Advertisement

ಸರಕಾರಿ ಶಾಲೆಗೆ ಅತಿಥಿ ಶಿಕ್ಷಕರ ನೇಮಕಕ್ಕೆ  ಆದೇಶ

06:00 AM Jun 16, 2018 | |

ಬೆಂಗಳೂರು: ರಾಜ್ಯದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಖಾಲಿ ಇರುವ 25,600 ಶಿಕ್ಷಕರ ಹುದ್ದೆಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸರಕಾರ ಆದೇಶ ನೀಡಿದೆ. 2018-19ನೇ ಸಾಲಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಒಟ್ಟು 25,600 ಶಿಕ್ಷಕರ ಹುದ್ದೆ ಖಾಲಿ ಇದೆ. ಈ ಎಲ್ಲ ಹುದ್ದೆಗೂ ಶರತ್ತು ಮತ್ತು ನಿಬಂಧನೆಗಳನ್ವಯ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ನಿರ್ದೇಶಿಸಿದೆ.

Advertisement

ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ 12,500 ಶಿಕ್ಷಕರ ಹುದ್ದೆ, ಪ್ರೌಢಶಾಲೆಯ 3,100 ಶಿಕ್ಷಕರ ಹುದ್ದೆ ಸಹಿತ 15,600 ಹುದ್ದೆಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಜತೆಗೆ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ 10 ಸಾವಿರ ಪದವೀಧರ ಶಿಕ್ಷಕ(6ರಿಂದ 8ನೇ ತರಗತಿ) ಹುದ್ದೆಗೆ 10 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಅತಿಥಿ ಶಿಕ್ಷಕರಿಗೆ ಮಾಸಿಕ ಗೌರವಧನ ಕ್ರಮವಾಗಿ 7,500 ಹಾಗೂ 8,000 ರೂ. ನಿಗದಿ ಮಾಡಲಾಗಿದೆ. ಗರಿಷ್ಠ 10 ತಿಂಗಳ ಕಾರ್ಯನಿರ್ವಹಣಾ ಅವಧಿಗೆ ಆವಶ್ಯಕವಿರುವ 118.60 ಕೋ. ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲು ಸರಕಾರಕ್ಕೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.

ಶರತ್ತುಗಳು: ಸರಕಾರಿ  ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿ, ಶಿಕ್ಷಕರ ಅನುಪಾತ ಎಲ್ಲ ಜಿಲ್ಲೆಗಳಲ್ಲಿ ಸಮಾನವಾಗಿ ಇಲ್ಲ ಮತ್ತು ಕೆಲವು ಜಿಲ್ಲೆಗಳಲ್ಲಿ ಹೆಚ್ಚುವರಿ ಶಿಕ್ಷಕರು ಇರುವುದರಿಂದ ಅಂತಹ ಶಿಕ್ಷಕರನ್ನು ಮರು ಹಂಚಿಕೆ ಮಾಡಬೇಕು. ಸುಧಾ ರಣಾ ಕ್ರಮವಾಗಿ ಶಿಕ್ಷಕರ ನೇಮಕಾತಿ ಹಾಗೂ ಶಾಲಾವಾರು ಹಂಚಿಕೆ ಬಗೆಗಿನ ನೀತಿಗಳನ್ನು ರೂಪಿಸಬೇಕು. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹೆಚ್ಚುವರಿ ಶಿಕ್ಷಕರು ಹೆಚ್ಚಿದ್ದು, ಆವಶ್ಯಕತೆ ಇರುವ ಕಡೆಗೆ ಅವರನ್ನು ಮರು ಹಂಚಿಕೆ ಮಾಡಬೇಕು. ಶಿಕ್ಷಕರ ಸಂಪನ್ಮೂಲವನ್ನು ಹೆಚ್ಚು ಆರ್ಥಿಕವಾಗಿ, ಪರಿಣಾಮಕಾರಿಯಾಗಿ ಬಳಸಲು ಕ್ರಮ ತೆಗೆದು ಕೊಳ್ಳಬೇಕು ಎಂದು  ಇಲಾಖೆ ಅಧಿಕಾರಿಗಳಿಗೆ ಸರಕಾರ ಶರತ್ತು ವಿಧಿಸಿದೆ.

10 ಸಾವಿರ ಪದವೀಧರ ಶಿಕ್ಷಕರ ನೇರ ನೇಮಕಾತಿ ಅಧಿಸೂಚನೆ ಈಗಾಗಲೇ ಹೊರಡಿಸಲಾಗಿದ್ದು, ಶಿಕ್ಷಕರು ಕರ್ತವ್ಯಕ್ಕೆ ಹಾಜರಾದ ತತ್‌ಕ್ಷಣವೇ ಅತಿಥಿ ಶಿಕ್ಷಕರು ತಮ್ಮ ಹುದ್ದೆಯಿಂದ ತೆರವಾಗಬೇಕು ಎಂಬ ಶರತ್ತು ವಿಧಿಸಿ ನೇಮಕಾತಿ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next