Advertisement

ನಮ್ಮ ಸಂವಿಧಾನ ಶ್ರೇಷ್ಠವಾದುದು: ಸಭಾಪತಿ, ಸ್ಪೀಕರ್‌ ಪ್ರತಿಪಾದನೆ

07:35 PM Nov 26, 2021 | Team Udayavani |

ಬೆಂಗಳೂರು: ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನ ನಮ್ಮದಾಗಿದ್ದು, ಜನರ ಹಿತಕ್ಕಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ಸಂವಿಧಾನದ ಆಶಯ ಈಡೇರಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸ್ಪೀಕರ್‌ ವಿಶ್ವೇಶ್ವರಹೆಗಡೆ ಕಾಗೇರಿ ಪ್ರತಿಪಾದಿಸಿದ್ದಾರೆ.

Advertisement

ಸಂವಿಧಾನ ದಿವಸ ಆಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಅತ್ಯಂತ ಶ್ರೇಷ್ಠ ಸಂವಿಧಾನ ರಚನೆ ಮಾಡಿದ್ದಾರೆ. ಶಾಸಕಾಂಗದವರು ಸಂವಿಧಾನದ ಅನುಷ್ಠಾನ ಮತ್ತು ಪರಿಣಾಮದ ಆತ್ಮಾವಲೋಕನ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಬಸವರಾಜ ಹೊರಟ್ಟಿ ಮಾತನಾಡಿ, ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಹಾಗೂ ಲಿಖೀತ ಸಂವಿಧಾನ ನಮ್ಮದಾಗಿದ್ದು, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ ಅವರಿಂದ ರಚಿತವಾಗಿರುವ ನಮ್ಮ ಹೆಮ್ಮೆಯ ಸಂವಿಧಾನದಲ್ಲಿ ಎಲ್ಲಾ ಜಾತಿ, ಮತ, ಪಂಥ ಹಾಗೂ ಎಲ್ಲಾ ವರ್ಗಗಳ ಜನರ ಹಿತವಿದೆ ಎಂದು ತಿಳಿಸಿದರು.

ದೇಶದ ಪ್ರಜಾಪ್ರಭುತ್ವದ ಭದ್ರ ಬುನಾದಿಯೇ ನಮ್ಮ ಸಂವಿಧಾನ ಎಂಬುದು ಅತ್ಯಂತ ಗೌರವ ಮತ್ತು ಹೆಮ್ಮೆಯ ಸಂಗತಿಯಾಗಿದ್ದು, ಹಲವು ವೈಶಿಷ್ಟ್ಯತೆಯನ್ನು ಹೊಂದಿರುವ ನಮ್ಮ ಸಂವಿಧಾನ ನಮ್ಮೆಲ್ಲಾ ನಾಗರೀಕರನ್ನು ಸಶಕ್ತಗೊಳಿಸಿ, ಸರ್ವರಿಗೂ ಸಮಾನತೆಯ ಅವಕಾಶ ನೀಡಿ, ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ. ಇಂತಹ ಸಂವಿಧಾನದ ಮಹತ್ವದ ಬಗ್ಗೆ ದೇಶದ ಎಲ್ಲಾ ನಾಗರೀಕರಲ್ಲಿ ಅರಿವು ಮೂಡಿಸಿ ಸಂವಿಧಾನದ ಬಗ್ಗೆ ಗೌರವ ಮೂಡಿಸುವುದರ ಜೊತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಸಂವಿಧಾನ ದಿನಾಚರಣೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಕಿಷ್ಕಿಂದಾ ಅಂಜನಾದ್ರಿ ಹನುಮನ ಜನ್ಮಸ್ಥಳ: ಡಾ। ರವಿಶಂಕರ್ ಗುರೂಜಿ 

Advertisement

ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ಹಿಂದೆ ಸಂವಿಧಾನ ರಚನಾ ದಿನವನ್ನು ರಾಷ್ಟ್ರೀಯ ಕಾನೂನು ದಿವಸ ಎಂದು ಆಚರಿಸಲಾಗುತ್ತಿತ್ತು. 2015ರ ಅಕ್ಟೋಬರ್‌ 11 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಮಾರಕಕ್ಕೆ ಮುಂಬೈನಲ್ಲಿ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವೆಂಬರ್‌ 26 ರಂದು ಪ್ರತಿ ವರ್ಷ ಸಂವಿಧಾನ ದಿವಸವನ್ನಾಗಿ ಆಚರಿಸಲು ಘೋಷಣೆ ಮಾಡಿದರು ಎಂದು ತಿಳಿಸಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸುದೀರ್ಘ‌ ಕಾಲ ಚರ್ಚಿಸಿ, ಅಭಿಪ್ರಾಯಗಳನ್ನು ಸಂಗ್ರಹಿಸಿ, ಅವರ ಬಾಲ್ಯದ ಅನುಭವಗಳಿಂದ ಜಗತ್ತು ಮೆಚ್ಚುವಂತೆ ಅತ್ಯಂತ ಶ್ರೇಷ್ಠ ಸಂವಿಧಾನ ರಚನೆ ಮಾಡಿದ್ದಾರೆ. ಶಾಸಕಾಂಗದವರು ಸಂವಿಧಾನದ ಅನುಷ್ಠಾನ ಮತ್ತು ಪರಿಣಾಮದ ಆತ್ಮಾವಲೋಕನ ಮಾಡಿಕೊಂಡು ಜನರ ಹಿತಕ್ಕಾಗಿ ಕರ್ತವ್ಯ ನಿರ್ವಹಿಸಿ ಸಂವಿಧಾನದ ಆಶಯವನ್ನು ಈಡೇರಿಸಬೇಕು ಎಂದು ಹೇಳಿದರು.

ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ನೆನಪು ಹಚ್ಚ ಹಸಿರಾಗಿರಬೇಕು. ನಮಗೆ ಸ್ವಾತಂತ್ರ್ಯ ಸರಳವಾಗಿ ಸಿಕ್ಕಿಲ್ಲ, ಅನೇಕ ಹಿರಿಯರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ದೊರೆತಿದ್ದು, ಅವರ ಕೊಡುಗೆಯನ್ನು ಸ್ಮರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ವಾಚಿಸಿದರು.

ಗೃಹಸಚಿವ ಆರಗ ಜ್ಞಾನೇಂದ್ರ , ಪರಿಷತ್‌ ಕಾರ್ಯದರ್ಶಿ ಕೆ.ಆರ್‌. ಮಹಾಲಕ್ಷ್ಮಿ, ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next