ಉಡುಪಿ: ಹಲವಾರು ವರ್ಷಗಳ ಬೇಡಿಕೆ ಯಾದ ಕಂಪ್ಯೂಟರೈಸ್ಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಿರ್ಮಾಣ ಕಾರ್ಯ ಇನ್ನೂ ಈಡೇರದೆ ಪ್ರಸ್ತಾವನೆಯಲ್ಲಿಯೇ ಬಾಕಿ ಉಳಿದಿದೆ. ಇದಕ್ಕೆ ಕಂಟಕವಾಗಿರುವುದು ಡೀಮ್ಡ್ ಫಾರೆಸ್ಟ್.
ಯೋಜನೆಗಾಗಿ ಗುರುತಿಸಲಾಗಿರುವ ಸುಮಾರು 5.5 ಎಕರೆ ಪ್ರದೇಶದಲ್ಲಿ 200ರಷ್ಟು ಮರಗಳಿದ್ದು ನಿರ್ಮಾಣ ಆರಂಭ ಮಾಡಲು ಉದ್ದೇಶಿಸಿದ ಸಮಯದಲ್ಲಿಯೇ ಅರಣ್ಯ ಇಲಾಖೆ ಇದನ್ನು ಡೀಮ್ಡ್ ಫಾರೆಸ್ಟ್ ಪ್ರದೇಶ ಎಂದು ಪರಿಗಣಿಸಿದೆ. ಈ ಕಾರಣಕ್ಕಾಗಿ ಈ ಪ್ರಸ್ತಾವನೆ ಕಡತದಲ್ಲಿಯೇ ಬಾಕಿ ಉಳಿದಿತ್ತು. ಪದೇಪದೇ ಈ ವಿಚಾರಗಳು ಪ್ರಸ್ತಾಪಕ್ಕೆ ಬರುತ್ತಿದ್ದರೂ ಮುಂದಕ್ಕೆ ಹೋಗಿಲ್ಲ. ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಮುಕ್ತಿ ನೀಡದೇ ಕಂಪ್ಯೂಟರೈಸ್ಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಿರ್ಮಾಣ ಸಾಧ್ಯವಿಲ್ಲ. ಈ ಚುನಾವಣೆಯಲ್ಲಾ ದರೂ ಇದಕ್ಕೊಂದು ಮುಕ್ತಿ ಸಿಗಲಿ ಎಂಬುದು ನಮ್ಮ ಹಕ್ಕೊತ್ತಾಯ.
ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾರ್ಷಿಕವಾಗಿ ಕೋಟ್ಯಂತರ ರೂ. ರಾಜಸ್ವ ಸಂಗ್ರಹವಾಗುತ್ತಿದ್ದರೂ ಸುಸಜ್ಜಿತ ಕಂಪ್ಯೂಟರೈಸ್ಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಿರ್ಮಾಣವಾಗಿಲ್ಲ. ಟ್ರ್ಯಾಕ್ ಅನುಪಸ್ಥಿತಿಯಲ್ಲಿ ಚಾಲನಾ ಪರವಾನಿಗೆ ಬಯಸುವ ಅರ್ಜಿದಾರರು ರಜತಾದ್ರಿಯ ಪ್ರಾದೇಶಿಕ ಸಾರಿಗೆ ಕಚೇರಿ ಮುಂಭಾಗದ ರಸ್ತೆಯಲ್ಲಿ ತಮ್ಮ ಚಾಲನಾ ಕೌಶಲ ಪ್ರದರ್ಶಿಸುತ್ತಿದ್ದಾರೆ. ಯೋಜನೆಯ ಆರಂಭದ ದಿನಗಳಲ್ಲಿ ಆರ್‌ಟಿಒ ಉತ್ಸಾಹದಿಂದ 64 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಕೆಲಸ ಪೂರ್ಣಗೊಳಿಸಿತ್ತು. ಆದರೆ ಅರಣ್ಯ ಇಲಾಖೆಯಿಂದ ತಡೆ ಬಂದ ಕಾರಣ ಡ್ರೈವಿಂಗ್ ಟ್ರಾಕ್ ಹಾಕುವ ಯೋಜನೆಗೆ ತಡೆ ಬಿದ್ದಿದೆ.
ಆರ್‌ಟಿಒ ಮೂಲಗಳ ಪ್ರಕಾರ ಉಡುಪಿಯಲ್ಲಿ ದಿನಕ್ಕೆ ಸರಾಸರಿ 75ರಷ್ಟು ದ್ವಿಚಕ್ರ ವಾಹನ ಹಾಗೂ ಚತುಷcಕ್ರ ವಾಹನ ಪರವಾನಿಗೆ ನೀಡಲಾಗುತ್ತದೆ. ಪರವಾನಿಗೆದಾರರನ್ನು ಲಿಖೀತ, ಮೌಖೀಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಕಾರಣಕ್ಕಾಗಿ ಗಣಕೀಕೃತ ಚಾಲನಾ ಪರೀಕ್ಷಾ ಟ್ರ್ಯಾಕ್ ಹೆಚ್ಚು ಅಗತ್ಯವಿರುವ ಯೋಜನೆಯಾಗಿದೆ.
Related Articles
ಅಲೆವೂರಿನಲ್ಲಿ ಗಣಕೀಕೃತ ಡ್ರೈವಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ತಡೆ ಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮತ್ತೂಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಸಿಕ್ಕಿದರೆ ಶೀಘ್ರ ದಲ್ಲಿ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ರವಿಶಂಕರ್.
ಯಾಕೆ ಅಗತ್ಯ?
ಕಂಪ್ಯೂಟರೈಸ್ಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಿರ್ಮಾಣ ಮಾಡಿದರೆ ಜಿಲ್ಲೆಯ ಹಲವಾರು ಮಂದಿಗೆ ಉಪಯೋಗವಾಗಲಿದೆ. ಪ್ರಸ್ತುತ ಆರ್‌ಟಿಒ ಕಚೇರಿಯಲ್ಲಿರುವ ಸಣ್ಣ ಟ್ರ್ಯಾಕ್‌ನಲ್ಲಿಯೇ ಮಾಡಲಾಗುತ್ತಿದ್ದು, ಅಲೆವೂರು ಅಥವಾ ಬೇರೆ ಪ್ರದೇಶದಲ್ಲಿ ಕಂಪ್ಯೂಟರೈಸ್ಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಿರ್ಮಾಣ ಮಾಡಿದರೆ ಆರ್‌ಟಿಒ ಕಚೇರಿಯಲ್ಲಿ ಉಂಟಾಗುವ ಜನದಟ್ಟನೆಯನ್ನೂ ತಡೆಗಟ್ಟಬಹುದಾಗಿದೆ. ಸುಸಜ್ಜಿತ ಟ್ರ್ಯಾಕ್ ಕೂಡ ಇಲ್ಲದಿರುವುದು ದುರಂತವೇ ಸರಿ.
ಗುತ್ತಿಗೆ ಪಡೆದಿದ್ದ ಕೆಎಸ್ಸಾರ್ಟಿಸಿ
ಅಲೆವೂರಿನಲ್ಲಿ ಕಂಪ್ಯೂಟರೈಸ್ಡ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ನಿರ್ಮಿಸಲು ಕೆಎಸ್ಸಾರ್ಟಿಸಿ ಸಂಸ್ಥೆಯ ನಿರ್ಮಾಣ ವಿಭಾಗದವರಿಗೆ 9 ವರ್ಷದ ಹಿಂದೆಯೇ ಗುತ್ತಿಗೆ ನೀಡಲಾಗಿತ್ತು. ಇದಕ್ಕಾಗಿ 6 ಕೋಟಿ ರೂ. ಗಳಷ್ಟು ಹಣವೂ ಬಿಡುಗಡೆಯಾಗಿತ್ತು. ಈ ನಡುವೆ ಡೀಮ್ಡ್ ಫಾರೆಸ್ಟ್ ಸಮಸ್ಯೆ ಎದುರಾದ ಕಾರಣ ಮೊಟಕು ಗೊಂಡಿದೆ. ಈ ಕಾರಣಕ್ಕೆ ಆ ಮೊತ್ತವೂ ವಿನಿಯೋಗವಾಗದೆ ಹಿಂದಿರುಗಿದೆ.
~ ಪುನೀತ್ ಸಾಲ್ಯಾನ್