Advertisement

ಪಂಪ್‌ಸೆಟ್ ಸ್ಥಗಿತಕ್ಕೆ ಆದೇಶ

03:35 PM May 11, 2019 | Team Udayavani |

ಕಾರವಾರ: ಗಂಗಾವಳಿ ನದಿ ಪಾತ್ರದಲ್ಲಿ ನೀರಿನ ಹರಿವು ಪ್ರಮಾಣ ಕಡಿಮೆಯಾಗಿರುವುದರಿಂದ ಕುಡಿಯುವ ನೀರು ಸರಬರಾಜಾಗುವ ಗಂಗಾವಳಿ ನದಿ ದಂಡೆಯ ಕೆಲ ಗ್ರಾಮಗಳ ತೋಟಪಟ್ಟಿಗಳಿಗೆ ಅಳವಡಿಸಿರುವ ಕೃಷಿ ಪಂಪ್‌ಸೆಟ್‌ಗಳನ್ನು ಸ್ಥಗಿತಗೊಳಿಸಲು ಕ್ರಮ ವಹಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಮತ್ತು ಕಾರವಾರ ಮತ್ತು ಅಂಕೋಲ ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಆದೇಶಿಸಿದ್ದಾರೆ.

Advertisement

ಕಾರವಾರ ಮತ್ತು ಅಂಕೋಲಾ ಪಟ್ಟಣಗಳ ಜನ ವಸತಿಗೆ ಕುಡಿಯುವ ನೀರಿನ ಸರಬರಾಜಿಗೆ ಪ್ರಮುಖ ನೀರಿನ ಮೂಲವಾಗಿರುವ ಗಂಗಾವಳಿ ನದಿ ಪಾತ್ರದಲ್ಲಿ ಮಳೆಯಾಗಿಲ್ಲದಿರುವುದರಿಂದ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಪರಿಣಾಮ ಕುಡಿಯುವ ನೀರಿನ ಸರಬರಾಜು ಬಹುತೇಕ ಸ್ಥಗಿತವಾಗಿದೆ. ನದಿಯಲ್ಲಿ ದಿನವೂ 5 ಲಕ್ಷ ಲೀಟರ್‌ ನೀರು ಪೂರೈಸಲು ಇರುವ ಜಲಮೂಲ ತೋಟಪಟ್ಟಿಗಳಿಗೆ ಬಳಸುತ್ತಿರುವ ಮಾಹಿತಿ ಜಿಲ್ಲಾಡಳಿತಕ್ಕೆ ಸಿಕ್ಕಿದ್ದು, ಅದನ್ನು ತಕ್ಷಣ ಕಡಿತಗೊಳಿಸಲು ಅಧಿಕಾರಿ ವರ್ಗಕ್ಕೆ ಜಿಲ್ಲಾಡಳಿತ ಸೂಚಿಸಿದೆ. ಈ ವಿಷಯದಲ್ಲಿ ಖಡಕ್‌ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಗಂಗಾವಳಿ ನದಿ ನೀರನ್ನು ಕೆಲವರು ಮಾತ್ರ ಬಳಸಿಕೊಳ್ಳುತ್ತಿರುವ ರಹಸ್ಯ ಮಾಹಿತಿ ಸಹ ಜಿಲ್ಲಾಡಳಿತಕ್ಕೆ ದೊರೆತಿದೆ. ಅಲ್ಲದೇ ಗಂಗಾವಳಿ ಹಿನ್ನೀರಿನ ಭಾಗದಲ್ಲಿ ಗಂಗಾವಳಿ ನದಿಗೆ ಅಳವಡಿಸಿರುವ ಕೃಷಿ ಪಂಪ್‌ಗ್ಳನ್ನು ಸ್ಥಗಿತಗೊಳಿಸಬೇಕಾಗಿದೆ. ಹೆಸ್ಕಾಂ ಅಧಿಕಾರಿಗಳು, ಕಾರವಾರ ನಗರಸಭೆ ಹಾಗೂ ಅಂಕೋಲ ಪುರಸಭೆ ಅಧಿಕಾರಿಗಳು ಪಂಪ್‌ಸೆಟ್‌ಗಳನ್ನು ಸ್ಥಗಿತಗೊಳಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಮೇ ತಿಂಗಳಲ್ಲಿ ಘಟ್ಟದ ಮೇಲ್ಭಾಗದಲ್ಲಿ ಮಳೆಯಾಗಿದ್ದರೆ ಗಂಗಾವಳಿ ನದಿಗೆ ನೀರಿನ ಹರಿವು ಸಮರ್ಪಕವಾಗುತ್ತಿತ್ತು. ಆದರೆ ಮಳೆಯಾಗದ ಕಾರಣ ಹಾಗೂ ತೀವ್ರ ಬೇಸಿಗೆ ಕಾರಣ ನೀರಿನ ಹರಿವು ಕಡಿಮೆಯಾಗಿದೆ. ಅಲ್ಲದೆ ಅಂತರ್ಜಲ ಕುಸಿದಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇರುವುದರಿಂದ ಪ್ರಸ್ತುತ ಗಂಗಾವಳಿ ನದಿಗೆ ಅಳವಡಿಸಿರುವ ಕೃಷಿ ಪಂಪ್‌ಸೆಟ್‌ಗಳನ್ನು ಸ್ಥಗಿತಗೊಳಿಸುವುದು ಅಗತ್ಯವಿದೆ. ಅಲ್ಲದೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ. ಕಾರವಾರ ಉಪವಿಭಾಗದ ಸಹಾಯಕ ಆಯುಕ್ತರು ನದಿ ನೀರನ್ನು ತೋಟಗಳಿಗೆ ಬಳಸುವ ಕುರಿತು ಮೇಲ್ವಿಚಾರಣೆ ವಹಿಸಿ, ಪಂಪ್‌ ಸೆಟ್ ಕನೆಕ್ಷನ್‌ಗಳನ್ನು ನದಿ ನೀರಿನ ಹರಿವಿನಿಂದ ಸ್ಥಗಿತಗೊಳಿಸಿದ ಕ್ರಮದ ಬಗ್ಗೆ ವರದಿ ನೀಡುವಂತೆ ಅವರು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next