Advertisement

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

12:49 AM Sep 11, 2020 | mahesh |

ನಿಮಗೆ ಕಾರ್ಯಕ್ರಮವೊಂದರಲ್ಲಿ ಹೊಸಬರು ಪರಿಚಿತರಾಗುತ್ತಾರೆ ಎಂದುಕೊಳ್ಳಿ. ಅವರು ನಿಮ್ಮನ್ನು ಕೇಳುವ ಮೊದಲ ಪ್ರಶ್ನೆಯೇ ನೀವೇನು ಕೆಲಸ ಮಾಡುತ್ತೀರಿ ಎಂದು. ಅಂದರೆ ನೀವು ಯಾವ ಕೆಲಸದಲ್ಲಿದ್ದೀರಿ ಎನ್ನುವುದರ ಮೇಲೆಯೇ ಎದುರಿನ ವ್ಯಕ್ತಿಯ ಸುಪ್ತಮನಸ್ಸು ನಿಮಗೆಷ್ಟು ಮಹತ್ವ, ಮರ್ಯಾದೆ ಕೊಡಬೇಕು ಎಂದು ನಿರ್ಧರಿಸಿಬಿಡುತ್ತದೆ. ಇದು ಮನುಷ್ಯನ ಬದುಕಿನ ದುರಂತ.

Advertisement

“ನನಗೆ ಕೆಲಸದ ಮೇಲೆ ಆಸಕ್ತಿಯೇ ಬರುತ್ತಿಲ್ಲ. ಪ್ರೀತಿ ಹುಟ್ಟುತ್ತಿಲ್ಲ. ಕಚೇರಿಯ ಕೆಲಸ ಸಂತೃಪ್ತಿಯೇ ನೀಡುತ್ತಿಲ್ಲ. ನಾವು ಮಾಡುವ ಕೆಲಸದಲ್ಲಿ ನೆಮ್ಮದಿ ಕಂಡುಕೊಳ್ಳುವುದು ಹೇಗೆ?’. ಇಂಥದ್ದೊಂದು ವಿಶ್ವವ್ಯಾಪಿಯಾದಂಥ ಸಮಸ್ಯೆ ಯನ್ನು ನನ್ನೆದುರಿಟ್ಟ ಜೇಮ್ಸ್‌! ಕೋವಿಡ್‌ ಆರಂಭ ವಾದಾಗಿನಿಂದ ನಾನು ಸಂಜೆಯ ಪ್ರವಚನಗಳನ್ನು ಆನ್‌ಲೈನ್‌ ಮಾಡಿಬಿಟ್ಟಿ ದ್ದೇನೆ. ಆನ್‌ಲೈನ್‌ ಮಾತುಕತೆಗಳಲ್ಲಿ ಅದೇಕೋ ಜನ ವೈಯಕ್ತಿಕ ಸಮಸ್ಯೆಗಳನ್ನು ಹೆಚ್ಚು ಮುಚ್ಚುಮರೆ ಯಿಲ್ಲದೇ ಎದುರಿಡುತ್ತಾರೆ. ಒಂದು ದಿನ ಸಂಜೆ ಇಂಥದ್ದೇ ವೀಡಿಯೋಕಾಲ್‌ನಲ್ಲಿ ಜೇಮ್ಸ… ಈ ಪ್ರಶ್ನೆ ಕೇಳಿದಾಗ, ಆ ವೀಡಿಯೋಕಾಲ್‌ನಲ್ಲಿ ಇದ್ದವರೆಲ್ಲ ಕುತೂಹಲದಿಂದ ನನ್ನತ್ತ ನೋಡಲಾರಂಭಿಸಿದ್ದನ್ನು ಗಮನಿಸಿದೆ. ಅಂದರೆ, ಅವರೆಲ್ಲರಿಗೂ ಈ ಪ್ರಶ್ನೆಗೆ ಉತ್ತರ ಬೇಕಿತ್ತು ಎಂದರ್ಥ.

“ಜೇಮ್ಸ… ನೀನು ಕೆಲಸದಲ್ಲಿ ನೆಮ್ಮದಿಯನ್ನೇಕೆ ಹುಡುಕುತ್ತಿ ದ್ದೀಯಾ?” ಎಂದು ಪ್ರಶ್ನಿಸಿದೆ. ನನ್ನ ಪ್ರಶ್ನೆ ಅರ್ಥವಾಗದೇ ಅವನು ಸುಮ್ಮನೇ ದಿಟ್ಟಿಸಿ ನೋಡಿದ. ನಾನು ಅದೇ ಪ್ರಶ್ನೆ ಯನ್ನೇ ಇನ್ನೊಂದು ರೀತಿಯಲ್ಲಿ ಕೇಳಿದೆ-“ನೀನು ಮಾಡುತ್ತಿ ರುವ ಕೆಲಸದಲ್ಲಿ ನೆಮ್ಮದಿ ಸಿಗಬೇಕು ಎಂದರೆ ಏನು ಬದಲಾವಣೆಯಾಗಬೇಕು?’  ಅದಕ್ಕೆ ಕೂಡಲೇ ಅವನಂದ-“ನನಗೆ ಬಡ್ತಿ ದೊರೆಯಬೇಕು’  “ಬಡ್ತಿ ದೊರೆತರೆ ನಿನ್ನ ಕೆಲಸದ ವೈಖರಿಯಲ್ಲಿ ದೊಡ್ಡ ಬದಲಾವಣೆಯೇನಾದರೂ ಆಗುತ್ತದೆಯೇ? ಅದೇ ಕಚೇರಿ, ಅದೇ ಕೆಲಸ, ಅವೇ ಮುಖಗಳೇ ಅಲ್ಲವೇ? ಅದ್ಹೇಗೆ ನೆಮ್ಮದಿ ಸಿಗುತ್ತದೆ?’ಎಂದು ಪ್ರಶ್ನಿಸಿದೆ.  ಜೇಮ್ಸ್‌ ಅಂದ-“ಆಗ ನನ್ನ ಸಂಬಳ ಹೆಚ್ಚಾಗುತ್ತೆ, ಸಮಾಜದಲ್ಲೊಂದು, ಮುಖ್ಯವಾಗಿ ಮನೆಯಲ್ಲೊಂದು ಮರ್ಯಾದೆ ಸಿಗುತ್ತದೆ!’ ಅವನ ಈ ಉತ್ತರ ನನಗೆ ಕ್ಷಣಕಾಲ ಬೇಸರ ಮೂಡಿಸಿದ್ದು ಸುಳ್ಳಲ್ಲ. ಏಕೆಂದರೆ ನಮ್ಮ ಜೀವನವೇ ಹೀಗಾಗಿಬಿಟ್ಟಿದೆ. ನಾವು ನಿಜಕ್ಕೂ ಎಂಥವರು ಎನ್ನುವುದಕ್ಕಿಂತಲೂ ನಾವೇನು ಕೆಲಸ ಮಾಡುತ್ತೇವೆ, ಯಾವ ಹುದ್ದೆಯಲ್ಲಿದ್ದೇವೆ ಎನ್ನುವುದರ ಆಧಾರದ ಮೇಲೆಯೇ ನಮ್ಮೊಂದಿಗೆ ವ್ಯವಹರಿಸಲಾಗುತ್ತದೆ.

ಹಾಯ್‌, ನೀವೇನು ಮಾಡ್ತಿರುವುದು?
ನಿಮಗೆ ಕಾರ್ಯಕ್ರಮವೊಂದರಲ್ಲಿ ಹೊಸಬರು ಪರಿಚಿತ ರಾಗುತ್ತಾರೆ ಎಂದುಕೊಳ್ಳಿ. ಅವರು ನಿಮ್ಮನ್ನು ಕೇಳುವ ಮೊದಲ ಪ್ರಶ್ನೆಯೇ ನೀವೇನು ಮಾಡುತ್ತೀರಿ? ಎಂದು. ಎದುರಿನವನ ನಿರೀಕ್ಷೆಗೂ ಮೀರಿದ ಆರ್ಥಿಕ ಸ್ತರ ಅಥವಾ ಹು¨ªೆಯಲ್ಲಿ ನೀವಿದ್ದೀರೆಂದರೆ, ನೀವು ಹಿಂಜರಿಕೆಯಿಲ್ಲದೇ ಉತ್ತರಿಸುತ್ತೀರಿ. ಆಗ ನಿಮ್ಮೊಂದಿಗೆ ಆತ ವ್ಯವಹರಿಸುವ ರೀತಿಯೇ ಬದಲಾಗುತ್ತದೆ. ಆತನ ನಿರೀಕ್ಷೆಗೂ ಕಡಿಮೆ ಎನ್ನಿಸುವಂಥ ಕೆಲಸದಲ್ಲಿದ್ದೀರೆಂದರೆ, ಒಂದೆರಡು ಮಾತಾಡಿ ಮುಂದೆ ಸಾಗುತ್ತಾನೆ. ಈ ಕಾರಣಕ್ಕಾಗಿಯೇ, ನಮ್ಮ ಕೆಲಸಗಳನ್ನು ನಾವು ಎದುರಿನವರಿಗೆ ಉತ್ಪ್ರೇಕ್ಷೆ ಮಾಡಿ ಹೇಳುವುದು!

ನಾವೂ ಅಷ್ಟೇ, ಎದುರಿನವ ಏನು ಮಾಡುತ್ತಾನೆ, ಆತ ಏನು ಧರಿಸಿದ್ದಾನೆ, ಆತ ಕಾರಿನಲ್ಲಿ ಬಂದಿದ್ದಾನೆಯೋ, ಬೈಕೇರಿ ಬಂದಿದ್ದಾನೆಯೋ ಎನ್ನುವುದನ್ನೆಲ್ಲ ಸುಪ್ತಮನಸ್ಸಿನಲ್ಲಿ ಲೆಕ್ಕ ಹಾಕಿ ಆತನೊಂದಿಗೆ ಹೇಗೆ ನಡೆದುಕೊಳ್ಳಬೇಕು, ಎಷ್ಟು ಮಾತನಾಡಬೇಕು, ಎಷ್ಟು ಗೌರವ ಕೊಡಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ.

Advertisement

ಹೀಗೆ ನಾವು ಮಾಡುವ ಕೆಲಸ, ನಮ್ಮ ಆರ್ಥಿಕ ಸ್ತರದ ಆಧಾರದ ಮೇಲೆಯೇ ಎದುರಿನವರು ನಮ್ಮನ್ನು ಅಳೆಯುತ್ತಾ ರಾದ್ದರಿಂದ, ನಿರಂತರವಾಗಿ ಜನರಿಗೆ ತಮ್ಮನ್ನು ನಾವು ರುಜುವಾತು ಮಾಡಿಕೊಳ್ಳಬೇಕಾದ ಒತ್ತಡ ಮನಸ್ಸಿನಲ್ಲಿ ತಹತಹಿ ಸುತ್ತಲೇ ಇರುತ್ತದೆ. ಜನರು ಹಣವಿಲ್ಲದಿದ್ದರೂ ಸಾಲ ಮಾಡಿ ಕಾರು ಖರೀದಿಸುವುದು, ಮನೆಯ ತುಂಬಾ ಸಾಮಾನು ಗಳನ್ನು ತುಂಬಿಕೊಳ್ಳುವುದು, ಮನೆ ಖರೀದಿಸುವುದು ಏತಕ್ಕಾಗಿ ಎಂದುಕೊಂಡಿರಿ?

ನಮ್ಮನ್ನು ಜನರು ಪ್ರೀತಿಸಬೇಕೆಂದರೆ, ಗೌರವಿಸ ಬೇಕೆಂದರೆ, ನಮ್ಮ ಮಾತುಗಳನ್ನು ಕೇಳಿಸಿಕೊಳ್ಳಬೇಕೆಂದರೆ, ನಮ್ಮೊಂದಿಗೆ ಉತ್ತಮವಾಗಿ ವರ್ತಿಸ ಬೇಕೆಂದರೆ ಹಣ-ಅಧಿಕಾರದಿಂದ ಮಾತ್ರ ಸಾಧ್ಯ ಎನ್ನುವ ಭಾವನೆಯೇ ನಮ್ಮಲ್ಲಿ ನಿರಂತರ ಅಶಾಂತಿ ಮನೆಮಾಡುವಂತೆ ಮಾಡಿರುತ್ತದೆ. ಕೆಲಸದಲ್ಲಿ ಆಸಕ್ತಿ ಹುಟ್ಟುತ್ತಿಲ್ಲ, ನೆಮ್ಮದಿ ಸಿಗುತ್ತಿಲ್ಲ ಎನ್ನುವ ಬಹುತೇಕರ ವೇದನೆಯ ಹಿಂದೆ…ಆ ಕೆಲಸ, ಆ ಸಂಬಳ ಸಮಾಜದಲ್ಲಿ ನನಗೆ ಒಂದು ಘನತೆ ಯನ್ನು, ಘನ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಿಲ್ಲ, ಎದುರಿನವರ ಕಣ್ಣಲ್ಲಿ, ಮನೆಯವರ ಕಣ್ಣಲ್ಲಿ ಗೌರವ ಭಾವನೆಯನ್ನು ಹುಟ್ಟುಹಾಕುತ್ತಿಲ್ಲ ಎನ್ನುವ ನೋವು ಅಧಿಕವಾಗಿರುತ್ತದೆ.

ಹಣದ ಆಸೆ ಸ್ವಾರ್ಥವಲ್ಲ, ದೌರ್ಬಲ್ಯ
ಈ ಕಾರಣಕ್ಕಾಗಿಯೇ ಹಣ, ಅಧಿಕಾರದ ಹಿಂದೆ ಓಡುವ ವರನ್ನು ಯಾರಾದರೂ ಸ್ವಾರ್ಥಿಗಳು ಎಂದು ಕರೆದರೆ ನಾನು ಪೂರ್ಣವಾಗಿ ಒಪ್ಪುವುದಿಲ್ಲ. ಬಹುತೇಕರು ಸ್ವಾರ್ಥಿಗಳಾಗಿ ರುವುದಿಲ್ಲ. ಅವರು ಅಧಿಕಾರಕ್ಕಾಗಿ ಹಪಹಪಿಸು ವುದು, ಅದು ಸಮಾಜದಲ್ಲಿ ತಂದುಕೊಡುವ ಗೌರವಕ್ಕಾಗಿಯಷ್ಟೇ.

ಬಾಲ್ಯದಲ್ಲೇ ರಚನೆಯಾಗುತ್ತದೆ ಬದುಕಿನ ನೀಲನಕ್ಷೆ
ಹೌದು, ಮನುಷ್ಯನ ಬದುಕಿನ ನೀಲನಕ್ಷೆ ಯಿರುವುದು ಆತನ ಬಾಲ್ಯದಲ್ಲಿಯೇ. ಇತ್ತೀಚೆಗೆ ನಾನು ಕೆನಡಾದ ಮನಃಶಾಸ್ತ್ರಜ್ಞ ಜೋರ್ಡನ್‌ ಪೀಟರ್ಸನ್‌ ಅವರ ಮಾತುಗಳನ್ನು ಆಲಿಸುತ್ತಿದ್ದೆ. ಯಾವ ಮಕ್ಕಳು ಬಾಲ್ಯದಲ್ಲಿ ಪೋಷಕರಿಂದಾಗಲಿ, ಮಿತ್ರರಿಂ ದಾಗಲಿ ಅವಗಣನೆಗೆ ಗುರಿಯಾಗಿ ರುತ್ತಾರೋ ಅವರು ಮುಂದೆ ತಮ್ಮಲ್ಲಿರುವ ಈ ಅಭಾವವನ್ನು ತುಂಬಿಕೊಳ್ಳಲು ಅಧಿಕಾರ, ಸ್ತರಕ್ಕಾಗಿ ಹಪಹಪಿಸುವುದು ಅಧಿಕ ಎನ್ನುತ್ತಾರವರು. ಇದಕ್ಕೆ ಇನ್ನೊಂದು ಅರ್ಥವೂ ಇದೆ. ಹಣ, ಅಧಿಕಾರಕ್ಕಾಗಿ ಹಂಬಲಿಸುವ ವರನ್ನು ನಾವು ಸ್ವಾರ್ಥಿಗಳು, ದುಷ್ಟರು ಎಂದೋ ನೋಡುವ ಬದಲು ಅವರನ್ನು ಸಹಾನುಭೂತಿಯಿಂದಲೂ ನೋಡಬೇಕು!

ದುರಂತವೆಂದರೆ, ಇಂದು ಬಹುತೇಕರ ಬಾಲ್ಯವು ಈ ರೀತಿಯ ಅವಗಣನೆ, ಪ್ರೀತಿ- ಗೌರವದ ಅಭಾವದಿಂದಲೇ ತುಂಬಿರುತ್ತದೆ. ಆ ನಿರ್ಯಾತವನ್ನು ಕೊನೆಗಾಣಿಸುವ ಪ್ರಯತ್ನಗಳೆಲ್ಲ ವಿಫ‌ಲವಾಗುತ್ತಾ ಹೋದಂತೆ, ಇನ್ನು ತನ್ನಿಂದ ಏನೂ ಸಾಧಿಸಲಾಗದು ಎಂಬ ಭಾವನೆ ಬೆಳೆಯುತ್ತಾ ಹೋದಂತೆ ವ್ಯಕ್ತಿಯಲ್ಲಿ ಕೀಳರಿಮೆ ಹೆಚ್ಚಾಗುತ್ತದೆ, ನೆಮ್ಮದಿ ಮರೀಚಿಕೆಯೆಂದೆನಿಸ ಲಾರಂಭಿಸುತ್ತದೆ. ಕೆಲಸ ಖುಷಿ ಕೊಡುತ್ತಿಲ್ಲ ಎನ್ನುವ ಅಸಮಾಧಾನ ಹೆಚ್ಚುತ್ತಾ ಹೋಗುತ್ತದೆ.

ಹಾಗಿದ್ದರೆ ಇದಕ್ಕೆ ಪರಿಹಾರವೇನು? ಪರಿಹಾರ ಒಬ್ಬರಿಂದ ಒದಗಿಸುವುದಕ್ಕೆ ಸಾಧ್ಯವಿಲ್ಲ. ಇಡೀ ಮಾನವ ಕುಲದ ಮನಃಸ್ಥಿತಿಯೇ ಅದಕ್ಕಾಗಿ ಬದಲಾಗಬೇಕು. ಮಕ್ಕಳನ್ನು ಅವಗಣಿಸದೇ ಅವರಲ್ಲಿ ಅತೀವ ಕೀಳರಿಮೆ ಹುಟ್ಟಿಕೊಳ್ಳದಂತೆ ಅವರನ್ನು ಪ್ರೀತ್ಯಾದರಗಳಿಂದ ಕಾಣಬೇಕು. ವ್ಯಕ್ತಿಯೊಬ್ಬ ಯಾವುದೇ ಕೆಲಸದಲ್ಲಿರಲಿ, ಆತ ಎಷ್ಟೇ ಹಣ ಗಳಿಸಿರಲಿ ಆತನನ್ನು ಗೌರವದಿಂದ ಕಾಣುವಂತಾಗಬೇಕು. ಈ ಬದಲಾವಣೆಗೆ ನಾವೆಲ್ಲ ಸಿದ್ಧರಿದ್ದೇವೆಯೇ?

ಜೆನ್‌ ಕೆಲ್ಸಂಗ್‌ ರಿಗ್ವಾ, ಬೌದ್ಧ ಭಿಕ್ಕು

Advertisement

Udayavani is now on Telegram. Click here to join our channel and stay updated with the latest news.

Next