ಯಾದಗಿರಿ : “ನಮ್ಮ ಸರ್ಕಾರದ ಆದ್ಯತೆ ಮತ ಬ್ಯಾಂಕ್ ಅಲ್ಲ, ನಮ್ಮ ಆದ್ಯತೆ ಅಭಿವೃದ್ಧಿ. ಡಬಲ್ ಇಂಜಿನ್ ಸರ್ಕಾರವೆಂದರೆ ಡಬಲ್ ಕಲ್ಯಾಣ. ಇದರಿಂದ ಕರ್ನಾಟಕಕ್ಕೆ ಹೇಗೆ ಲಾಭವಾಗುತ್ತಿದೆ ಎಂಬುದನ್ನು ನೋಡಬಹುದು” ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.
ಕೊಡೇಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ, ನೀರಾವರಿ, ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, 21ನೇ ಶತಮಾನದ ಭಾರತದ ಅಭಿವೃದ್ಧಿಗೆ ಜಲ ಭದ್ರತೆ ಅಗತ್ಯ . ಮುಂದಿನ 25 ವರ್ಷಗಳು ಪ್ರತಿಯೊಬ್ಬ ನಾಗರಿಕ ಮತ್ತು ರಾಜ್ಯಕ್ಕೆ ‘ಅಮೃತ ಕಾಲ’ವಾಗಲಿದೆ. ಈ ಅವಧಿಯಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಬೇಕಾಗಿದೆ ಎಂದರು.
“ಹೊಲಗಳಲ್ಲಿ ಉತ್ತಮ ಬೆಳೆಗಳು ಮತ್ತು ಕೈಗಾರಿಕೆಗಳು ವಿಸ್ತರಿಸಿದಾಗ ಭಾರತವನ್ನು ಅಭಿವೃದ್ಧಿಪಡಿಸಬಹುದು” ಎಂದು ಪ್ರಧಾನಿ ಹೇಳಿದರು.
ಯಾದಗಿರಿ ಮತ್ತು ಉತ್ತರ ಕರ್ನಾಟಕದ ಸುತ್ತಮುತ್ತಲಿನ ಪ್ರದೇಶಗಳನ್ನು ಹಿಂದುಳಿದ ಪ್ರದೇಶಗಳೆಂದು ಘೋಷಿಸುವ ಹಿಂದಿನ ಸರ್ಕಾರಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿವೆ ಎಂದು ಕಾಂಗ್ರೆಸ್ ಅನ್ನು ಹೆಸರಿಸದೆ ಮೋದಿ ಹೇಳಿದರು.