Advertisement

ಠಾಣೆಗೆ ಬಂದೂಕು ಒಪ್ಪಿಸಲು ಆದೇಶ

12:43 PM Apr 01, 2018 | Team Udayavani |

ಮಡಂತ್ಯಾರು : ವಿಧಾನ ಸಭೆ ಚುನಾವಣೆ ಕಾವು ಏರುತ್ತಿದ್ದಂತೆ ರಾಜ್ಯಾದ್ಯಂತ ಕಟ್ಟನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮೇ 12ರಂದು ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಅಲ್ಲಲ್ಲಿ ಚೆಕ್‌ ಪೋಸ್ಟ್‌ ಹಾಕಲಾಗಿದ್ದು, ಪೊಲೀಸರ ಹದ್ದಿನ ಕಣ್ಣು ಕಾರ್ಯಾಚರಿಸುತ್ತಿದೆ.

Advertisement

ನೀತಿ ಸಂಹಿತೆ ಜಾರಿಯಾದಲ್ಲಿಂದ ಅಧಿಕಾರಿಗಳು ಒಂದೊಂದೇ ಆದೇಶ ಹೊರಡಿಸುತ್ತಿದ್ದಾರೆ. ಅದರಂತೆ, ಎಲ್ಲ ಬಂದೂಕುಗಳನ್ನು ಸಮೀಪದ ಠಾಣೆಯಲ್ಲಿ ಠೇವಣಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಗುರುವಾರ ಎಸ್ಪಿ ಸಭೆ ಕರೆದಿದ್ದು, ಎಲ್ಲ ಠಾಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಬಂದೂಕುಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಆದೇಶಿಸಿದ್ದಾರೆ. ಬಂದೂಕು ಠೇವಣಿ ಇಡಲು ಎ. 4 ಕೊನೆ ದಿನ.

ಬೆಳೆ ರಕ್ಷಣೆ ಉದ್ದೇಶ
ಮನೆಯಲ್ಲಿ ಬಂದೂಕು ಇಟ್ಟುಕೊಳ್ಳುವಂತಿಲ್ಲ. ಹೆಚ್ಚಿನ ಕೃಷಿಕರಲ್ಲಿ ಬೆಳೆ ರಕ್ಷಣೆ ಉದ್ದೇಶಕ್ಕಾಗಿ ಬಂದೂಕುಗಳಿದ್ದು, 10ಕ್ಕೂ ಹೆಚ್ಚು ಬಂದೂಕುಗಳಿರುವ ಗ್ರಾಮ ಹಲವು ಇವೆ.

ಬೇಕಿದೆ ಅನುಮತಿ
ಗ್ರಾಮೀಣ ಭಾಗದಲ್ಲಿ ಕೃಷಿಕರಿಗೆ ಪ್ರಾಣಿಗಳಿಂದ ತೊಂದರೆ ಆಗದಂತೆ, ಪ್ರಾಣಿಗಳನ್ನು ಹೆದರಿಸಲು ಮಾತ್ರ ಬಂದೂಕಿಗೆ (ಕೋವಿ) ಪರವಾನಿಗೆ ನೀಡಲಾಗಿದೆ. ಉದ್ಯಮಿಗಳು ಮತ್ತು ಜೀವ ಬೆದರಿಕೆ ಇರುವವರು ಆತ್ಮ ರಕ್ಷಣೆಗಾಗಿ ಪರವಾನಿಗೆ ಪಡೆದು ಬಂದೂಕು ಬಳಸುತ್ತಾರೆ. ಸದ್ಯಕ್ಕೆ ಈ ಎಲ್ಲ ಬಂದೂಕುಗಳನ್ನು ಠಾಣೆಗೆ ಒಪ್ಪಿಸುವುದು ಅನಿವಾರ್ಯವಾಗಿದೆ. ಸೆಕ್ಯೂರಿಟಿ ಗಾರ್ಡ್‌ಗಳಿಗೆ ಮತ್ತು ಅಗತ್ಯವಾಗಿ ಬೇಕಾದಲ್ಲಿ ಅನುಮತಿ ಕೋರಿ ಡಿಸಿ, ಎಸ್‌ಪಿ ಒಳಗೊಂಡ ಬೂತ್‌ ಕಮಿಟಿಗೆ ಪತ್ರ ಬರೆದು, ಜಿಲ್ಲಾಧಿಕಾರಿ ಅನುಮತಿ ಮೇರೆಗೆ ಎಸ್‌ಪಿ ಆದೇಶ ಮಾಡಿದರೆ ಮಾತ್ರ ಬಂದೂಕು ಪಡೆಯಬಹುದು.

ತಾ|ನಲ್ಲಿ 2,121 ಬಂದೂಕು
ಚುನಾವಣೆ ಸಂದರ್ಭ ಬಂದೂಕು ಠಾಣಿಗೆ ಒಪ್ಪಿಸುವುದು ಸಹಜ ಪ್ರಕ್ರಿಯೆ. ಭಯ ಮುಕ್ತ ಮತದಾನ ನಡೆಯಬೇಕು, ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಉದ್ದೇಶ ಇದರಲ್ಲಿದೆ. ಬಂದೂಕು ತೋರಿಸಿ, ಮತದಾರರನ್ನು ಬೆದರಿಸಿ ಮತ ಹಾಕಲು ಒತ್ತಡ ಹೇರುವುದನ್ನು ತಪ್ಪಿಸಲು ಇಲಾಖೆ ಇಂತಹ ನಿರ್ಧಾರ ಕೈಗೊಂಡಿದೆ. ಬೆಳ್ತಂಗಡಿ ತಾ|ನಲ್ಲಿ 2,121 ಬಂದೂಕುಗಳಿದ್ದು, ಎಲ್ಲವೂ ಠಾಣೆಯ ವಶವಾಗಲಿವೆ.

Advertisement

ಬಂದೂಕು ವಿವರ
ಬೆಳ್ತಂಗಡಿ ತಾ| ನಲ್ಲಿ ಒಟ್ಟು ನಾಲ್ಕು ಪೊಲೀಸ್‌ ಠಾಣೆಗಳಿವೆ. ಧರ್ಮಸ್ಥಳ-608, ಬೆಳ್ತಂಗಡಿ – 680, ವೇಣೂರು – 410, ಪುಂಜಾಲಕಟ್ಟೆ – 423 ಬಂದೂಕುಗಳಿವೆ. ತಾ|ನಲ್ಲಿ 2,121 ಬಂದೂಕುಗಳಿವೆ. ಕೆಲವರು ಬಂದೂಕುಗಳನ್ನು ಠಾಣೆಯಲ್ಲಿಡದೆ ಗನ್‌ ಹೌಸ್‌ನಲ್ಲಿ ಇಡುತ್ತಾರೆ. ಗನ್‌ಹೌಸ್‌ನಲ್ಲಿ ಇಟ್ಟವರು ಅದರ ರಶೀದಿಯನ್ನು ಠಾಣೆಗೆ ಮುಟ್ಟಿಸಿ, ಗನ್‌ ರಿಜಿಸ್ಟರ್‌ನಲ್ಲಿ ದಾಖಲಿಸಿದರೆ ಮಾತ್ರ ಠೇವಣಿ ಮಾಡಿದಂತಾಗುತ್ತದೆ. ಮಂಗಳೂರು,ಪುತ್ತೂರಿನಲ್ಲಿ ಗನ್‌ ಹೌಸ್‌ ಇವೆ.

ಅಕ್ರಮ ಬಂದೂಕು: ಕಠಿನ ಕ್ರಮ
ಚುನಾವಣೆ ಶಾಂತಿಯುತವಾಗಿ ನಡೆಯಲು ಜನರ ಸಹಕಾರ ಅಗತ್ಯವಾಗಿದೆ. ಬಂದೂಕು ಹೊಂದಿದವರು ಆಯಾ ವ್ಯಾಪ್ತಿಯ ಠಾಣೆಗೆ ಠೇವಣಿ ಮಾಡಲು ಸೂಚನೆ ನೀಡಲಾಗಿದೆ. ಎಲ್ಲರೂ ಆದೇಶ ಪಾಲನೆ ಮಾಡಿ ಭಯಮುಕ್ತ ಮತದಾನ ನಡೆಯಲು ಸಹಕರಿಸಬೇಕಿದೆ. ಅಕ್ರಮ ಬಂದೂಕು ಹೊಂದಿದ ಮಾಹಿತಿ ದೊರೆತಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತದೆ, ಜೈಲು ಶಿಕ್ಷೆಯಾಗುತ್ತದೆ.
– ಸಂದೇಶ್‌ ಪಿ.ಜಿ.
ವೃತ್ತ ನಿರೀಕ್ಷಕರು, ಬೆಳ್ತಂಗಡಿ

ಪ್ರಮೋದ್‌ ಬಳ್ಳಮಂಜ

Advertisement

Udayavani is now on Telegram. Click here to join our channel and stay updated with the latest news.

Next