ಹೊಸದಿಲ್ಲಿ: ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ -2 ಯೋಜನೆಯ ಗಗನನೌಕೆ ಸೆರೆಹಿಡಿದ ಮತ್ತೂಂದು ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೋಮವಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಹಲವು ಕುಳಿಗಳು ಕಂಡುಬಂದಿವೆ. ಜಾಕ್ಸನ್, ಮ್ಯಾಚ್, ಸೋಮರ್‌ಫೆಲ್ಡ್ ಹಾಗೂ ಮಿತ್ರ ಎಂಬ ಕುಳಿಗಳನ್ನು ಇಸ್ರೋ ಗುರುತಿಸಿದೆ. ಈ ಚಿತ್ರವನ್ನು ಆಗಸ್ಟ್ 23 ರಂದು ಟೆರೇನ್ ಮ್ಯಾಪಿಂಗ್ ಕ್ಯಾಮೆರಾ 2 ಸೆರೆ ಹಿಡಿದಿದೆ. ಸದ್ಯ ನೌಕೆಯು ಚಂದ್ರನಿಂದ 4375 ಕಿ.ಮೀ ದೂರದಲ್ಲಿದೆ.
ಚಂದ್ರನ ಮೇಲ್ಮೆ„ ಮೇಲೆ ಹಲವು ಕುಳಿಗಳಿದ್ದು, ಕ್ಷುದ್ರಗ್ರಹಗಳು ಅಥವಾ ಧೂಮಕೇತುಗಳು ತೀವ್ರ ವೇಗದಿಂದ ಅಪ್ಪಳಿಸಿದಾಗ ರೂಪುಗೊಂಡಿವೆ. ಮಿತ್ರ ಎಂಬ ಕುಳಿಯು 93 ಕಿ.ಮೀ ವ್ಯಾಸ ಹೊಂದಿದ್ದು, ಇದನ್ನು ಭಾರತೀಯ ಭೌತವಿಜ್ಞಾನಿ ಶಿಶಿರ್ ಕುಮಾರ್ ಮಿತ್ರ ಸ್ಮರಣೆಯಲ್ಲಿ ನಾಮಕರಣ ಮಾಡಲಾಗಿದೆ. ಮ್ಯಾಚ್ ಎಂಬ ಇನ್ನೊಂದು ಕುಳಿಯ ಪಶ್ಚಿಮ ಅಂಚಿನಲ್ಲಿ ಮಿತ್ರ ಕಂಡುಬರುತ್ತದೆ.