ಆರ್ಕೆಸ್ಟ್ರಾ ಕಥೆ ಆಧರಿಸಿರುವ “ಆರ್ಕೆಸ್ಟ್ರಾ ಮೈಸೂರು’ ಚಿತ್ರ ಜನವರಿ 12 ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ್ ಸ್ನೇಹಿತರೆಲ್ಲ ಸೇರಿ ಮಾಡಿರುವ ಸಿನಿಮಾವಿದು. ಅದರಲ್ಲೂ ಡಾಲಿ ಅವರೇ ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿದ್ದಾರೆ.
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಡಾಲಿ ಧನಂಜಯ್, “ನಮ್ಮ ಮೈಸೂರಿನ ಅನೇಕ ಸ್ನೇಹಿತರು ಸೇರಿ ಮಾಡಿರುವ ಚಿತ್ರವಿದು. ಸುನೀಲ್ ಮೈಸೂರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ನಾಯಕನಾಗಿ ನಟಿಸಿದ್ದಾರೆ. ನಾನು ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿದ್ದೇನೆ. ನಾನು ಡಾಲಿ ಆಗುವುದಕ್ಕೆ ಮುಂಚಿತವಾಗಿ ಈ ಚಿತ್ರದ ಹಾಡುಗಳನ್ನು ಬರೆದಿದ್ದೇನೆ. ಈ ಚಿತ್ರದಲ್ಲಿ ನಾಯಕ ಗೆಲುವನ್ನು ಸಂಭ್ರಮಿಸುವ ಹಾಡೊಂದನ್ನು ಬರೆಯಬೇಕಿತ್ತು. ನನಗೆ ಆಗ ಆ ಗೆಲುವನ್ನು ಸಂಭ್ರಮಿಸಿ ಗೊತ್ತಿರಲಿಲ್ಲ. ಆ ನಂತರ “ಟಗರು’ ಚಿತ್ರದ ಯಶಸ್ಸಿನ ನಂತರ ಈ ಹಾಡನ್ನು ಪೂರ್ಣ ಮಾಡಿದೆ. ಸಂಕ್ರಾಂತಿ ಸಮಯದಲ್ಲಿ ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಆದರೆ ನಮ್ಮ ಚಿತ್ರ ಇದೇ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿದೆ. ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿ ಯೋಸ್ ಈ ಚಿತ್ರವನ್ನು ಅರ್ಪಿಸುತ್ತಿದೆ. ಅಶ್ವಿನ್ ವಿಜಯ್ ಕುಮಾರ್ ಹಾಗೂ ರಘು ದೀಕ್ಷಿತ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ’ ಎಂದರು.
ಆರ್ಕೆಸ್ಟ್ರಾದಲ್ಲಿ ಹಾಡಬೇಕೆಂದು ಆಸೆ ಹೊತ್ತ ಹುಡುಗನ ಕನಸು ನನಸಾಗುತ್ತಾ ಎಂಬುದೇ ಚಿತ್ರದ ಮೂಲ ಕಥೆ. ಬೆಂಗಳೂರಿನ ಹಾಗೆ ಮೈಸೂರಿನಲ್ಲೂ ಒಂದು ಗಾಂಧಿನಗರವಿದೆ. ಅಲ್ಲಿ ಸಾಕಷ್ಟು ಆರ್ಕೆಸ್ಟ್ರಾ ಕಂಪೆನಿಗಳೂ ಇದೆ. ಈ ರೀತಿ ಆರ್ಕೆಸ್ಟ್ರಾದೊಂದಿಗೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ರಘುದೀಕ್ಷಿತ್ ಸಂಗೀತ ನೀಡಿರುವ ಎಂಟು ಹಾಡುಗಳು ನಮ್ಮ ಚಿತ್ರದಲ್ಲಿದೆ. ಅಷ್ಟು ಹಾಡುಗಳನ್ನು ಡಾಲಿ ಅವರೆ ಬರೆದಿದ್ದಾರೆ. ಒಂದು ಹಾಡಿನಲ್ಲಿ ಇಡೀ ಮೈಸೂರೇ ಭಾಗಿಯಾಗಿದೆ ಎನ್ನಬಹುದು ಎನ್ನುವುದು ನಿರ್ದೇಶಕ ಸುನೀಲ್ ಮೈಸೂರು ಮಾತು.
ಚಿತ್ರದ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಮತ್ತೂಬ್ಬ ನಿರ್ಮಾಪಕ ಅಶ್ವಿನ್ ವಿಜಯ್ ಕುಮಾರ್, ನಾಯಕಿ ರಾಜಲಕ್ಷ್ಮೀ ಸೇರಿದಂತೆ ಚಿತ್ರತಂಡ ಅನುಭವ ಹಂಚಿಕೊಂಡಿತು.