ಗ್ರೂಪ್ ಹೆಸರು: ಬಾಸ್ ಹುಟ್ಟುಹಬ್ಬ
ಅಡ್ಮಿನ್: ಪ್ರವೀಣ್ ಕೆ.ಸಿ., ಸದಾನಂದ ಸಿಂಹ, ಲಾವಣ್ಯ ಕರಣ್, ಚಿದು…
ಸಹೋದ್ಯೋಗಿ ಪ್ರವೀಣ್ ಯಾವುದೋ ಮೆಸೇಜ್ ನೋಡ್ಕೊಂಡು, “ಜನವರಿ 18ರಂದು ಬಾಸ್ ಬರ್ತ್‌ಡೇ’ ಅಂತ ಕಚೇರಿಯಲ್ಲಿ ಒಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಷ್ಟೇ. ಕಚೇರಿಯ ಎಲ್ಲರ ಮೊಗವೂ ತಾವರೆಯಂತೆ ಅರಳಿತು. ಹೊಸ ಬಾಸ್ ಬೇರೆ. ಭಯಂಕರ ಸಿಟ್ಟು, ಆದರೆ ಒಳಗಿನಿಂದ ಮೃದು ಹೃದಯಿ ಆಗಿದ್ದ ಬಾಸ್‌ಗೆ ಪ್ರವೀಣ ಬಹಳ ಹತ್ತಿರ. ಎಲ್ಲರೂ ಅದನ್ನು ನಂಬಿ, ಆ ಸಂಭ್ರಮ ಆಚರಿಸಲೆಂದೇ, ಒಂದು ವಾಟ್ಸಾಪ್ ಗ್ರೂಪ್ ರಚಿಸಿ, ಪ್ರವೀಣನನ್ನೂ ಅಡ್ಮಿನ್ ಮಾಡಿ, ಆ ದಿನಕ್ಕಾಗಿ ಕಾದೆವು.
“ಬಾಸ್, ಹುಟ್ಟುಹಬ್ಬ ‘ ಎಂಬ ಗ್ರೂಪ್‌ನಲ್ಲಿ ಕಚೇರಿಯ 16 ಮಂದಿಯನ್ನೂ ಸೇರಿಸಲಾಗಿತ್ತು. ಬರ್ತ್ ಡೇ ದಿನ ಅವರ ಪತ್ನಿಯನ್ನು ಕರೆದು, ಅವರ ಕೈಗೆ ಕೇಕ್ ನೀಡಿ, ಬಾಸ್‌ನ ಟೇಬಲ್ ಮೇಲೆ ಇಡುವ ಪ್ಲ್ರಾನ್ ಅನ್ನು ರೂಪಿಸಿದೆವು. ವಾರಕ್ಕೂ ಮೊದಲೇ ಸಣ್ಣಪುಟ್ಟ ತಯಾರಿಗಳನ್ನೂ ಮುಗಿಸಿದ್ದೆವು. ಕೊನೆಗೂ ಜ.18 ಬಂದೇಬಿಟ್ಟಿತು.
ಅವರ ಪತ್ನಿಯ ನಂಬರ್ ಅನ್ನು ಹೇಗೋ ಸಂಗ್ರಹಿಸಿ, ಸಂಜೆ 4ರ ಹೊತ್ತಿಗೆ ಅವರನ್ನೂ ಕಚೇರಿಗೆ ಕರೆತರಲು ವ್ಯವಸ್ಥೆ ಮಾಡಿದ್ದೆವು. ಅವರೂ ಹೊಸ ಸೀರೆ ಉಟ್ಕೊಂಡ್, ಸುರಸುಂದರವಾಗಿಯೇ ಬಂದಿದ್ದರು. ಅವರಿಗೂ ನಾವು ಕಾರಣ ಹೇಳಿರಲಿಲ್ಲ. ಆದರೆ, ಏನೋ ಸುಳಿವು ಗೊತ್ತಿರುವಂತೆ, ಅವರು ತಮ್ಮೊಳಗೇ ನಗುವನ್ನು ತೇಲಿಸುತ್ತಿದ್ದರು. ಬಾಸ್ ಅವರ ಪತ್ನಿಯ ಕೈಯಲ್ಲಿ ಒಂದು ಬೊಕೆ ನೀಡಿ, 4.30ರ ಹೊತ್ತಿಗೆ ಕ್ಯಾಬೀನ್ ಒಳಗೆ ಹೋಗುವಂತೆ ಹೇಳಿದ್ದೆವು. ಎಲ್ಲರೂ ಹ್ಯಾಪಿ ಬರ್ತ್ ಡೇ ಟು ಯೂ ಅಂತ ಜೋರಾಗಿ ಹಾಡತೊಡಗಿದೆವು…
ಬಾಸ್ ಅರೆಕ್ಷಣ ಬೆವತು, “ಏನ್ ಅಕ್ಕ, ಇಷ್ಟು ಸರ್‌ಪ್ರೈಸ್…’ ಎನ್ನುತ್ತಾ, ಸೀರೆಯುಟ್ಟು ಬಂದ ಮಹಿಳೆಗೆ ಹೇಳಿದಾಗ ನಾವೆಲ್ಲ ಶಾಕ್. ನಮ್ಮ ಬಾಸ್‌ಗೆ ಮದುವೆ ಆಗಿಲ್ಲ, ಅವರ ಜತೆಗಿದ್ದಿದ್ದು ಅಕ್ಕ ಎಂದು ತಿಳಿದು, ಅಚ್ಚರಿ. ಅಕ್ಕನಿಗೆ ಮದುವೆ ಆಗಿದ್ದರೂ, ಉನ್ನತ ಶಿಕ್ಷಣ ಓದಲೆಂದು, ನಮ್ಮ ಬಾಸ್ ಮನೇಲಿದ್ದಿದ್ದೇ ನಮ್ಮೆಲ್ಲರ ಕನ್‌ಫ್ಯೂಶನ್‌ಗೆ ಮೊದಲ ಕಾರಣ. ಅಷ್ಟಕ್ಕೂ ಅವತ್ತು ಬಾಸ್ ಬರ್ತ್‌ಡೇ ಅಲ್ಲವೇ ಅಲ್ಲ. ಯಾರೋ ಹುಟ್ಟುಹಾಕಿದ ಫೇಕ್‌ನೂಸ್, ಇಷ್ಟೆಲ್ಲ ಫಜೀತಿ ಸೃಷ್ಟಿಸಿತ್ತು.
ವಣ್ಯಾ ಎಚ್.ಸಿ.