Advertisement

ಬೈಕ್‌ ಕಳ್ಳರ ಮೆಚ್ಚಿನ ತಾಣ ನಮ್ಮ ಬೆಂಗಳೂರು!

12:45 AM Oct 14, 2019 | Lakshmi GovindaRaju |

ಸಿಲಿಕಾನ್‌ ಸಿಟಿ ಬೆಂಗಳೂರು ವಾಹನಗಳು, ಅದರಲ್ಲೂ ದ್ವಿಚಕ್ರ ವಾಹನ ಕಳ್ಳರ ಪರಮಾಪ್ತ ತಾಣವಾಗಿ ಮಾರ್ಪಟ್ಟಿದೆ. ಪಕ್ಕದ ತಮಿಳುನಾಡು, ಆಂಧ್ರ, ಮಹಾರಾಷ್ಟ್ರಗಳಿಂದ ಬರುವ ಖದೀಮರು ಇಲ್ಲಿ ಬೈಕ್‌ಗಳನ್ನು ಕದ್ದು ಬೇರೆ ಬೇರೆ ರಾಜ್ಯಗಳಲ್ಲಿ ಮಾರಿ ಹಣ ಮಾಡುತ್ತಾರೆ. ನಗರದಲ್ಲಿ ದಿನಕ್ಕೆ ಕನಿಷ್ಠ 12ರಿಂದ 13 ದ್ವಿಚಕ್ರ ವಾಹನಗಳು ಕಳವಾಗುತ್ತವೆ. ಆದರೆ, ಪೊಲೀಸರು ಪತ್ತೆ ಹಚ್ಚುವ ಪ್ರಕರಣಗಳ ಪ್ರಮಾಣ ಕೇವಲ ಶೇ.28. ನಗರದಲ್ಲಿ ಕದ್ದ ಬೈಕ್‌ಗಳಿಗೆ ತಮಿಳುನಾಡು ಪ್ರಮುಖ ಮಾರುಕಟ್ಟೆಯಾದರೆ, ಕೆಲ ಕಳ್ಳರು ಗುಜರಿ ಅಂಗಡಿಗಳನ್ನೂ ಮಾರುಕಟ್ಟೆ ಮಾಡಿಕೊಂಡಿದ್ದಾರೆ. ಈ ಬೈಕ್‌ ಕಳ್ಳರ ಜಾಲ ನಗರದಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎಂಬ ಕುರಿತ ಮಾಹಿತಿ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

Advertisement

ರಾಜಧಾನಿ ನಾಗರಿಕರೇ ನಿಮ್ಮ ಬೈಕ್‌, ಕಾರುಗಳನ್ನು ಸೂಕ್ತ ಭದ್ರತೆ ಇರುವ ಸ್ಥಳದಲ್ಲಿ ನಿಲ್ಲಿಸಿ. ಏಕೆಂದರೆ ಸ್ವಲ್ಪ ಯಾಮಾರಿದರೂ ನಿಮ್ಮ ವಾಹನದ ಎಂಜಿನ್‌, ಒಳನಾಡು ಮೀನುಗಾರಿಕೆ ಬೋಟ್‌ಗಳನ್ನು ಚಲಾಯಿಸಬಲ್ಲದು. ಇತರ ಬಿಡಿಭಾಗಗಳು ಗುಜರಿ ಅಂಗಡಿ ಸೇರಬಹುದು. ಕಡೆಗೆ ಇಷ್ಟುಪಟ್ಟು ಖರೀದಿಸಿದ ವಾಹನಗಳು ವರ್ಷಗಳು ಕಳೆದರೂ ಸಿಗದೇ ಇರಬಹುದು. ಬೆಂಗಳೂರಿನಲ್ಲಿ ಈಗ ಸರಗಳ್ಳತನ, ಮನೆಕಳ್ಳತನ, ರಾಬರಿ ಕೃತ್ಯಗಳಿಗಿಂತ ವಾಹನಗಳ ಕಳ್ಳತನ ಹೆಚ್ಚು ತಲೆನೋವಾಗಿ ಪರಿಣಮಿಸಿದೆ.

ನಗರದಲ್ಲಿ ದಿನನಿತ್ಯ ಕನಿಷ್ಠ 12ರಿಂದ 13 ವಾಹನಗಳನ್ನು ಕಳ್ಳರು ಎಗರಿಸುತ್ತಿದ್ದಾರೆ. ಇದರಲ್ಲಿ ಶೇ.90ರಷ್ಟು ಬೈಕ್‌ ಕಳವು ಪ್ರಕರಣಗಳೇ ಇವೆ ಎಂಬುದು ಆಘಾತಕಾರಿ ಅಂಶವಾಗಿದೆ. ಬೀಟ್‌ ಪೊಲೀಸ್‌ ವ್ಯವಸ್ಥೆ, ಹೊಯ್ಸಳ ಗಸ್ತು, ಹಿರಿಯ ಅಧಿಕಾರಿಗಳ ನೈಟ್‌ ರೌಂಡ್ಸ್‌ ಇನ್ನಿತರೆ ಕ್ರಮಗಳನ್ನು ನಗರ ಪೊಲೀಸರು ಕೈಗೊಂಡಿದ್ದರೂ, ವಾಹನ ಕಳ್ಳರ ಕೈ ಚಳಕಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ಹೀಗಾಗಿ, ವಾಹನಗಳ ಖರೀದಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರು, ವಾಹನಗಳ ಕಳವಿನಲ್ಲೂ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳದ ವಾಹನ ಕಳವು ಗ್ಯಾಂಗ್‌ಗಳು ಬಸ್‌ ನಿಲ್ದಾಣಗಳು, ರೈಲು ನಿಲ್ದಾಣಗಳು, ಆಗ್ನೇಯ ವಿಭಾಗ, ಪಶ್ಚಿಮ ವಿಭಾಗ, ಉತ್ತರ ವಿಭಾಗವನ್ನು ಪ್ರಮುಖ ಟಾರ್ಗೆಟ್‌ ಮಾಡಿಕೊಂಡಿವೆ. ಹಗಲು ಹಾಗೂ ರಾತ್ರಿ ವೇಳೆ ನಿರಾಂತಕವಾಗಿ ಬೈಕ್‌ಗಳನ್ನು ಕದಿಯುವ ಈ ಗ್ಯಾಂಗ್‌ಗಳು, ಸದ್ದಿಲ್ಲದೆ ಸಾಗಿಸುತ್ತವೆ. ಒಮ್ಮೆ ಕಳ್ಳತನಕ್ಕೆ ಇಳಿದರೆ ಕನಿಷ್ಠ 20ರಿಂದ 30 ಬೈಕ್‌ಗಳನ್ನು ಕಳವು ಮಾಡಿ ಎಸ್ಕೇಪ್‌ ಆಗುತ್ತವೆ.

ಈ ನಡುವೆ ವಾಹನ ಕಳವು ಪ್ರಕರಣಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿಬಿಟ್ಟಿದೆ. ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ನಡೆದ ವಾಹನಕಳವು ಪ್ರಕರಣಗಳಲ್ಲಿ ಪತ್ತೆಯಾದ ಪ್ರಮಾಣ ಕೇವಲ ಶೇ.28.64. 2017ರಿಂದ 2019ರ ಸೆಪ್ಟೆಂಬರ್‌ ಅಂತ್ಯದವರೆಗೆ ನಗರದಲ್ಲಿ ಕಳುವಾಗಿದ ವಾಹನಗಳ ಪೈಕಿ 10,589 ವಾಹನಗಳು ಪತ್ತೆ ಆಗೇ ಇಲ್ಲ. ಈ ವಾಹನಗಳು ಯಾರ ಕೈ ಸೇರಿವೆ, ಮೂಲ ಸ್ವರೂಪ ಕಳೆದುಕೊಂಡಿವೆಯೋ, ದುಷ್ಕೃತ್ಯಗಳನ್ನು ಎಸಗುವ ಕಿಡಿಗೇಡಿಗಳ ಕೈಗೆ ಸಿಕ್ಕಿವೆಯೋ ಎಂಬ ಸುಳಿವು ಸಹ ಪೊಲೀಸರಿಗಿಲ್ಲ.

Advertisement

ಬೈಕ್‌ ಹಾಗೂ ಇತರೆ ವಾಹನಗಳ ಕಳ್ಳರ ಜಾಲ ಗುಜರಿ ಅಂಗಡಿಗಳವರೆಗೆ ವ್ಯಾಪಿಸಿಕೊಂಡಿರುತ್ತದೆ. ಒಮ್ಮೆ ಬೈಕ್‌ಗಳು ಅಲ್ಲಿಗೆ ತೆರಳಿದರೆ ಅವು ಬಿಡಿಭಾಗಗಳನ್ನು ಕಳಚಿ ಮೂಲ ಸ್ವರೂಪವನ್ನೇ ಕಳೆದುಕೊಂಡು ಬಿಡುತ್ತವೆ. ಹೀಗಾಗಿ, ಬೈಕ್‌ ಮೂಲ ಸ್ವರೂಪದಲ್ಲಿ ಸಿಗುತ್ತಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

ಬೋಟ್‌ ಓಡಿಸುತ್ತೆ ಇಂಜಿನ್‌: ನಗರದಲ್ಲಿ ಬೈಕ್‌ಕಳವು ಮಾಡುವುದರಲ್ಲಿ ತಮಿಳುನಾಡಿನ ಕೊಯಮತ್ತೂರು ಹಾಗೂ ಅಂಬೂರ್‌ ತಂಡಗಳು ಮೊದಲ ಸ್ಥಾನದಲ್ಲಿವೆ. ಅಂಬೂರ್‌ನ ಕೆಲ ಕುಟುಂಬಗಳು ಬೈಕ್‌ ಕಳ್ಳತನವನ್ನೇ ಕಸುಬಾಗಿಸಿಕೊಂಡಿವೆ ಎನ್ನುತ್ತಾರೆ ಪೊಲೀಸರು. ಕೊಯಮತ್ತೂರು ಹಾಗೂ ಅಂಬೂರ್‌, ಕೇರಳದ ಕ್ಯಾಲಿಕಟ್‌ನ ತಂಡಗಳು ಪ್ರತ್ಯೇಕವಾಗಿ ನಗರಕ್ಕೆ ರೈಲು ಮೂಲಕ ಆಗಮಿಸುತ್ತವೆ.

ಕೋರಮಂಗಲ, ಮೈಕೋ ಲೇಔಟ್‌, ಕೆ.ಆರ್‌.ಪುರ, ಎಚ್‌ಎಸ್‌ಆರ್‌ ಲೇಔಟ್‌, ವೈಟ್‌ಫೀಲ್ಡ್‌ ವಿಭಾಗಗಳಲ್ಲಿ ಒಂದೆರಡು ದಿನ ಸಂಚರಿಸಿ ಹ್ಯಾಂಡಲ್‌ ಲಾಕ್‌ ಮುರಿಯುವುದು, ಇಲ್ಲವೇ ನಕಲಿ ಕೀಗಳನ್ನು ಬಳಸಿ ಬೈಕ್‌ಗಳನ್ನು ಕಳವು ಮಾಡಿಕೊಂಡು ಹೋಗುತ್ತಾರೆ. ಟೋಲ್‌ ಗೇಟ್‌ಗಳಲ್ಲಿ ಪೊಲೀಸರಿಗೆ ಸಿಕ್ಕಿಬೀಳಬಹುದು ಎಂಬ ಉದ್ದೇಶದಿಂದ ಹೆದ್ದಾರಿಗಳನ್ನು ಬಿಟ್ಟು ಅಡ್ಡದಾರಿಗಳ ಮೂಲಕ ಬೈಕ್‌ ಚಾಲನೆ ಮಾಡಿಕೊಂಡು ಹೊರಟುಬಿಡುತ್ತಾರೆ.

ಅಲ್ಲಿಗೆ ತೆರಳಿ ಗೊತ್ತಿರುವ ಗುಜರಿ ಅಂಗಡಿಗಳಿಗೆ ಬಂದ ಬೆಲೆಗೆ ಮಾರಾಟ ಮಾಡುತ್ತಾರೆ. ಗುಜರಿ ಅಂಗಡಿಯವರು ಬಿಡಿಭಾಗಗಳನ್ನು ಮಾಡಿ ಅದರಲ್ಲಿ ಪ್ರಮುಖವಾಗಿ ಬೈಕ್‌ಗಳ ಇಂಜಿನ್‌ ಅನ್ನು ಮೀನುಗಾರಿಕೆಗೆ ಬಳಸುವ ಬೋಟ್‌ಗಳಿಗೆ ಅಳವಡಿಸಲು ಮಾರುತ್ತಾರೆ. ಕನ್ನಾರ್‌, ಪಾಲಾರ್‌, ಕೇರಳದ ಬ್ಯಾಪರೆ, ಕಪ್ಪಾಡ್‌, ಚವಾಕ್ಕಾಡ್‌ ಬೀಚ್‌ಗಳಲ್ಲಿನ ಒಳನಾಡು ಮೀನುಗಾರಿಕೆ ಬೋಟ್‌ಗಳಿಗೆ ಬೋಟ್‌ಗಳಲ್ಲಿ ಕದ್ದ ಬೈಕ್‌ಗಳ ಮೋಟಾರುಗಳೇ ಬಳಕೆಯಾಗುತ್ತವೆ ಎಂದು ಅಂಬೂರ್‌ನ ಕಳ್ಳರ ಗ್ಯಾಂಗ್‌ವೊಂದನ್ನು ಬಂಧಿಸಿದ್ದ ಹಿರಿಯ ಪೊಲೀಸ್‌ ಅಧಿಕಾರಿ ಹೇಳುತ್ತಾರೆ.

ಗುಜರಿ ಅಂಗಡಿಗಳನ್ನು ಹೊರತುಪಡಿಸಿ ಕಡಿಮೆ ಮೊತ್ತಕ್ಕೆ ಇಡೀ ಬೈಕ್‌ಗಳನ್ನು ಮಾರಾಟ ಮಾಡುವುದೂ ಇದೆ. ತಮಿಳುನಾಡಿನ ಗ್ರಾಮೀಣ ಭಾಗಗಳು, ಕೋಲಾರ, ಶ್ರೀನಿವಾಸಪುರ, ಅನಂತಪುರ, ಚಿತ್ತೂರು ಕಡೆ ಈ ರೀತಿ ಕದ್ದ ಬೈಕ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನು ನಗರದ ಕೆಲವು ಬೈಕ್‌ ಕಳವು ಗ್ಯಾಂಗ್‌ಗಳು ಕೂಡ ಶಿವಾಜಿನಗರ, ಕೆ.ಆರ್‌ ಮಾರ್ಕೆಟ್‌ ಸೇರಿದಂತೆ ಕೆಲವು ಭಾಗಗಳಲ್ಲಿ ತಮಗೆ ಪರಿಚಯ ಇರುವ ಗುಜರಿ ಮಾಲೀಕರಿಗೆ ಮಾರಾಟ ಮಾಡುತ್ತಾರೆ ಎಂದು ಅಧಿಕಾರಿ ಹೇಳುತ್ತಾರೆ.

ಶೋಕಿಗಾಗಿ ಕದೀತಾರೆ: ನಗರದಲ್ಲಿ ಶೋಕಿಗಾಗಿಯೂ ಬೈಕ್‌ಗಳನ್ನು ಕಳವು ಮಾಡುತ್ತಾರೆ ಎಂಬುದೂ ನಿಜ. ಕೆಲವು ಯುವಕರಿಗೆ ವಿವಿಧ ಮಾದರಿಯ ಬೈಕ್‌ಗಳ ಮೇಲೆ ವಿಪರೀತ ಕ್ರೇಜ್‌ ಇರುತ್ತದೆ. ಅಂತಹ ಆರೋಪಿಗಳು ತಮಗೆ ಬೇಕು ಎನಿಸಿದ ರಾಯಲ್‌ ಎನ್‌ಫೀಲ್ಡ್‌, ಕೆಟಿಎಂ ಡ್ನೂಕ್‌, ಪಲ್ಸರ್‌ ಸೇರಿದಂತೆ ಹಲವು ಬೈಕ್‌ಗಳನ್ನು ಕದಿಯುತ್ತಾರೆ. ಆದರೆ, ಮಾರಾಟ ಮಾಡುವುದಿಲ್ಲ, ಕದ್ದ ಬೈಕ್‌ಗಳನ್ನು ಪೆಟ್ರೋಲ್‌ ಖಾಲಿ ಆಗುವವರೆಗೆ ಓಡಿಸುತ್ತಾರೆ ಬಳಿಕ ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಾರೆ.

ಮತ್ತೂಂದು ವಿಚಿತ್ರ ಎಂದರೆ ಕಾರ್ತಿಕ್‌ ಎಂಬಾತ ತನ್ನ ಪ್ರೇಯಸಿ ಜತೆ ಸುತ್ತಾಡಲೆಂದೇ 10 ಬೈಕ್‌ಗಳನ್ನು ಕಳವು ಮಾಡಿದ್ದ. ಅದೇ ಬೈಕ್‌ಗಳಲ್ಲಿ ನಂದಿಬೆಟ್ಟ, ಕೊಡಗು, ಹೊಗೇನಕಲ್‌ ಸೇರಿ ಇತರೆ ಪ್ರವಾಸಿ ತಾಣಗಳಿಗೆ ಸುತ್ತಾಡಿದ್ದ. ಕೋರಮಂಗಲ ಪೊಲೀಸರು ಆತನನ್ನು ಬಂಧಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿತ್ತು. ಇನ್ನೂ ಕೆಲವರು ವ್ಹೀಲಿಂಗ್‌ ಶೋಕಿಗಾಗಿ ಕಳವು ಮಾಡುವುದು ಕೂಡ ಹುಚ್ಚಾಗಿಬಿಟ್ಟಿದೆ ಎನ್ನುತ್ತಾರೆ ಪೊಲೀಸರು.

ಅಪರಾಧ ಕೃತ್ಯಗಳಿಗೂ ಬೈಕ್‌ ಬಳಕೆ: ನಗರದಲ್ಲಿ ಸರಗಳವು, ರಾಬರಿ ಮುಂತಾದ ಕೃತ್ಯಗಳನ್ನು ಎಸಗಲು ಬಹುತೇಕ ಪ್ರಕರಣಗಳಲ್ಲಿ ಕದ್ದ ಬೈಕ್‌ಗಳೇ ಬಳಕೆಯಾಗಿವೆ ಎಂಬುದು ಗಮನಾರ್ಹ ಸಂಗತಿ. ಸರಕಳ್ಳತನದಲ್ಲಿ ಕುಖ್ಯಾತಿ ಪಡೆದಿರುವ ಇರಾನಿ ಗ್ಯಾಂಗ್‌ ಸೇರಿದಂತೆ ಮತ್ತಿತರ ತಂಡಗಳು ಮೊದಲಿಗೆ ನಗರದಲ್ಲಿ ಒಂದೆರಡು ದಿನ ಉಳಿದು, ಬೈಕ್‌ಗಳನನ್ನು ಕದ್ದು, ನಂಬರ್‌ ಪ್ಲೇಟ್‌ ಬದಲಿಸಿ ಸರಗಳವು ಹಾಗೂ ರಾಬರಿ ಕೃತ್ಯಗಳನ್ನು ಎಸಗಿರುವುದು ಹಲವು ಪ್ರಕರಣಗಳಲ್ಲಿ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಪದವೀಧರರು ಅರೆಸ್ಟ್‌: ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಪಡೆದವರು ಕೂಡ ಬೈಕ್‌ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ದುಶ್ಚಟಗಳಿಗೆ ದಾಸರಾಗಿ, ಶೋಕಿ ಜೀವನ ನಡೆಸುವ ಸಲುವಾಗಿ ವಾಹನ ಕಳ್ಳತನದಂತಹ ಕೃತ್ಯಗಳನ್ನು ಎಸಗಿ ಜೈಲು ಸೇರಿದ ಹಲವು ಪದವೀಧರರನ್ನು ಕಂಡಿದ್ದೇನೆ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ಎನ್‌ಫೀಲ್ಡ್‌ ಬಿಟ್ಟು ಬೇರೇನೂ ಮುಟ್ಟಲ್ಲ!: ಬೈಕ್‌ಗಳಲ್ಲಿಯೇ “ರಾಯಲ್‌’ ಕಳ್ಳರ ತಂಡವಿದೆ. ಅಂಬೂರ್‌ನ ನಿಯಾಜ್‌ ಗ್ಯಾಂಗ್‌ ಈ ಹೆಸರು ಪಡೆದುಕೊಂಡಿದೆ. ಈ ತಂಡ ರಾಯಲ್‌ ಎನ್‌ಫೀಲ್ಡ್‌, ಬುಲೆಟ್‌ ಬೈಕ್‌ಗಳನ್ನು ಬಿಟ್ಟರೆ ಬೇರಾವ ಬೈಕ್‌ ಮುಟ್ಟುವುದಿಲ್ಲ. ಬಹುತೇಕ ಕೆ.ಆರ್‌ಪುರ, ಎಚ್‌ಎಸ್‌ಆರ್‌ ಲೇಔಟ್‌ ವೈಟ್‌ಫೀಲ್ಡ್‌ ಸುತ್ತಮುತ್ತಲ ಭಾಗಗಳಲ್ಲಿ ಈ ಗ್ಯಾಂಗ್‌ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಕದ್ದಿದೆ. ಇವರ ಕಾಟಕ್ಕೆ ಕಳೆದ ವರ್ಷದಿಂದ ಪೊಲೀಸರೆ ಮುಂದೆ ನಿಂತು ರಾಯಲ್‌ ಎನ್‌ಫೀಲ್ಡ್‌ ಮಾಲೀಕರಿಗೆ ಜಿಪಿಎಸ್‌ ಆಳವಡಿಸಿಕೊಳ್ಳಲು ಸಲಹೆ ನೀಡಿದ್ದರು. ಹಲವು ಮಾಲೀಕರು ಕಳ್ಳರಿಗೆ ಹೆದರಿ ವಿಧಿಯಿಲ್ಲದೆ ತಮ್ಮ ಬೈಕ್‌ಗಳಿಗೆ ಜಿಪಿಎಸ್‌ ಅಳವಡಿಸಿಕೊಂಡರು.

ಜಿಪಿಎಸ್‌, ಅಲಾರಂ ಅಳವಡಿಸಿ: ಕಾನೂನು ಸುವ್ಯವಸ್ಥೆ, ಅಪರಾಧ ತಡೆಗಟ್ಟುವುದು ಪೊಲೀಸರ ಕರ್ತವ್ಯ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ, ಬೈಕ್‌ ಹಾಗೂ ಕಾರುಗಳಿಗೂ ಕಾವಲಿರಬೇಕು ಎಂದರೆ ಹೇಗೆ ಸಾಧ್ಯ? ಈಗಾಗಲೇ ಬೀಟ್‌ ವ್ಯವಸ್ಥೆ ಜಾರಿಯಲ್ಲಿದೆ ಆಯಾ ಬೀಟ್‌ ಸಿಬ್ಬಂದಿಯೂ ಕಾರ್ಯನಿರ್ವಹಿಸುತ್ತಾರೆ. ಆದರೆ, ಕೆಲವೊಮ್ಮೆ ಕಳ್ಳರು ರಂಗೋಲಿ ಕೆಳಗಡೆ ನುಸುಳುತ್ತಾರೆ. ಹೀಗಾಗಿ, ಇಂತಹ ಅಪರಾಧಗಳ ಕಡಿವಾಣಕ್ಕೆ ಪೊಲೀಸರ ಜತೆ ನಾಗರಿಕರು ಕೂಡ ಕೈ ಜೋಡಿಸಬೇಕಿದೆ. ತಮ್ಮ ವಾಹನಗಳ ಸುರಕ್ಷತೆಗಾಗಿ ಜಿಪಿಎಸ್‌ ಇಲ್ಲವೇ ಅಲಾರಂ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಅದರ ಜತೆ ಭದ್ರತೆ ಇರುವ ಕಡೆ ವಾಹನಗಳನ್ನು ಪಾರ್ಕಿಂಗ್‌ ಮಾಡಬೇಕು ಎಂದು ಹಿರಿಯ ಅಧಿಕಾರಿ ಅಭಿಪ್ರಾಯಪಡುತ್ತಾರೆ.

ನಗರದಲ್ಲಿ ವಾಹನ ಕಳವು (ಸೆಪ್ಟೆಂಬರ್‌ ಅಂತ್ಯಕ್ಕೆ)
ವರ್ಷ ಕಳುವಾದ ವಾಹನ ಪತ್ತೆಯಾದ ಪ್ರಕರಣ
2017 6156 1992
2018 5442 1695
2019 3621 673

* ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next