Advertisement

ಕರಾವಳಿಯಲ್ಲಿ ಬಿರುಸಿನ ಮಳೆ ; ಮೇ 20ರಂದು ಆರೆಂಜ್‌ ಅಲರ್ಟ್‌

10:29 PM May 19, 2022 | Team Udayavani |

ಮಂಗಳೂರು/ಉಡುಪಿ/ಕಾಸರಗೋಡು : ಮುಂಗಾರು ಆಗಮನಕ್ಕೆ ಮುನ್ನವೇ ಬೇಸಗೆ ಮಳೆ ಬಿರುಸು ಪಡೆದಿದ್ದು, ಕರಾವಳಿಯಾದ್ಯಂತ ಗುರುವಾರ ಉತ್ತಮ ಮಳೆಯಾಗಿದೆ.

Advertisement

ಮಂಗಳೂರು ನಗರದಲ್ಲಿ ಬುಧವಾರ ತಡರಾತ್ರಿ ಆರಂಭವಾದ ಬಿರುಸಿನ ಮಳೆ ಗುರುವಾರವೂ ಮುಂದುವರಿದಿತ್ತು. ಬೆಳಗ್ಗೆ ಬಿರುಸಿನ ಮಳೆಯಾಗಿದ್ದು, ಮಧ್ಯಾಹ್ನದಿಂದ ಸಂಜೆಯವರೆಗೆ ಮಳೆ ತುಸು ಬಿಡುವು ನೀಡುತ್ತು. ಬಳಿಕ ಮಳೆಯ ಆರ್ಭಟ ಜೋರಾಗಿತ್ತು. ಜಿಲ್ಲೆಯ ಬೆಳ್ತಂಗಡಿ, ಗುರುವಾಯನಕೆರೆ, ಮಡಂತ್ಯಾರು, ಧರ್ಮಸ್ಥಳ, ಚಾರ್ಮಾಡಿ, ನಾರಾವಿ, ವೇಣೂರು, ಬಂಟ್ವಾಳ, ಮಾಣಿ, ವಿಟ್ಲ, ಕನ್ಯಾನ, ಪುತ್ತೂರು, ಉಪ್ಪಿನಂಗಡಿ, ಕಡಬ, ಸುಳ್ಯ, ಸುಬ್ರಹ್ಮಣ್ಯ, ಗುತ್ತಿಗಾರು, ಕಲ್ಮಕಾರು, ಪಂಜ, ಬೆಳ್ಳಾರೆ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

ಮಂಗಳೂರಿನ ಗುಜ್ಜರಕೆರೆ ಬಳಿ, ಹೊಗೆಬಜಾರ್‌ ಬಳಿ ಸಣ್ಣಪುಟ್ಟ ಹಾನಿಯಾಗಿದೆ. ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯಲ್ಲಿ ರಸ್ತೆಗೆ ಮರ ಬಿದ್ದು ಸ್ವಲ್ಪ ಕಾಲ ಸಂಚಾರಕ್ಕೆ ತೊಡಕು ಉಂಟಾಗಿತ್ತು. ಸುಳ್ಯದ ಪಯಸ್ವಿನಿ ನದಿಯಲ್ಲಿ ಜಾಕ್‌ವೆಲ್‌ ಕಾಮಗಾರಿ ಪ್ರದೇಶದಲ್ಲಿ ಭೂಕುಸಿತ ಉಂಟಾದ ಪರಿಣಾಮ ಯಂತ್ರಗಳಿಗೆ ಹಾನಿ ಉಂಟಾಗಿದ್ದು, ಕಾಮಗಾರಿ ಸ್ಥಗಿತಗೊಂಡಿದೆ.

ಶಾಲೆಗಳಿಗೆ ದಿಢೀರ್‌ ರಜೆ
ನಿರಂತರ ಮಳೆಯ ಪರಿಣಾಮ ಗುರುವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದರು. ಬೆಳಗ್ಗೆ 8.30ಕ್ಕೆ ರಜೆ ಘೋಷಣೆ ಮಾಡಿದ್ದು, ಆದಾಗಲೇ ಹಲವು ಮಂದಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದರು. ಧಿಡೀರ್‌ ರಜೆ ಘೋಷಣೆಯಿಂದಾಗಿ ಮಕ್ಕಳು ಗೊಂದಲಕ್ಕೆ ಒಳಗಾದರು. ಶಾಲೆಗೆ ಬಂದವರು ವಾಪಸಾದರು.

ಇದನ್ನೂ ಓದಿ : ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದು ನಾಪತ್ತೆಯಾಗಿದ್ದ ಎಂಜಿನಿಯರ್‌ ಪತ್ತೆ!

Advertisement

ಆರೆಂಜ್‌ ಅಲರ್ಟ್‌
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮೇ 20ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ “ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ ಗುಡುಗು ಸಿಡಿಲಿನಿಂದ ಬಿರುಸಿನ ಮಳೆಯಾಗುವ ನಿರೀಕ್ಷೆ ಇದೆ. ಈ ವೇಳೆ ಗಾಳಿಯ ವೇಗ ಮತ್ತು ಸಮುದ್ರದ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ.

ಉಡುಪಿ: ಜಿಲ್ಲೆಯಾದ್ಯಂತ ಗುರುವಾರ ಸುರಿದ ಭಾರೀ ಮಳೆಗೆ ಕೆಲವು ಕಡೆಗಳಲ್ಲಿ ಜಲಾವೃತಗೊಂಡು ಕೃತಕ ನೆರೆ ಸೃಷ್ಟಿಯಾಗಿತ್ತು.

ಉಡುಪಿ, ಕುಂದಾಪುರ, ಕಾರ್ಕಳ, ಹೆಬ್ರಿ, ಬೈಂದೂರು, ಮಣಿಪಾಲ, ಮಲ್ಪೆ, ಕಾಪು, ಹಿರಿಯಡಕ, ಪಡುಬಿದ್ರಿ, ಶಿರ್ವ, ಬ್ರಹ್ಮಾವರ ಭಾಗದಲ್ಲಿ ವ್ಯಾಪಕ ಮಳೆ ಸುರಿದಿದೆ. ಬುಧವಾರ ತಡರಾತ್ರಿಯಿಂದ ಗುರುವಾರ ಇಡೀ ದಿನ ನಿರಂತರ ಮಳೆಯಾಗಿದೆ. ತಗ್ಗು ಪ್ರದೇಶದ ರಸ್ತೆ, ಕೃಷಿ ಭೂಮಿ ಜಲಾವೃತಗೊಂಡಿತ್ತು. ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಿ ಜನ ಸಮಾನ್ಯರು ಹೈರಾಣಾದರು. ಭಾರೀ ಮಳೆಯ ಕಾರಣ ಉಡುಪಿ ಮತ್ತು ಬ್ರಹ್ಮಾವರ ವಲಯದಲ್ಲಿ ಮಧ್ಯಾಹ್ನದ ಬಳಿಕ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ಹೆಬ್ರಿ: ರಸ್ತೆಯಲ್ಲಿ ಹರಿದು ನೀರು
ಹೆಬ್ರಿ ಸುತ್ತಮುತ್ತ ಗುರುವಾರ ಭಾರೀ ಮಳೆಯಾಗಿದೆ. ಹೆಬ್ರಿ ಹಾಗೂ ಹೆಚ್ಚಿನ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಬಯಲು ಪ್ರದೇಶ ಜಲಾವೃತವಾಗಿದ್ದು ಕೆಲವೊಂದು ಶಾಲೆಗಳಿಗೆ ರಜೆ ನೀಡಲಾಗಿತ್ತು .

ವಿದ್ಯುತ್‌ ನಾಪತ್ತೆ
ಬುಧವಾರ ರಾತ್ರಿ ಕಡಿತವಾದ ವಿದ್ಯುತ್‌ ಸಂಪರ್ಕ ಗುರುವಾರ ಸಂಜೆಯಾದರೂ ಬರದ ಕಾರಣ ಜನರು ಸಮಸ್ಯೆ ಎದುರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next