Advertisement

ವಿದೇಶಿ ಉದ್ಯೋಗದ ಆಕರ್ಷಣೆಯನ್ನೂ ಮೀರಿದ ಸಾವಯವ ಕೃಷಿ

06:47 PM Aug 18, 2020 | Karthik A |

ಯುಎಸ್‌ಎಯಲ್ಲಿ ಉದ್ಯೋಗದಲ್ಲಿದ್ದ ದಂಪತಿ ಒಂದು ದಿನ ಪ್ರಯಾಣಿಸುತ್ತಿದ್ದಾಗ ಸ್ಟ್ರಾಬರಿ ಬೆಳೆಯುತ್ತಿದ್ದ ಸ್ಥಳ ಕಂಡಿತು.

Advertisement

ಅಲ್ಲಿ ಸುತ್ತಾಡುತ್ತಿದ್ದಾಗ ಒಬ್ಟಾತ ರಕ್ಷಣಾತ್ಮಕ ಬಟ್ಟೆ ಧರಿಸಿ ಬೆಳೆಗಳಿಗೆ ಔಷಧ ಸಿಂಪಡಿಸುತ್ತಿದ್ದುವುದು ಕಣ್ಣಿಗೆ ಬಿತ್ತು.

ಅಡ್ಡ ಪರಿಣಾಮ ಬೀರಬಾರದೆಂಬ ಉದ್ದೇಶದಿಂದ ಔಷಧ ಸಿಂಪಡಿಸುವವರು ಕೈಗವಸು, ಮಾಸ್ಕ್ ಮುಂತಾದವುಗಳನ್ನು ಧರಿಸಿ ಮುಂಜಾಗ್ರತೆ ವಹಿಸುತ್ತಾರೆ.

ಆದರೆ ನಾವು ಅಂತಹ ರಾಸಾಯನಿಕಯುಕ್ತ ಆಹಾರವನ್ನು ದಿನಾ ಸೇವಿಸುತ್ತಿದ್ದೇವೆ ಎಂಬ ಆಲೋಚನೆ ಆ ದಂಪತಿಯ ಜೀವನದ ಗುರಿಯನ್ನೇ ಬದಲಿಸಿತು.

ಅದರಂತೆ ಯುಎಸ್‌ಎಯ ಉದ್ಯೋಗ ತ್ಯಜಿಸಿ ಸ್ವಂತ ಊರು ಗುಜರಾತ್‌ಗೆ ಮರಳಿದ ಆ ದಂಪತಿ 10 ಎಕ್ರೆಯಲ್ಲಿ ಸಾವಯವ ಕೃಷಿ ನಡೆಸಿ ಯುವ ಜನತೆಗೆ ಮಾದರಿಯಾಗಿದ್ದಾರೆ. ವಿವೇಕ್‌ ಶಾ ಮತ್ತು ಬೃಂದಾ ಈ ಸಾಹಸಕ್ಕೆ ಕೈ ಹಾಕಿದವರು.

Advertisement

2017ರಿಂದ ದಂಪತಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಗಿ, ಗೋಧಿ, ಬಾಳೆ, ನುಗ್ಗೆ, ಪಪ್ಪಾಯಿ, ಅರಶಿನ, ಶ್ರೀಗಂಧ, ನಿಂಬೆ, ಮೆಂತೆ, ತರಕಾರಿ ಮುಂತಾದ ಆಹಾರ ಉತ್ಪನ್ನ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜತೆಗೆ ಚಿಟ್ಟೆ, ಪಕ್ಷಿ, ಪ್ರಾಣಿಗಳ ನೆಚ್ಚಿನ ಸಸ್ಯಗಳನ್ನೂ ನೆಟ್ಟಿದ್ದಾರೆ.

ಮನೆಯವರ ಪ್ರೋತ್ಸಾಹ
ಕೃಷಿ ಚಟುವಟಿಕೆಯ ಬಗ್ಗೆ ವಿವರಿಸುವ ವಿವೇಕ್‌, ಯುಎಸ್‌ಎಯಿಂದ ಉದ್ಯೋಗ ತ್ಯಜಿಸಿ ಊರಿಗೆ ಬಂದು ಬೇಸಾಯ ಕೈಗೊಳ್ಳುವ ನಮ್ಮ ತೀರ್ಮಾನವನ್ನು ಮನೆಯವರು ಒಪ್ಪಿಕೊಂಡಿದ್ದರು. ಜತೆಗೆ ಸಾಕಷ್ಟು ಪ್ರೋತ್ಸಾಹವನ್ನೂ ನೀಡಿದರು ಎಂದು ಹೇಳುತ್ತಾರೆ. ಅಹಮದಾಬಾದ್‌ ಸಮೀಪದ ನಾಡಿಯಾದ್‌ನ ಹೊರವಲಯದಲ್ಲಿ 10 ಎಕ್ರೆ ಜಮೀನು ಖರೀದಿಸಿದ ವಿವೇಕ್‌ ದಂಪತಿ ತಮ್ಮ ಜಮೀನಿಗೆ ಬೃಂದಾವನ ಎಂದು ಹೆಸರಿಟ್ಟು ಕಾಯಕದಲ್ಲಿ ತೊಡಗಿಸಿಕೊಂಡರು. ಇನ್ನೊಂದು ವಿಶೇಷತೆ ಎಂದರೆ ಜಲ ಸಂರಕ್ಷಣೆಗೂ ಮುಂದಾದ ದಂಪತಿ ಜಮೀನಿನ ಶೇ. 10ರಷ್ಟು ಭಾಗದಲ್ಲಿ ಕಂದಕ ನಿರ್ಮಿಸಿ ಮಳೆ ನೀರು ಇಂಗಿಸುತ್ತಿದ್ದಾರೆ. ನೀರಿಗಾಗಿ ಕೊಳ ತೋಡಿದ್ದಾರೆ. ಇದರಲ್ಲಿ ಮೀನು ಹಾಗೂ ಬಾತುಕೋಳಿಯನ್ನು ಸಾಕಲು ದಂಪತಿ ತೀರ್ಮಾನಿಸಿದ್ದಾರೆ.

ಜೈವಿಕ ವಿಧಾನ
ರಾಸಾಯನಿಕ ಕೀಟ ನಾಶಕ, ಗೊಬ್ಬರವನ್ನು ತ್ಯಜಿಸಿ ಜೈವಿಕ ವಿಧಾನದಲ್ಲಿ “ಬೃಂದಾವನ’ದಲ್ಲಿ ಕೃಷಿ ಮಾಡಲಾಗುತ್ತದೆ. ಕೀಟಗಳ ನಿಯಂತ್ರಣಕ್ಕಾಗಿ ಜಮೀನಿನ ಸುತ್ತ ತುಳಸಿ, ಲಿಂಬೆಹುಲ್ಲು ಮುಂತಾದ ಸಸ್ಯಗಳನ್ನು ನೆಡಲಾಗಿದೆ. ಅಂತರ ಬೆಳೆಯನ್ನೂ ಕೈಗೊಳ್ಳಲಾಗಿದೆ. ಕಾಂಪೋಸ್ಟ್‌ ಗೊಬ್ಬರದ ಮಹತ್ವ ಅರಿತ ಈ ಜೋಡಿ ಜಮೀನಿನಲ್ಲಿ ಒಂದು ಎಲೆಯನ್ನೂ ಉರಿಸುವುದಿಲ್ಲ. ಎಲ್ಲವನ್ನೂ ಗೊಬ್ಬರವಾಗಿ ಪರಿವರ್ತಿಸುತ್ತಾರೆ.

ಕಾರ್ಯಾಗಾರ ಆಯೋಜನೆ
ವಿವೇಕ್‌-ಬೃಂದಾ ದಂಪತಿ ಆಸಕ್ತರಿಗಾಗಿ ಕೃಷಿ ಕಾರ್ಯಾಗಾರವನ್ನೂ ನಡೆಸುತ್ತಾರೆ. ಕೈ ತೋಟ ರಚನೆ, ಜೈವಿಕ ಕೃಷಿ ವಿಧಾನ, ಕಾಂಪೋಸ್ಟ್‌ ಗೊಬ್ಬರ ತಯಾರಿ ಮೊದಲಾದ ವಿಷಯಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ. ʼನಮ್ಮ ಆಹಾರ ವಸ್ತುವನ್ನು ನಾವೇ ಬೆಳೆಯುವುದು, ಅರಣ್ಯ ಸಂರಕ್ಷಿಸುವುದು ತುರ್ತು ಅಗತ್ಯ. ತಡ ಮಾಡದೆ ಸಾವಯವ ಕೃಷಿ ಪದ್ಧತಿಯತ್ತ ಹೊರಳಬೇಕು’ ಎಂದು ವಿವೇಕ್‌ ಶಾ ಕಿವಿ ಮಾತು ಹೇಳುತ್ತಾರೆ.

ರಮೇಶ್‌ ಬಿ. ಕಾಸರಗೋಡು

 

 

 

 

Advertisement

Udayavani is now on Telegram. Click here to join our channel and stay updated with the latest news.

Next