Advertisement

ಹನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ರದ್ದುಗೊಳಿಸಿ ಆದೇಶ

04:37 PM Jul 20, 2020 | keerthan |

ಹನೂರು(ಚಾಮರಾಜನಗರ): ಪಟ್ಟಣದ ಜಿ.ವಿ.ಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹುದ್ದೆ ಸಹಿತ ವರ್ಗಾವಣೆಯನ್ನು ರದ್ದುಗೊಳಿಸಿ ಉನ್ನತ ಶಿಕ್ಷಣ ಇಲಾಖಾ ಉಪಕಾರ್ಯದರ್ಶಿ ಎನ್.ಆರ್.ಎರೆಕುಪ್ಪಿ ಆದೇಶ ಹೊರಡಿಸಿದ್ದಾರೆ.

Advertisement

ಹನೂರು ತಾಲೂಕಿನ ಏಕೈಕ ಪ್ರಥಮ ದರ್ಜೆ ಕಾಲೇಜನ್ನು ಹುದ್ದೆ ಸಹಿತ ಬೆಳಗಾವಿಯ ನಿಪ್ಪಾಣಿಗೆ ವರ್ಗಾಯಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಉದಯವಾಣಿ ಅಂತರ್ಜಾಲ ತಾಣ ಮತ್ತು ಪತ್ರಿಕೆಯಲ್ಲಿ ಜೂನ್ 11ರಂದು ವರದಿ ಪ್ರಕಟಿಸಿ, ಸರ್ಕಾರದ ಈ ನಿರ್ಧಾರದಿಂದಾಗಿ 325 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದ್ದು ತಾಲೂಕಿನ ವಿದ್ಯಾರ್ಥಿಗಳು 100ಕ್ಕೂ ಹೆಚ್ಚು ಕಿ.ಮೀ ದೂರ ಕ್ರಮಿಸಬೇಕಾದ ಪರಿಸ್ಥಿತಿಯಿದೆ ಎಂದು ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. ಸರ್ಕಾರದ ಈ ನಡೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಣ ತಜ್ಞರು ಮತ್ತು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಅವರು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಮತ್ತು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಕಾಲೇಜು ಸ್ಥಳಾಂತರ ಪ್ರಕ್ರಿಯೆಯನ್ನು ಕೈ ಬಿಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ಸರ್ಕಾರದ ಉಪಕಾರ್ಯದರ್ಶಿ ಅವರು ಕಾಲೇಜನ್ನು ಯಥಾಸ್ಥಿತಿಯಲ್ಲಿ ಹನೂರು ಪಟ್ಟಣದಲ್ಲಿಯೇ ಮುಂದುವರೆಸಲು ಆದೇಶ ಹೊರಡಿಸಿದ್ದಾರೆ.

ಉಪಮುಖ್ಯಮಂತ್ರಿಗಳಿಗೆ ಧನ್ಯವಾದ: ತಾಲೂಕು ಹಾಗೂ ಪಟ್ಟಣದ ಏಕೈಕ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರವನ್ನು ಕೈ ಬಿಟ್ಟಿರುವ ಸರ್ಕಾರದ ಕ್ರಮವನ್ನು ಶಾಸಕ ಆರ್.ನರೇಂದ್ರ ಅವರು ಸ್ವಾಗತಿಸಿದ್ದು ವೈಯಕ್ತಿಕವಾಗಿ, ತಾಲೂಕಿನ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next