ಹಾವೇರಿ: ಗ್ರಾಮದೊಳಗಿರುವ ಕಟ್ಟಿಗೆ ರಾಶಿ, ಮೇವಿನ ಬಣವಿ ಹಾಗೂ ತಿಪ್ಪೆಗುಂಡಿಗಳನ್ನು ಊರಿಂದಾಚೆ ಸ್ಥಳಾಂತರಿಸಲು ನೋಟೀಸ್ ಜಾರಿ ಮಾಡಬೇಕು ಎಂದು ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
‘ಸ್ವಚ್ಛ ಮೇವ ಜಯತೆ’ ಕಾರ್ಯಕ್ರಮದ ನಿಮಿತ್ತ ಹೆಡಿಗ್ಗೊಂಡ ಗ್ರಾಮದ ಬೀದಿಗಳಲ್ಲಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಿಪ್ಪೆಗುಂಡಿಗಳನ್ನು ಕಾಲಮಿತಿಯೊಳಗೆ ಸ್ಥಳಾಂತರಿಸದಿದ್ದರೆ ಜನರ ಆರೋಗ್ಯ, ಗ್ರಾಮದರ ನೈರ್ಮಲ್ಯ ದೃಷ್ಟಿಯಿಂದ ಪೊಲೀಸ್ ನೆರವು ಪಡೆದು ಸ್ಥಳಾಂತರಿಸುವ ಕಠಿಣ ಕ್ರಮಕೈಗೊಳ್ಳಿ ಎಂದರು.
ಗ್ರಾಮದೊಳಗೆ ಎಲ್ಲೆಂದರಲ್ಲಿ ಕಟ್ಟಿಗೆಯ ಬಣವಿ, ಹುಲ್ಲಿನ ಬಣವಿ, ಸೆಗಣಿ ತಿಪ್ಪೆಗಳನ್ನು ಕಂಡು ಗ್ರಾಮದಿಂದ ಹೊರಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರಿಗೆ ಮವನಿ ಮಾಡಿದರು.
ಸೆಗಣಿ, ಹುಲ್ಲು, ಕಟ್ಟಿಗೆಯ ರಾಶಿಯಿಂದ ಗ್ರಾಮದ ನೈರ್ಮಲ್ಯ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗಟಾರಗಳ ಸ್ವಚ್ಛತೆ, ಶೌಚಾಲಯ ಬಳಕೆ, ಪ್ಲಾಸ್ಟಿಕ್, ಒಣ ಕಸವನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಗ್ರಾಮ ಪಂಚಾಯತಿ ವತಿಯಿಂದಲೇ ಒಣ ಕಸ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಕಸ ಸಂಗ್ರಹ ಬ್ಯಾಗ್‌ಗಳನ್ನು ನೀಡಲಾಗುತ್ತದೆ ಇದನ್ನು ಬಳಸಿಕೊಳ್ಳಿ ಎಂದು ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.
ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ಘನತ್ಯಾಜ್ಯ ಸಂಗ್ರಹ ಘಟಕವನ್ನು ಇದೇ ಸಂದರ್ಭದಲ್ಲಿ ಜಿಪಂ ಅಧ್ಯಕ್ಷರು ಉದ್ಘಾಟಿಸಿದರು. ಬಳಿಕ ಪೊರಕೆ ಹಿಡಿದು ಅಧಿಕಾರಿಗಳ ತಂಡದೊಂದಿಗೆ ಗ್ರಾಮದ ಬೀದಿಗಳನ್ನು ಸ್ವಚ್ಛಗೊಳಿಸಿ ಗ್ರಾಮಸ್ಥರಿಗೆ ಸ್ವಚ್ಛತೆಯ ಅರಿವು ಮೂಡಿಸಿದರು. ಗ್ರಾಮದ ವೃತ್ತದಲ್ಲಿ ಸ್ವಚ್ಛಮೇವ ಜಯತೆ ಪ್ರತಿಜ್ಞಾವಿಧಿ ಬೋಧಿಸಿದರು.
ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಲೀಲಾವತಿ, ಜಿಪಂ ಸದಸ್ಯ ಮುನಾಫಸಾಬ ಯಲಿಗಾರ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ವಿವಿಧ ಇಲಾಖಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.