ಯಾದಗಿರಿ: ಜಿಲ್ಲೆಯಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಈಗಿನಿಂದಲೇ ಕಾರ್ಯಕರ್ತರು ಸಜ್ಜಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶರಣಭೂಪಾಲರಡ್ಡಿ ನಾಯ್ಕಲ್ ಸಲಹೆ ನೀಡಿದರು.
ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ನಗರ ಮತ್ತು ಗ್ರಾಮೀಣ ಮಂಡಲದ ಶಕ್ತಿಕೇಂದ್ರಗಳ ಮುಖ್ಯಸ್ಥರ ಸಭೆಯಲ್ಲಿ ಅವರು ಮಾತನಾಡಿ, ಕಾರ್ಯಕರ್ತರ ಪ್ರಾಮಾಣಿಕ ಪ್ರಯತ್ನದಿಂದಾಗಿ ಮೇಲ್ಮನೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಡಾ| ಬಿ.ಜಿ.ಪಾಟೀಲ್ ಗೆಲುವು ಸಾಧಿಸಲು ಸಾಧ್ಯವಾಗಿದೆ. ಅದರಂತೆ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಲು ಬೇರುಮಟ್ಟದಿಂದ ಸಂಘಟನೆ ಅವಶ್ಯವಾಗಿದೆ ಎಂದರು.
ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಪಕ್ಷ ಆಡಳಿತದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಸರ್ಕಾರದ ಸಾಧನೆಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಜಿಲ್ಲಾಪ್ರಧಾನಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತುಮಕೂರು ಮಾತನಾಡಿ, ಕಾಲಕಾಲಕ್ಕೆ ಪಕ್ಷದ ವರಿಷ್ಠರು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಬೂತ್ ಸಮಿತಿ, ಪೇಜ್ ಪ್ರಮುಖರು, ಪಂಚರತ್ನ ವಿಭಾಗಕ್ಕೆ ಪ್ರಮುಖರನ್ನು ನೇಮಕ ಮಾಡಬೇಕು ಎಂದು ಹೇಳಿದರು.
ನಗರ ಮಂಡಲ ಅಧ್ಯಕ್ಷ ಸುರೇಶ ಅಂಬಿಗೇರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೂರ, ಪ್ರಮುಖರಾದ ಹಣಮಂತ ಇಟಗಿ, ಪ್ರಧಾನ ಕಾರ್ಯದರ್ಶಿ ಗೋವಿಂದಪ್ಪ ಕೊಂಚಟ್ಟಿ, ಶರಣು ಆಶನಾಳ, ಶಿವಕುಮರ ಕೊಂಕಲ್, ಹಣಮಂತ ವಲ್ಯಾಪುರೆ ಹಾಗೂ ಶಕ್ತಿ ಕೇಂದ್ರದ ಪ್ರಮುಖರು ಇದ್ದರು.