ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಮಂಗಳವಾರ 9 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿಯು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮುಂದಿನ ಒಂದು ತಿಂಗಳ ಕಾಲ ವಿಶೇಷ ಅಭಿಯಾನ ನಡೆಯಲಿದೆ.
ಮಂಗಳವಾರ ಈ ಕುರಿತಾದ ಟ್ವೀಟ್‌ನಲ್ಲಿ ಪ್ರಧಾನಿ ಮೋದಿ, “ನಾವು ಇಂದು ದೇಶಕ್ಕೆ ನೀಡುತ್ತಿರುವ ಸೇವೆಯು 9 ವರ್ಷಗಳನ್ನು ಪೂರ್ಣಗೊಳಿಸಿದೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಗಳನ್ನು ಹೇಳುತ್ತೇನೆ. ನಾವು ಕೈಗೊಂಡ ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ಕ್ರಮವೂ ದೇಶದ ಜನರ ಜೀವನವನ್ನು ಸುಧಾರಿಸುವ ಉದ್ದೇಶದಿಂದಲೇ ಕೂಡಿತ್ತು. ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕಾಗಿ ನಾವು ಮತ್ತಷ್ಟು ಶ್ರಮಿಸಲಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ವರ್ಚಸ್ಸು, ರಾಷ್ಟ್ರೀಯ ಭದ್ರತೆಗೆ ನೀಡಿರುವ ಪ್ರಾಮುಖ್ಯ, ಬಡವರಿಗೆ ಮನೆ, ಶೌಚಾಲಯಗಳ ನಿರ್ಮಾಣ, ಪೈಪ್ ಮೂಲಕ ನೀರು ಪೂರೈಕೆ, ಮೂಲಸೌಕರ್ಯ ಅಭಿವೃದ್ಧಿ, ಉತ್ಪಾದನ ವಲಯಕ್ಕೆ ಉತ್ತೇಜನ ಸೇರಿದಂತೆ ಕೇಂದ್ರ ಸರಕಾರ ಕೈಗೊಂಡ ಜನಕಲ್ಯಾಣ ಯೋಜನೆಗಳ ಬಗ್ಗೆ ಕೇಂದ್ರ ಸಚಿವರು, ಸಂಸದರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಿದ್ದಾರೆ.
ಇಂದಿನಿಂದ ಜನಸಂಪರ್ಕ ಅಭಿಯಾನ
Related Articles
ದೇಶಾದ್ಯಂತ ಬುಧವಾರದಿಂದ ಜೂ. 30ರ ವರೆಗೆ ಸಾಮೂಹಿಕ ಸಂಪರ್ಕ ಅಭಿಯಾನ ನಡೆಯಲಿದೆ. ಲೋಕಸಭಾ ಕ್ಷೇತ್ರ ಮಟ್ಟದಲ್ಲಿ ಒಟ್ಟು 500 ಸಭೆಗಳನ್ನು ಆಯೋಜಿಸಲಾಗುತ್ತದೆ. ಪಕ್ಷದ
ಸದಸ್ಯರು ಪ್ರತೀ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 1 ಸಾವಿರ ಮಂದಿಯಂತೆ ಒಟ್ಟು 5 ಲಕ್ಷ ಗಣ್ಯರ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ. ಇದೇ ವೇಳೆ, ಬಿಜೆಪಿಯು 9090902024 ಎಂಬ ಮೊಬೈಲ್ ಸಂಖ್ಯೆಯನ್ನು ಪರಿಚಯಿಸಿದ್ದು, ಇದಕ್ಕೆ ಮಿಸ್ಡ್ ಕಾಲ್ ಕೊಡುವ ಮೂಲಕ ದೇಶವಾಸಿಗಳು ಪಕ್ಷಕ್ಕೆ ಬೆಂಬಲ ಸೂಚಿಸಬಹುದು ಎಂದಿದೆ.
ಇಂದು ಬೃಹತ್ ರ್ಯಾಲಿ
30 ದಿನಗಳ ಅವಧಿಯಲ್ಲಿ 50 ರ್ಯಾಲಿಗಳನ್ನು ಬಿಜೆಪಿ ಆಯೋಜಿಸಿದ್ದು, ಆ ಪೈಕಿ ಮೊದಲ ರ್ಯಾಲಿ ರಾಜಸ್ಥಾನದಲ್ಲಿ ನಡೆಯಲಿದೆ. ಬುಧವಾರ ರಾಜಸ್ಥಾನದ ಅಜೆ¾àರ್‌ನಲ್ಲಿ ಪ್ರಧಾನಿ ಮೋದಿಯವರು ಬೃಹತ್ ಸಾರ್ವಜನಿಕ ರ್ಯಾಲಿ ನಡೆಸಲಿದ್ದಾರೆ. ಮುಂದಿನ ವರ್ಷದ ಲೋಕಸಭೆ ಚುನಾವಣೆಯ ಜತೆಗೆ ಸದ್ಯದಲ್ಲೇ ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮೋದಿಯವರ ಈ ರ್ಯಾಲಿ ಮಹತ್ವ ಪಡೆದಿದೆ.