ ಸೇನೆಯ ಕ್ಷಿಪಣಿ ವ್ಯವಸ್ಥೆಯು ಅತ್ಯಂತ ಸುರಕ್ಷಿತವಾಗಿದೆ ಎಂದು ರಕ್ಷಣ ಸಚಿವ ರಾಜನಾಥ ಸಿಂಗ್ ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಭಾರತೀಯ ಕ್ಷಿಪಣಿ ಯೊಂದು ಆಕಸ್ಮಿಕವಾಗಿ ಪಾಕಿಸ್ಥಾನ ದೊಳಗೆ ಹೋಗಿ ಬಿದ್ದಿದ್ದು ವಿಷಾದನೀಯ ಎಂದ ಅವರು, “ಭಾರತದ ಸುರಕ್ಷತ ಕಾರ್ಯ ವಿಧಾನಗಳು ಮತ್ತು ಶಿಷ್ಟಾಚಾರಗಳು ಅತ್ಯಂತ ಉನ್ನತ ಗುಣಮಟ್ಟದ್ದಾಗಿವೆ.
ಹಾಗೆಯೇ ನಮ್ಮ ಪಡೆಗಳು ಕೂಡ ಉತ್ತಮ ರೀತಿಯಲ್ಲಿ ಮತ್ತು ಶಿಸ್ತುಬದ್ಧ ವಾಗಿ ತರಬೇತಿ ಪಡೆದಿವೆ. ಕ್ಷಿಪಣಿ ಪಾಕ್‌ನೊಳಗೆ ಬಿದ್ದಿರುವ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ತನಿಖಾ ವರದಿ ಬಂದ ಅನಂತರ ನಮ್ಮಲ್ಲಿ ಯಾವುದೇ ನ್ಯೂನತೆ ಇದ್ದರೆ ಅದನ್ನು ಸರಿಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ’ ಎಂದು ತಿಳಿಸಿದರು. ಸೇನೆಯ ಶಸ್ತ್ರಾಸ್ತ್ರಗಳ ಸುರಕ್ಷತೆ ಬಗ್ಗೆ ಸರಕಾರವು ಆದ್ಯತೆ ನೀಡುವುದಾಗಿಯೂ ಅವರು ಹೇಳಿದರು.
ಇದನ್ನೂ ಓದಿ:ಮೀಡಿಯಾ ಒನ್ ಚಾನೆಲ್ ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ
ರಾಜನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ ರುವ ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮಹೂ¾ದ್ ಖುರೇಶಿ, ಆ ಹೇಳಿಕೆಯನ್ನು ಅಪೂರ್ಣ ಮತ್ತು ಅತೃಪ್ತಿದಾಯಕ ಎಂದಿದ್ದಾರೆ. ಜಂಟಿ ತನಿಖೆಗೆ ಒತ್ತಾಯಿಸಿದ್ದಾರೆ.
ಹುನ್ನಾರವಿಲ್ಲವೆಂದ ಅಮೆರಿಕ
ಮಾ.9ರಂದು ಭಾರತದಿಂದ ಪಾಕಿಸ್ಥಾನಕ್ಕೆ ಕ್ಷಿಪಣಿಯೊಂದು ಹೋಗಿ ಬಿದ್ದಿರುವ ಬಗ್ಗೆ ಅಮೆರಿಕ ಮಾತನಾಡಿದೆ. “ಭಾರತ ಹೇಳುವಂತೆ ಇದೊಂದು ಆಕಸ್ಮಿಕ ಘಟನೆಯೆನ್ನುವುದನ್ನು ಬಿಟ್ಟು ಬೇರೆ ಯಾವ ಅನುಮಾನವೂ ಕಾಣುತ್ತಿಲ್ಲ. ಘಟನೆ ಬಗ್ಗೆ ತನಿಖೆ ನಡೆಸಿ ಎಂದು ನಾವು ಭಾರತಕ್ಕೆ ಮನವಿ ಮಾಡುತ್ತೇವೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.