ಮಂಡ್ಯ: ರಾಸಾಯನಿಕ ಗೊಬ್ಬರ ಬಳಸಿ ಭತ್ತ ಬೆಳೆದು ಇಳುವರಿ ಕುಂಠಿತದಿಂದ ಬೇಸತ್ತು, ನಂತರ ಸಾವಯವ ಗೊಬ್ಬರ ಬಳಸಿ, ಭತ್ತ ಬೆಳೆದು ಉತ್ತಮ ಇಳುವರಿ ಕಂಡು ಯಶಸ್ವಿಯಾಗಿದ್ದಾರೆ ಪ್ರಗತಿಪರ ರೈತ ಎಂ.ಜೆ.ರಮೇಶ್‌ಪಟೇಲ್.
ಮಳವಳ್ಳಿ ತಾಲೂಕಿನ ನಾಗೇಗೌಡನದೊಡ್ಡಿ ಗ್ರಾಮದ ರೈತ ಎಂ.ಜೆ.ರಮೇಶ್‌ಪಟೇಲ್, ತನಗಿರುವ 20 ಗುಂಟೆ ಜಮೀನಿನಲ್ಲಿ ಉತ್ತಮಸಾವಯವ ಭತ್ತ ಬೆಳೆ ಬೆಳೆದಿದ್ದಾರೆ. ಈಗ ಅದುಉತ್ತಮ ಫಸಲು ನೀಡಿದೆ. ರಾಸಾಯನಿಕ ಗೊಬ್ಬರದಿಂದ ಬೆಳೆ ನಷ್ಟ: ಕಳೆದ 10 ವರ್ಷಗಳಿಂದ ಭತ್ತ ಬೆಳೆಯುತ್ತಿದ್ದಾರೆ.
ಮೊದಲು ಭತ್ತ ನಾಟಿ ಮಾಡುತ್ತಿದ್ದರು. ಆದರೆ, ಕಳೆದ ಹಲವು ವರ್ಷಗಳಿಂದ ಸರಿಯಾದ ಸಮಯಕ್ಕೆ ಕಾಲುವೆಯಲ್ಲಿ ನೀರು ಬರುತ್ತಿರಲಿಲ್ಲ. ಇದರಿಂದ ವಿಳಂಬವಾಗಿ ನಾಟಿ ಮಾಡುವ ಅನಿವಾರ್ಯತೆ ಎದುರಾಗುತ್ತಿತ್ತು. ಇದರಿಂದಇಂಗಾಲದಲ್ಲಿ ಭತ್ತ ನಾಟಿ ಮಾಡುತ್ತಿದ್ದರಿಂದ ಬೆಳೆ ಕುಂಠಿತವಾಗುತ್ತಿತ್ತು. ಇದಕ್ಕಾಗಿ ಎಷ್ಟೇ ರಾಸಾಯನಿಕ ಗೊಬ್ಬರ ನೀಡಿದರೂ ಇಳುವರಿ ಕುಂಠಿತವಾಗುತ್ತಿತ್ತು. ಇದರ ಜತೆಗೆ ಭತ್ತದ ರೋಗಗಳು ಕಾಣಿಸಿಕೊಳ್ಳುತ್ತಿದ್ದವು. ಎಷ್ಟೇ ಕ್ರಿಮಿನಾಶಕ ಬಳಸಿದರೂ ರೋಗ ಹತೋಟಿಗೆ ಬರುತ್ತಿರಲಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು.
ಸಾವಯವ ಭತ್ತಕ್ಕೆ ಆದ್ಯತೆ: ಅದಕ್ಕಾಗಿ ಈ ಬಾರಿ ಸಾವಯವ ಭತ್ತ ಬೆಳೆಯುವ ನಿರ್ಧಾರ ಮಾಡಿ ಅದರಂತೆ ಮೈಸೂರಿನಿಂದ ದೇಶಿ ತಳಿಯ ಬಿತ್ತನೆ ಭತ್ತ ತಂದು ಸಾವಯವ ಕೃಷಿ ಮಾಡಲು ಮುಂದಾದರು. ಇದಕ್ಕೂ ಮುನ್ನ ಗದ್ದೆಗೆ ಒಂದು ಟ್ರ್ಯಾಕ್ಟರ್ ಎಮ್ಮೆ ಗೊಬ್ಬರಹಾಕಿಭೂಮಿ ಫಲವತ್ತತೆ ಬರುವಂತೆ ಮಾಡಿದ್ದರು. ನಂತರ ಪೂರ್ವ ಮುಂಗಾರಿನಲ್ಲಿಚಂಬೆ, ಸೆಣಬುಹಾಗೂಹುರುಳಿ ಚೆಲ್ಲಿದ್ದರು. ಆ ಬೆಳೆಗಳು ಉತ್ತಮ ಫಸಲು ನೀಡಿತು.
ಮನೆಯಿಂದಲೇ ಎಲ್ಲ ತಯಾರಿ: ಆಗಸ್ಟ್‌ನಲ್ಲಿ ಗದ್ದೆ ಹದ ಮಾಡಿ ಒಟ್ಲು ಮಾಡಿ ದೇಶಿ ತಳಿ ಸೇಲಂ ಸಣ್ಣ ಭತ್ತ ಬಿತ್ತನೆ ಮಾಡಿದರು. ಬಿತ್ತನೆ ಜತೆಯಲ್ಲಿ ಬೇವಿನ ಹಿಂಡಿಯನ್ನು ಕೊಡಲಾಗಿತ್ತು. ಅದಾದ 28 ದಿನಗಳ ನಂತರ ಭತ್ತ ನಾಟಿ ಮಾಡಿಸಲಾಯಿತು. ಆದರೆ, ನಾಟಿ ಮಾಡಿದ 15 ದಿನಕ್ಕೆ ಬಿಳಿ ಸೋಗು ರೋಗ ಅಂಟಿತು. ತಕ್ಷಣ ಮನೆಯಲ್ಲಿ ತಯಾರಿಸಿದ್ದ ಜೀವಾಮೃತ ಸಿಂಪಡಿಸಿದಾಗ ರೋಗ ನಿಯಂತ್ರಣಕ್ಕೆ ಬಂದಿತು.
ಭತ್ತದ ಒಡೆ ಬರುವ ಹೊತ್ತಿಗೆ ಸಾವಯವ ಬೆಲ್ಲ ಹಾಗೂ ಪರಂಗಿ ಹಣ್ಣಿನ ಮಿಶ್ರಣವನ್ನು7 ದಿನಗಳಕಾಲ ಕೊಳೆಸಿ ಸಿಂಪಡಿಸಿದ್ದಾರೆ. ನಂತರ ಭತ್ತದ ಸೋಗುಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿತು. ಅದಾದ ಬಳಿಕ ಮನೆಯಲ್ಲಿ ತಯಾರಿಸಿದ ಶುಂಠಿ, ಬೆಳ್ಳುಳ್ಳಿ ಹಾಗೂ ಹಸಿಮೆಣಸಿನ ಕಾಯಿಯ ಮಿಶ್ರಣವನ್ನು ಸಿಂಪಡಿಸಿದಾಗ ಉತ್ತಮ ಫಸಲು ಬಂದಿದೆ ಎಂದು ಖುಷಿಯಿಂದ ಹೇಳುತ್ತಾರೆ ರೈತ ರಮೇಶ್ ಪಟೇಲ್.
ಅರಣ್ಯ ಕೃಷಿಗೂ ಆದ್ಯತೆ : ಸಾವಯವಭತ್ತದ ಜತೆಗೆ ಇರುವ 20 ಗುಂಟೆ ಜಮೀನಿನಲ್ಲೇ ಅರಣ್ಯ ಕೃಷಿಗೂಆದ್ಯತೆ ನೀಡಿದ್ದಾರೆ. ತೇಗ, ಹುಣಸೆ, ಹೆಬ್ಬೇವು, ರಕ್ತ ಚಂದನ ಹಾಗೂಸಿಲ್ವರ್ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಇರುವ 20 ಗುಂಟೆ ಜಮೀನಿನಲ್ಲಿ ಏನು ಮಾಡಲು ಸಾಧ್ಯ ಎನ್ನುವ ಮಂದಿಗೆ ರೈತ ರಮೇಶ್ ಪಟೇಲ್ ಮಾದರಿಯಾಗಿದ್ದಾರೆ.
ಸಾಕಷ್ಟು ರಾಸಾಯನಿಕ ಗೊಬ್ಬರ ಹಾಕಿ ಭೂಮಿ ಫಲವತ್ತತೆ ಜತೆಗೆ ಭತ್ತದ ಬೆಳೆಯೂ ಕುಂಠಿತವಾಗಿ, ಇಳುವರಿ ಬರುತ್ತಿರಲಿಲ್ಲ. ಇದರಿಂದ ನಷ್ಟ ಅನುಭವಿಸುತ್ತಿದ್ದೆನು. ಆದರೆ, ಸಾವಯವ ಭತ್ತ ಬೆಳೆಯಿಂದ ಉತ್ತಮ ಫಸಲು ಬಂದಿರುವುದು ಖುಷಿ ತಂದಿದೆ. ಇದರ ಜತೆಗೆ ಅರಣ್ಯಕೃಷಿಗೂ ಆದ್ಯತೆ ನೀಡಿದ್ದೇನೆ.
–ಎಂ.ಜೆ.ರಮೇಶ್ ಪಟೇಲ್, ರೈತ, ನಾಗೇಗೌಡನದೊಡ್ಡಿ