Advertisement

ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ಅಗತ್ಯ; ಡೋಂಗ್ರೆ

06:34 PM Jul 25, 2022 | Nagendra Trasi |

ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದುಡಿಯುವ ಕಾರ್ಮಿಕ ವರ್ಗ ಹೈರಾಣಾಗಿದೆ. ಸರ್ಕಾರದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಈ ಸಮಾವೇಶ ಒಂದು ವೇದಿಕೆಯಾಗಿದ್ದು, ಬೇಡಿಕೆ ಈಡೇರಿಕೆಗೆ ದೀರ್ಘ‌ವಾದ ಕಠಿಣ ಹೋರಾಟ ಅತ್ಯಗತ್ಯ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ.ಸಿ. ಡೋಂಗ್ರೆ ಹೇಳಿದರು.

Advertisement

ನಗರದ ಕೋರ್ಟ್‌ ಸರ್ಕಲ್‌ನಲ್ಲಿರುವ ಭೋವಿ ಭವನದಲ್ಲಿ ಭಾನುವಾರ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ವತಿಯಿಂದ ಆಯೋಜಿಸಲಾಗಿದ್ದ ಬಿಸಿಯೂಟ ತಯಾರಕರ ರಾಜ್ಯ ಸಂಘಟನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ದುಡಿಯುವ ವರ್ಗದ ಯೋಗಕ್ಷೇಮ ನೋಡಿಕೊಳ್ಳಬೇಕು. ಆದರೆ ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರ ವಿಷಯ ಸೇರಿದಂತೆ ಹಲವು ವಿಚಾರಗಳನ್ನು ನಮ್ಮ ಮುಂದಿಟ್ಟು ನಾವುಗಳೇ ಹೊಡೆದಾಡುವಂತೆ ಸರ್ಕಾರ ಮಾಡುತ್ತಿದೆ. ಹೀಗಾಗಿ ಮುಂದಿನ ಹೋರಾಟಕ್ಕೆ ಸಂಕಲ್ಪ ಮಾಡಿಕೊಳ್ಳಬೇಕಾದ ದಿನ ಇದಾಗಬೇಕು ಎಂದರು.

ಜವಾಬ್ದಾರಿಯೇ ಇಲ್ಲದವನ ಕೈಗೆ ಮನೆ ಯಜಮಾನಿಕೆ ಕೊಟ್ಟಂತೆ, ಜನರ ಬಗ್ಗೆ ಕಾಳಜಿ ಇಲ್ಲದವರು ಸರಕಾರ ನಡೆಸುತ್ತಿದ್ದಾರೆ. ಇಂದು ದೇಶದ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಉದ್ಯೋಗ ಕೊಡಿ ಎಂದರೆ ಉದ್ಯೋಗ ಕಿತ್ತುಕೊಳ್ಳುತ್ತಾರೆ, ವೇತನ ಹೆಚ್ಚಳ ಮಾಡಿ ಎಂದರೆ ಬೆಲೆ ಏರಿಕೆ ಮಾಡುತ್ತಾರೆ. ಇಂತಹ ಸರ್ಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.

ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅವರಗೆರೆ ಚಂದ್ರು ಮಾತನಾಡಿ, ಈಗಿನ ಶಿಕ್ಷಣ ಸಚಿವರು ಮನಷ್ಯತ್ವದ ವಿರೋಧಿಯಾಗಿದ್ದಾರೆ. ಅವರು ಬಿಸಿಯೂಟ ನೌಕರರ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಎಐಟಿಯುಸಿ ರಾಜ್ಯ ಅಧ್ಯಕ್ಷ ಹೊನ್ನಪ್ಪ ಮರೆಮ್ಮಾನವರ್‌ ಮಾತನಾಡಿ, ರಾಜ್ಯ ಸರ್ಕಾರ ಬಿಸಿಯೂಟ ತಯಾರಕರನ್ನು ಕಡೆಗಣಿಸಿದೆ. ಈ ಹಿನ್ನೆಲೆಯಲ್ಲಿ ಬೇಡಿಕೆ ಈಡೇರಿಕೆಗೆ ಉಗ್ರ ಹೋರಾಟ ನಡೆಸಬೇಕಾಗಿದೆ ಎಂದರು.

Advertisement

ರಾಜ್ಯದಲ್ಲಿ ಈಗಾಗಲೇ ಬಿಡುಗಡೆಗೊಳಿಸಲಾಗಿರುವ ಬಿಸಿಯೂಟ ತಯಾರಕರು ಸೇರಿದಂತೆ ಮುಂದೆ ನಿವೃತ್ತಿ ಹೊಂದುವವರಿಗೂ ಅನ್ವಯವಾಗುವಂತೆ 1.50 ಲಕ್ಷ ಇಡುಗಂಟು ಹಾಗೂ ನಿವೃತ್ತಿಯಾದವರಿಗೆ ಮಾಸಿಕ 3 ಸಾವಿರ ರೂ. ನಿವೃತ್ತಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಸಮಾವೇಶಕ್ಕೂ ಮೊದಲು ನಗರದಲ್ಲಿ ಬಿಸಿಯೂಟ ತಯಾರಕರ ಮೆರವಣಿಗೆ ನಡೆಯಿತು. ಸಮುದಾಯ ಭವನದ ಮುಂಭಾಗದಲ್ಲಿ ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ಜಯಮ್ಮ ಧ್ವಜಾರೋಹಣ ನೆರವೇರಿಸಿದರು. ಕಾರ್ಮಿಕ ಸಂಘದ ಅಧ್ಯಕ್ಷ ಎಚ್‌.ಜಿ.ಉಮೇಶ್‌, ಎಐಟಿಯುಸಿ ಖಜಾಂಚಿ ರುದ್ರಮ್ಮ ಬೆಳಲಗೆರೆ, ಎಐಟಿಯುಸಿ ಜಿಲ್ಲಾಧ್ಯಕ್ಷೆ ಜಿ.ಜಿ.ಅಕ್ಕಮ್ಮ, ಉಪಾಧ್ಯಕ್ಷೆ ಶೈಲಜಾ, ಕಲಾವಿದ ಐರಣಿ ಚಂದ್ರು, ಪರಮೇಶ್ವರ ಕೆ. ಹೊಸಕೊಪ್ಪ, ಕಲ್ಪನಾ ಯಾದಗಿರಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next