ಭೋಪಾಲ್ : ತಾನು ಪ್ರೀತಿಸಿದ ಹುಡುಗಿಯ ಮೇಲೆ ತನಗಿರುವ ಪ್ರೇಮವನ್ನು ಸಾಬೀತು ಪಡಿಸುವ ಸಲುವಾಗಿ ಆಕೆಯ ಮನೆಯ ಮುಂದೆಯೇ ತನ್ನನ್ನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಯುವ ದಳದ ನಾಯಕನ ಹೃದಯ ಸಹಿತ ಅನೇಕ ಬಹುಮುಖ್ಯ ಅಂಗಾಂಗಳನ್ನು ಆತನ ಮನೆಯವರು ದಾನವಾಗಿ ನೀಡುವ ಮೂಲಕ ಮನುಕುಲದ ಮೇಲಿರುವ ತಮ್ಮ ಪ್ರೀತಿಯನ್ನು ಸಾಬೀತು ಪಡಿಸಿದ್ದಾರೆ.
ತನ್ನ ಪ್ರಿಯತಮೆಯ ಮೇಲಿನ ಪ್ರೀತಿಯನ್ನು ಸಾಬೀತು ಪಡಿಸಲು ತನ್ನನ್ನು ಶೂಟ್ ಮಾಡಿಕೊಂಡ 30ರ ಹರೆಯದ ಯುವಕ ಅತುಲ್ ಲೋಖಂಡೆಗೆ “ಮೆದುಳು ಸಾವು’ ಆಗಿರುವುದನ್ನು ವೈದ್ಯರು ಘೋಷಿಸಿದಾಗ ಆತನ ಮನೆಯವರು ಆತನ ಅನೇಕ ಪ್ರಮುಖ ಅಂಗಾಂಗಳನ್ನು ದಾನವಾಗಿ ನೀಡುವ ದೃಢ ಮನಸ್ಸು ಮಾಡಿದರು.
ಒಡನೆಯೇ ಲೋಖಂಡೆಯ ಮೃತ ದೇಹವನ್ನು ಏರ್ ಅಂಬುಲೆನ್ಸ್ ಮೂಲಕ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಆತನ ಹೃದಯವನ್ನು ಸಾಗಿಸುವ ವಾಹನಕ್ಕೆ ಇಂದು ಬೆಳಗ್ಗೆ ಆಸ್ಪತ್ರೆ ಮತ್ತು ವಿಮಾನ ನಿಲ್ದಾಣದ ನಡುವೆ ಕೂಡಲೇ ಗ್ರೀನ್ ಕಾರಿಡಾರ್ ನಿರ್ಮಿಸಲಾಯಿತು.
ಲೋಖಂಡೆಗೆ ತಾನು ಪ್ರೀತಿಸುತ್ತಿದ್ದ 27ರ ಹರೆಯದ ತರುಣಿಯ ತಂದೆಯೊಂದಿಗೆ ಮಾತಿನ ಜಗಳವಾಗಿತ್ತು. ಅದನ್ನು ಅನುಸರಿಸಿ ಜುಲೈ 3ರಂದು ರಾತ್ರಿ ಆತ ಆಕೆಯ ಮನೆಯ ಮುಂದೆಯೇ ತನ್ನನ್ನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಎಸಗಿದ್ದ.
ಅಂದು ಮಧ್ಯರಾತ್ರಿಯ ಹೊತ್ತಿಗೆ ಲೋಖಂಡೆಯ ಬ್ರೇನ್ ಡೆಡ್ ಆಗಿರುವುದನ್ನು ವೈದ್ಯರು ಘೋಷಿಸಿದ ಬಳಿಕ ಆತನ ಮನೆಯವರು ಆತನ ಅಂಗಾಂಗ ದಾನಕ್ಕೆ ನಿರ್ಧರಿಸಿದರು ಎಂದು ಬನ್ಸಾಲ್ ಆಸ್ಪತ್ರೆಯ ಅಂಗಾಂಗ ಕಸಿ ಸಮನ್ವಯಕಾರ ರಾಕೇಶ್ ತಾರೆ ಹೇಳಿದರು.
ಲೋಖಂಡೆಯ ಕಿಡ್ನಿ ಮತ್ತು ಲಿವರ್ ಅನ್ನು ಭೋಪಾಲ್ ನ ಮೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.ಕಣ್ಣುಗಳನ್ನು ಸರಕಾರದ ಹಮೀದಿಯಾ ಆಸ್ಪತ್ರೆಗೆ ರವಾನಿಸಲಾಯಿತು ಎಂದು ರಾಕೇಶ್ ತಿಳಿಸಿದರು.