Advertisement

Duniya Vijay: ಓಟಿಟಿಗಳು ಕನ್ನಡಿಗರು, ಕನ್ನಡ ಸಿನಿಮಾಗಳಿಗೆ ಅವಮಾನ ಮಾಡುತ್ತಿದೆ – ವಿಜಯ್

04:00 PM Aug 07, 2024 | Team Udayavani |

ಬೆಂಗಳೂರು: ವರ್ಷದ ಮೊದಲಾರ್ಧ ಕನ್ನಡ ಚಿತ್ರರಂಗ (Sandalwood) ಹೇಳಿಕೊಳ್ಳುವಷ್ಟರ ಮಟ್ಟಿಗೇನು ಸದ್ದು ಮಾಡಿಲ್ಲ. ಒಳ್ಳೆಯ ಸಿನಿಮಾಗಳು ಅಲ್ಲಲ್ಲಿ ತೆರೆಕಂಡರೂ ಅದು ಥಿಯೇಟರ್‌ ನಲ್ಲಿ ಹೆಚ್ಚು ದಿನ ಓಡಿಲ್ಲ ಜೊತೆಗೆ ನಿರ್ಮಾಪಕರ ಜೇಬನ್ನೂ ಭರ್ತಿ ಮಾಡಿಲ್ಲ.

Advertisement

ಆದರೆ ವರ್ಷದ ದ್ವಿತೀಯಾರ್ಧದಲ್ಲಿ ಕನ್ನಡದಲ್ಲಿ ಸಿನಿಮಾಗಳ (Kannada Movies) ಸುಗ್ಗಿಯ ಇರಲಿದೆ. ʼಭೀಮʼ, ಕೃಷ್ಣಂ ಪ್ರಣಯ ಸಖಿ’, ‘ಪೆಪೆ’, ಶಿವಣ್ಣನ ‘ಬೈರತಿ ರಣಗಲ್’ ಹೀಗೆ ಬಹುನಿರೀಕ್ಷಿತ ಸಿನಿಮಾಗಳು ಸಾಲಾಗಿ ತೆರೆಗೆ ಬರಲಿದೆ.

ʼಸಲಗʼ ಬಳಿಕ ದುನಿಯಾ ವಿಜಯ್‌ (Duniya Vijay) ಆ್ಯಕ್ಷನ್ ಕಟ್ ಹೇಳುತ್ತಿರುವ ʼಭೀಮʼ(Bheema) ಈಗಾಗಲೇ ಹಾಡುಗಳಿಂದ ಸಖತ್‌ ಸದ್ದು ಮಾಡಿದೆ.  ಅಡ್ವಾನ್ಸ್‌ ಬುಕ್ಕಿಂಗ್‌  ಕೂಡ ಆರಂಭವಾಗಿದ್ದು, 400ಕ್ಕೂ ಹೆಚ್ಚಿನ ಥಿಯೇಟರ್‌ನಲ್ಲಿ ಈ ವಾರವೇ ʼಭೀಮʼ ತೆರೆಗೆ ಬರಲಿದೆ.

ಸಿನಿಮಾದ ಪ್ರಚಾರಕ್ಕಾಗಿ ʼಸುದ್ದಿಮನೆʼ ಯೂಟ್ಯೂಬ್‌ ಚಾನೆಲ್‌ ದುನಿಯಾ ವಿಜಯ್‌ ಸಂದರ್ಶನ ನೀಡಿದ್ದು, ಓಟಿಟಿಗಳು ಕನ್ನಡ ಸಿನಿಮಾಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

Advertisement

“ಭೀಮ ಚಿತ್ರವನ್ನು ನಾವು 125ಕ್ಕೂ ಹೆಚ್ಚಿನ ದಿನಗಳ ಕಾಲ ಚಿತ್ರೀಕರಣ ನಡೆಸಿದೆವು. ಆ ಬಳಿಕ ಒಂದಷ್ಟು ದಿನ ಪೋಸ್ಟ್‌ ಪ್ರೊಡಕ್ಷನ್‌ಗೆ ಹೋಯಿತು. ಇದಾದ ಬಳಿಕ ಮುಂದುವರೆಯುವ ಅಂದರೆ ಆಗ ಎಲೆಕ್ಷನ್‌ ಅಡ್ಡಬಂತು. ಓಟಿಟಿ ವೇದಿಕೆಗಳು ಕನ್ನಡ ಸಿನಿಮಾಗಳಿಗೆ ಅವಮಾನ ಮಾಡುತ್ತಿದೆ. ಇದರಿಂದಾಗಿ ಅನೇಕ ನಿರ್ಮಾಪಕರು ನೋವು ಅನುಭವಿಸುತ್ತಿದ್ದಾರೆ. ಕನ್ನಡ ಸಿನಿಮಾಗಳನ್ನು ಖರೀದಿ ಮಾಡದೆ ಇರುವುದು ಒಂದು ರೀತಿ ಕನ್ನಡಗರಿಗೆ ಅವಮಾನವಾದಂತಾಗಿದೆ. ಇದರಿಂದ ನಿರ್ಮಾಪಕರು ನರಳುತ್ತಿದ್ದಾರೆ. ಇನ್ನು ಟಿವಿ ರೈಟ್ಸ್‌ ವಿಚಾರಕ್ಕೆ ಬಂದರೆ ಬೇರೆ ವಿಧಿಯೇ ಇಲ್ಲವೇನೋ ಎಂದು ಕಡಿಮೆ ರೈಟ್ಸ್‌ ಕೇಳ್ತಾರೆ. ಎಲ್ಲಾ ನಿರ್ಮಾಪಕರು ಅದನ್ನು ನಂಬಿಯೇ ಸಿನಿಮಾ ಮಾಡುತ್ತಿದ್ದರು. ಮೊದಲೇ ನಾವು ಸಿನಿಮಾ ಕೊಂಡುಕೊಳ್ಳಲ್ಲ ಎಂದು ನೋಟಿಸ್‌ ನೀಡಿದರೆ ನಿರ್ಮಾಪಕರು ಸಿನಿಮಾ ಮಾಡ್ಬೇಕಾ? ಬೇಡ್ವಾ? ಅಂತ ನಿರ್ಧರ ಮಾಡುತ್ತಿದ್ದರು” ಎಂದು ಅವರು ಹೇಳಿದ್ದಾರೆ.

“ಟಿವಿ, ಓಟಿಟಿ ಬಿಟ್ಟು ಚಿತ್ರಮಂದಿರದಿಂದ ಕಲೆಕ್ಷನ್‌ ಆಗುತ್ತದೆ ಎಂದರೆ ಅಲ್ಲೂ ಕೂಡ ಸಮಸ್ಯೆಯಿದೆ. ಇಂದು ಹಲವು ಥಿಯೇಟರ್‌ ಗಳು ಮುಚ್ಚುತ್ತಿವೆ. ಅದು ರಿಪೇರಿ ಆಗುತ್ತಿಲ್ಲ. ಇದೆಲ್ಲವೂ ಒಬ್ಬ ನಿರ್ಮಾಪಕನಿಗೆ ಆಗುವ ನಷ್ಟ” ಎಂದು ವಿಜಿ ಹೇಳಿದ್ದಾರೆ.

“ಕನ್ನಡಕ್ಕೆ ಮಾಡುತ್ತಿರುವ ಮೊದಲ ಅವಮಾನವೇ ಓಟಿಟಿ ಫ್ಲಾಟ್‌ ಫಾರ್ಮ್‌ ನವರು. ಅಮೇಜಾನ್‌, ನೆಟ್ ಫ್ಲಿಕ್ಸ್‌ ನವರೇ ಹೀಗೆ ಮಾಡುತ್ತಿದ್ದಾರೆ. ಅವರೆಲ್ಲ ಕೆಲವೇ ಕೆಲ ಸಿನಿಮಾಗಳನ್ನು ಮಾತ್ರ ಖರೀದಿ ಮಾಡುತ್ತಿದ್ದಾರೆ. ಆದಾದ ಬಳಿಕ  ಅವರು ಯಾರೂ ಮುಂದೆ ಬಂದಿಲ್ಲ. ಕನ್ನಡಕ್ಕೆ ಆದ್ಯತೆ ಕಡಿಮೆ ಆಗಿದೆ. ಇದು ಒಂದು ರೀತಿ ಕನ್ನಡಕ್ಕೆ ಮಾಡಿದ ಅವಮಾನ” ಎಂದು ವಿಜಯ್‌ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next