“ನಮ್ ಕಥೆ ನಿಮ್ ಜೊತೆ…’ ಇದು “ಮಸ್ತ್ ಕಲಂದರ್’ ಚಿತ್ರದ ಅಡಿಬರಹ. ಇದನ್ನು ನೋಡಿಕೊಂಡು ಹೊಸದೇನೋ ಇರಬೇಕು ಅಂದುಕೊಂಡು ಹೋದರೆ, ಅಲ್ಲಾಗುವ ನಿರಾಸೆಗೆ ನಿರ್ದೇಶಕರೇ ಹೊಣೆ. ಇಲ್ಲಿ ಕಥೆ ಹುಡುಕಿ ಕೂತರೆ ತಾಳ್ಮೆ ಕಳೆದುಕೊಳ್ಳುವುದು ಗ್ಯಾರಂಟಿ. ಒಂದಷ್ಟು ಡಬ್ಬಲ್ ಮೀನಿಂಗ್ ಮಾತುಗಳಿಗೆ ಕಿವಿಗೊಟ್ಟು ಖುಷಿಪಡಬೇಕೋ, ಪದೇ ಪದೇ ಹುಡುಗಿ ಹಿಂದೆ ಸುತ್ತುವ ನಾಯಕ ಮತ್ತು ಅವನ ಜೊತೆ ಸದಾ ಕಾದಾಡುವ ಹುಡುಗಿಯನ್ನು ನೋಡಿ ಸಂಭ್ರಮಿಸಬೇಕೋ ಎಂಬ ಗೊಂದಲ ಕಾಡದೇ ಇರದು.
ಇಲ್ಲಿ ಗಟ್ಟಿ ಕಥೆ ಅನ್ನುವಂಥದ್ದೇನೂ ಇಲ್ಲ. ಆದರೆ, ಕೊನೆಯ ಹತ್ತು ನಿಮಿಷದ ಕ್ಲೈಮ್ಯಾಕ್ಸ್ ದೃಶ್ಯ ತಕ್ಕಮಟ್ಟಿಗೆ ಸೈ ಎನಿಸಿಕೊಳ್ಳುವುದೂ ಅಷ್ಟೇ ನಿಜ. ಹಾಗಂತ, “ಮಸ್ತ್’ ಅನ್ನುವ ಮಾತಿಗೆ ಈ ಚಿತ್ರ ಬಲುದೂರ! ನಿರ್ದೇಶಕರು ಚಿತ್ರದಲ್ಲಿ ಬರೀ ಮಾತುಗಳಿದ್ದರೆ ಸಾಕು, ಸಿನಿಮಾ ಕಣ್ತುಂಬ ಹಿಡಿಸಬಹುದು ಎಂಬ ಲೆಕ್ಕಾಚಾರಕ್ಕೆ ಮಾರು ಹೋದಂತಿದೆ. ಕಥೆಗೊಂದು ಚೌಕಟ್ಟು ಇಲ್ಲ. ಚೌಕಟ್ಟು ಮೀರಿದ ಮಾತುಕತೆಗೆ ಒಂದು ಅಂತ್ಯವೂ ಇಲ್ಲ. ಅರೆಬರೆ ಓದಿದ ಒಬ್ಬ ಹುಡುಗ, ಕೆಲಸವಿಲ್ಲದೆ, ಅಪ್ಪನ ದುಡಿಮೆ ನಂಬಿ ಬಂಡ ಬದುಕು ಸವೆಸುತ್ತಲೇ ದಿನ ದೂಡುತ್ತಾನೆ.
ಥವನಿಗೂ ಲವ್ ಮಾಡಬೇಕು ಅನಿಸುತ್ತೆ. ಒಬ್ಬ ಹುಡುಗಿಯ ಹಿಂದೆ ಮೂರು ವರ್ಷಗಳ ತನಕ ಅಲೆದಾಡುತ್ತಾನೆ. ಅವನು ಓದಿಲ್ಲ, ಕೆಲಸವಿಲ್ಲ ಅಂತ ಗೊತ್ತಿದ್ದರೂ, ಆ ಹುಡುಗಿ ಮನಸಾರೆ ಪ್ರೀತಿಸುತ್ತಾಳೆ. ಎಲ್ಲರ ಪ್ರೀತಿಗೆ ಬರುವಂತೆ ಇವರ ಪ್ರೀತಿಗೂ ಹಲವು ಅಡ್ಡಿ-ಆತಂಕ ಎದುರಾಗುತ್ತವೆ. ಮುಂದಾ…? ಏನಾಗುತ್ತೆ ಅನ್ನೋದೇ ಕಥೆ. ಇಷ್ಟು ಹೇಳಿದ ಮೇಲೆ ಹೊಸದೇನಾದರೂ ಇದೆಯಾ? ಎಂಬ ಪ್ರಶ್ನೆ ಕೇಳುವಂತಿಲ್ಲ. ಯಾಕೆಂದರೆ, ಕಥೆ ಹಳೆಯದ್ದಾಗಿದ್ದರೂ, ಮಾತಿನ ಮೂಲಕ ಒಂದಷ್ಟು ಮೆರುಗು ಹೆಚ್ಚಿಸುವಲ್ಲಿ ಪ್ರಯತ್ನ ಮಾಡಲಾಗಿದೆ.
ಮನರಂಜನೆಗೆ ಹಾಸ್ಯ ಬೇಕು ಎಂಬ ಕಾರಣಕ್ಕೆ, ವಿನಾಕಾರಣ ಕೆಲ ದೃಶ್ಯಗಳೆಲ್ಲವನ್ನು ತೋರಿಸಿ, ತಾಳ್ಮೆ ಪರೀಕ್ಷೆ ಮಾಡಲಾಗಿದೆ. ಬರುವ ಕೆಲ ಹಾಸ್ಯ ದೃಶ್ಯಗಳಲ್ಲಿ ಹಾಸ್ಯಕ್ಕಿಂತ ಅಪಹಾಸ್ಯವೇ ಹೆಚ್ಚು. ಹೀರೋ ಬಿಲ್ಡಪ್‌ಗೆ ಎರಡು ಫೈಟು, ಇಂಟ್ರಡಕ್ಷನ್ ಸಾಂಗು ಇಟ್ಟು, ಸಾದಾ “ಮಸಾಲೆ’ ಹಾಕಲಾಗಿದೆ. ಆದರೂ, ಯಾವ ಆ್ಯಂಗಲ್‌ನಲ್ಲೂ “ಮಸ್ತ್’ ಸಿನ್ಮಾ ಅನಿಸಿಕೊಳ್ಳುವುದಿಲ್ಲ. ಅದಕ್ಕೆ ಕಾರಣ ಹಲವಾರು. ಒಂದು ಲವ್‌ಸ್ಟೋರಿಗೆ ಕಥೆ ಬಹಳ ಮುಖ್ಯ. ಅದರಲ್ಲೂ ಚಂದದ ನಿರೂಪಣೆಯೂ ಮುಖ್ಯ. ಅದನ್ನಿಲ್ಲಿ ನಿರೀಕ್ಷಿಸುವಂತಿಲ್ಲ.
ಇನ್ನು, ಸುಮ್ಮನೆ ನೋಡಿಸಿಕೊಂಡು ಹೋಗಲು “ಲಾಜಿಕ್’ ಕೂಡ ಮುಖ್ಯವಾಗುತ್ತೆ. ಆದರೆ, ಇಲ್ಲಿರುವ ಕೆಲ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಾಕಷ್ಟು “ಲಾಜಿಕ್ ಎರರ್’ ಕಾಣಸಿಗುತ್ತವೆ. ಅವನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೂ, ಮಸ್ತ್ ಕಲರ್ರು ಇಲ್ಲ, ಖದರ್ರೂ ಇಲ್ಲ. ಆರಂಭದಲ್ಲೇ ಹೀರೋ ಮಿಸ್ಸಿಂಗ್ ಪೋಸ್ಟರ್ ಕಾಣಸಿಗುತ್ತೆ. ಆ ಫೋಸ್ಟರ್ ಕಾಣುತ್ತಿದ್ದಂತೆಯೇ, ಹಿನ್ನೆಲೆ ಧ್ವನಿಯಲ್ಲಿ ಹೀರೋ, ತನ್ನ ಪಾತ್ರ ಕುರಿತು ಹೇಳುತ್ತಾ ಹೋಗುತ್ತಾನೆ. ಅವನು ತಪ್ಪು ಮಾಡಲ್ಲ. ಆದರೆ, ಬೇರೆಯವರನ್ನೂ ತಪ್ಪು ಮಾಡೋಕೆ ಬಿಡಲ್ಲ.
ಅಂಥಾ ಹುಡುಗ ಒಂದು ತಪ್ಪು ಮಾಡ್ತಾನೆ. ಏನದು? ಅದು ಸಸ್ಪೆನ್ಸ್. ಆರಂಭದಲ್ಲೇ ಹೀರೋ ಕಾಣೆಯಾಗಿದ್ದಾನೆ ಅಂತ ಬೀಳುವ ಪೋಸ್ಟರ್‌ಗೆ ಕ್ಲೈಮ್ಯಾಕ್ಸ್‌ನಲ್ಲಿ ಉತ್ತರ ಸಿಗಲಿದೆ. ಆ ಒಂದೇ ಒಂದು ಉತ್ತರ ಕಂಡುಕೊಳ್ಳುವ ಕುತೂಹಲವಿದ್ದರೆ, ನಿರ್ದೇಶಕರು ತೋರಿಸುವ “ಮಸ್ತ್’ ಆಟವನ್ನು ಎರಡು ಗಂಟೆಕಾಲ ಸಹಿಸಿಕೊಂಡು ಕೂರಲೇಬೇಕು. ಇಲ್ಲಿ ಫ್ರೆಶ್ ಕಥೆ ಅಲ್ಲದಿದ್ದರೂ, ಫ್ರೆಶ್ ಎನಿಸುವ ಹಾಡುಗಳಿವೆ. ಅದೇ ನೋಡುಗನಿಗೆ ಕೊಡುವ “ದೊಡ್ಡ’ ಸಮಾಧಾನ.
ನಿತಿನ್ ಡ್ಯಾನ್ಸ್, ಫೈಟ್‌ನಲ್ಲಿ ಇಷ್ಟವಾಗುತ್ತಾರೆ. ನಟನೆಯಲ್ಲಿನ್ನೂ ಸಾಗಬೇಕಿದೆ. ಯದ್ವಾ ತದ್ವಾ ಮಾತಾಡುವ ಹುಡುಗಿಯಾಗಿ ಸ್ವರೂಪಿಣಿ ಗಮನಸೆಳೆಯುವುದು ಬಿಟ್ಟರೆ, ಅಭಿನಯದ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಶ್ರೀಧರ್ ಒಬ್ಬ ಮಗನನ್ನು ತುಂಬಾ ಪ್ರೀತಿಸುವ ತಂದೆಯಾಗಿ ಇಷ್ಟವಾಗುತ್ತಾರೆ. ಉಳಿದಂತೆ ಬರುವ ಪಾತ್ರಗಳ್ಯಾವೂ ಅಷ್ಟೊಂದು ಪ್ರಭಾವ ಬೀರಲ್ಲ. ಪ್ರೇಮ್‌ಕುಮಾರ್ ಸಂಗೀತದಲ್ಲಿ “ಚಂದ ಅಪರಾಧವೊಂದು ಸುಮ್ಮನೆ ಜರುಗಿದೆ ಇಂದು…’ ಹಾಡು ಗುನುಗುವಂತಿದೆ. ವಿನ್ಸೆಂಟ್ ಛಾಯಾಗ್ರಹಣದಲ್ಲಿ ಹಾಡುಗಳು “ಮಸ್ತ್ ಮಸ್ತ್’ ಎನಿಸುತ್ತವೆ.
ಚಿತ್ರ: ಮಸ್ತ್ ಕಲಂದರ್
ನಿರ್ಮಾಣ: ಕುಮಾರಸ್ವಾಮಿ, ಲಿಯಾ ಕೆ.ಜಿ.ಸ್ವಾಮಿ, ಚಂದ್ರು ಎಸ್.ಎಲ್.
ನಿರ್ದೇಶನ: ರಾಜ್‌ಕುಮಾರ್ ಆದಿತ್ಯ
ತಾರಾಗಣ: ನಿತಿನ್, ಸ್ವರೂಪಿಣಿ, ಶ್ರೀಧರ್, ಸ್ವಾತಿ, ಗಿರಿ, ರಿಷಿಕುಮಾರ ಸ್ವಾಮೀಜಿ, ರಾಕ್‌ಲೈನ್ ಸುಧಾಕರ್ ಮುಂತಾದವರು
* ವಿಜಯ್ ಭರಮಸಾಗರ