ಚಿಕ್ಕಮಗಳೂರು: ನಾನು ಹಿಂದೆ ಗೃಹ ಸಚಿವನಾಗಿದ್ದಾಗ ಪೊಲೀಸರಿಗೆ ಗೃಹ ಯೋಜನೆ ತಂದಿದ್ದೆ, ಎಲ್ಲಾ ಪೊಲೀಸರಿಗೂ ಮನೆ ನೀಡಬೇಕು ಎನ್ನವುದು ನಮ್ಮ ಉದ್ದೇಶ, ಈಗಾಗಲೇ 10 ರಿಂದ 15 ಸಾವಿರ ಮನೆ ಕಟ್ಟಿದ್ದೇವೆ. ಪೊಲೀಸರು ವಾಸವಾಗಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಎಲ್ಲಾ ಪೊಲೀಸರಿಗೂ ಮನೆ ನೀಡಬೇಕೆನ್ನುವುದು ನಮ್ಮ ಉದ್ದೇಶವಾಗಿದ್ದು ಅದನ್ನು ಮುಂದುವರಿಸುತ್ತೇವೆ ಎಂದರು.
ಈಗಾಗಲೇ ಶೇ.40ರಷ್ಟು ಸಿಬ್ಬಂದಿಗಳಿಗೆ ಮನೆ ನೀಡಿದ್ದೇವೆ. ಶೇ.100ರಷ್ಟು ಸಿಬ್ಬಂದಿಗೆ ಮನೆ ನೀಡಬೇಕೆಂಬುದು ನಮ್ಮ ಉದ್ದೇಶ, ಹಂತ ಹಂತವಾಗಿ ಎಲ್ಲ ಪೊಲೀಸರಿಗೂ ಮನೆ ನೀಡುತ್ತೇವೆ ಎಂದರು.
ಕೋವಿಡ್ ಆತಂಕದ ನಡುವೆ ಹೊಸ ವರ್ಷ ಆಚರಣೆ ಬರುತ್ತಿದ್ದು, ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆದಿದ್ದೇನೆ. ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ದತ್ತಜಯಂತಿ ಸಂಬಂಧ ಇಲಾಖೆಯಿಂದ ಏನು ಆಗಬೇಕೆಂದು ಚರ್ಚಿಸಿದ್ದೇನೆ. ದತ್ತಜಯಂತಿ ಶಾಂತಿಯುತಾಗಬೇಕು ಎನ್ನುವುದು ನಮ್ಮ ಉದ್ದೇಶ. ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಬೆಳಗಾವಿ ಮಹಿಳೆ ವಿವಸ್ತ್ರ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಈ ವಿಚಾರ ಮುಂದಿಟ್ಟು ಕೊಂಡು ಸತ್ಯ ಶೋಧನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ನಮ್ಮ ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ. ಎಸ್.ಪಿ., ಕಮಿಷನರ್ ಜೊತೆಗೆ ಕೇಂದ್ರದ ತಂಡ ತನಿಖೆ ಮಾಡಿದೆ. ರಾಜಕೀಯಕ್ಕಾಗಿ ಬಿಜೆಪಿ ನಾಲ್ಕೈದು ಎಂ.ಪಿ. ಗಳನ್ನು ಕಳಿಸಿದೆ. ಈ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಲಾಭದ ಲೆಕ್ಕಚಾರದಲ್ಲಿದೆ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಈ ಎಲ್ಲದರ ಮಧ್ಯೆ ಬಿಜೆಪಿ ಸತ್ಯ ಶೋಧನಾ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.
ಕೋಲಾರದಲ್ಲಿ ಮಕ್ಕಳನ್ನು ಶೌಚ ಗುಂಡಿಗೆ ಇಳಿಸಿದ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿದೆ. ಸಚಿವ ಮಹಾದೇವಪ್ಪ ಸೇರಿದಂತೆ ಸರ್ಕಾರ ಘಟನೆಯನ್ನು ಖಂಡಿಸಿದೆ. ಶುಚಿ ಮಾಡಲು ತಂತ್ರಜ್ಞಾನ ಬಂದಿದೆ. ಮಕ್ಕಳನ್ನು ಶೌಚ ಗುಂಡಿಗೆ ಇಳಿಸಿದ್ದು ತಪ್ಪು. ಇಂತಹ ಕೆಲಸ ಅಮಾನವೀಯ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.