ಕುವೆಂಪು ಪ್ರಧಾನ ವೇದಿಕೆ: ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಪ್ರೊ.ಬರಗೂರು ಮಾತನಾಡಿದ್ದು ಕೆಲವೇ ನಿಮಿಷ. ಆದರೆ ಅಷ್ಟೇ ಅವಧಿಯಲ್ಲಿ ರಾಜ್ಯ, ರಾಷ್ಟ್ರದ ಹಲವು ಸಮಸ್ಯೆಗಳನ್ನು ಚಿತ್ರಿಸಿದರು. ಮಾತ್ರವಲ್ಲ ಇಂತಹ ಸಮಸ್ಯೆಗಳ ವಿರುದ್ಧ ಒಂದು ಪ್ರತಿನಾಯಕತ್ವ ಸೃಷ್ಟಿ ಮಾಡಬೇಕೆಂದು ಆಶಿಸಿದರು. ಪ್ರತಿ ನಾಯಕತ್ವದ ಜವಾಬ್ದಾರಿಯನ್ನು ಸಾಹಿತ್ಯ ಹೊತ್ತುಕೊಳ್ಳಬೇಕು,
ಅದಕ್ಕಾಗಿ ಪ್ರಗತಿಪರರು ಭಿನ್ನಾಭಿಪ್ರಾಯ ಮರೆತು ಒಂದಾಗಬೇಕೆಂದು ಬಯಸಿದರು.
ಅವರ ಮಾತುಗಳಲ್ಲಿ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಧಕ್ಕೆಗೆ ವಿರೋಧವಿತ್ತು. ಬಲಿ ತೆಗೆದುಕೊಳ್ಳುವ ಮನೋಭಾವದ ವಿರುದ್ಧ ನೋವಿತ್ತು. ಇತ್ತೀಚೆಗೆ ಹೆಚ್ಚಾಗಿದೆ ಎನ್ನಲಾದ ಸಾಂಸ್ಕೃತಿಕ ಸರ್ವಾಧಿಕಾರತ್ವದ ವಿರುದ್ಧ ಆಕ್ರೋಶವಿತ್ತು. ಕೇಂದ್ರೀಯ ಶಿಕ್ಷಣ ಕ್ರಮದ ಹೇರಿಕೆ ಬಗ್ಗೆ ರಾಜ್ಯ ಸರ್ಕಾರ ತೋರುತ್ತಿರುವ ನಿಷ್ಕ್ರಿಯತೆ, ಜತೆ ಜತೆಗೆ ಆ ಶಿಕ್ಷಣ ಹೇರಲು ಅದಕ್ಕಿರುವ ಉತ್ಸಾಹದ ಬಗ್ಗೆಯೂ ಬೇಸರವಿತ್ತು. ನಾಡಗೀತೆಯನ್ನು ಇನ್ನೂ ರಾಗಬದ್ಧಗೊಳಿಸದ, ಸಾಲುಗಳನ್ನು ಕತ್ತರಿಸದ ಸರ್ಕಾರದ ಉದಾಸೀನ ಪ್ರವೃತ್ತಿ ವಿರೋಧಿಸಲೂ ಅವರು ಕೆಲವು ಸಾಲುಗಳನ್ನು ಮೀಸಲಿಟ್ಟರು. ರಾಜ್ಯದಲ್ಲಿ ಸಮಾನಶಿಕ್ಷಣ ನೀತಿ ಬರಲಿ ಎಂದು ಆಗ್ರಹಿಸಿದರು.
ತನ್ವೀರ್ ಸೇಠ್ ವಿರುದ್ಧ ವ್ಯಂಗ್ಯ: ಕೇಂದ್ರೀಯ ಶಿಕ್ಷಣ ನೀತಿಯನ್ನು ಹೇರಲು ಯಾಕೆ ಉತ್ಸಾಹ ತೋರುತ್ತಿದ್ದೀರಿ, ಹಾಗಾದರೆ, ರಾಜ್ಯ ಪಠ್ಯದ ಕಥೆಯೇನು ಎಂದು ಕೇಳಿ ನಾನು ಶಿಕ್ಷಣ ಸಚಿವ ತನ್ವೀರ್ ಸೇಠ್ಗೆ ಪತ್ರ ಬರೆದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಾನು ನಂತರ ಮುಖ್ಯಮಂತ್ರಿಗಳಿಗೇ ಪತ್ರ ಬರೆದೆ. ಅವರಿಂದ ಒಂದು ವಾರದಲ್ಲಿ ಪ್ರತಿಕ್ರಿಯೆ ಬಂತು. ಶಿಕ್ಷಣ ಸಚಿವರು ನಿಮ್ಮೊಂದಿಗೆ ಮಾತನಾಡುತ್ತಾರೆ ಎಂದರು. ಬಹುಶಃ ತನ್ವೀರ್ ಸೇಠ್ ಗೆ ಮುಖ್ಯಮಂತ್ರಿಗಳಿಗಿಂತ ಹೆಚ್ಚು ಕಾರ್ಯೋತ್ತಡವಿರಬೇಕು, ಅದಕ್ಕೆ ಅವರಿಂದ ಇದುವರೆಗೆ ಪತ್ರ ಬಂದಿಲ್ಲ ಎಂದು ವ್ಯಂಗ್ಯವಾಡಿದರು. ನಾಡಪಠ್ಯದ ಬಗ್ಗೆ ಮುಖ್ಯಮಂತ್ರಿಗಳಿಗೆ ಇರುವ ಕಾಳಜಿಯನ್ನು ಶಿಕ್ಷಣ ಸಚಿವಾಲಯ ಅರ್ಥ ಮಾಡಿಕೊಳ್ಳಬೇಕು, ರಾಜ್ಯದಲ್ಲಿ ಸಮಾನ ಶಿಕ್ಷಣ ನೀತಿ ಬೇಕೆಂದು ಒತ್ತಾಯಿಸಿದರು.
ಪದ್ಮಾವತಿ’ ವಿರೋಧಿಗಳ ವಿರುದ್ಧ ಪರೋಕ್ಷ ಸಿಡಿಮಿಡಿ: ದೇಶದಲ್ಲಿ ಸಾಂಸ್ಕೃತಿಕ ಸರ್ವಾಧಿಕಾರತ್ವವಿದೆ. ಮಾತನಾಡಿದರೆ ನಾಲಗೆ ಕತ್ತರಿಸುತ್ತೇವೆ, ತಲೆ ಕತ್ತರಿಸುತ್ತೇವೆ ಎಂದು ಹೇಳುತ್ತಾರೆ. ಅಭಿವ್ಯಕ್ತಿಯನ್ನೇ ಬಲಿ ತೆಗೆದುಕೊಳ್ಳಲು ಹೊರಟಿದ್ದಾರೆ. ಮಾನವೀಯತೆ ಜಾಗದಲ್ಲಿ ಮತೀಯತೆ ಸ್ಥಾಪನೆಯಾಗಿದೆ, ಭಾಷೆ ಭ್ರಷ್ಟವಾಗಿದೆ. ಪ್ರಜಾಪ್ರಭುತ್ವದ ಮೂಲ ಆಶಯವಾದ ಭಿನ್ನಾಭಿಪ್ರಾಯವನ್ನೇ ಹತ್ತಿಕ್ಕಲು ಹೊರಟಿದ್ದಾರೆ. ಇದರ ವಿರುದ್ಧ ಪ್ರತಿನಾಯಕತ್ವ ಸೃಷ್ಟಿಯಾಗಬೇಕು, ಅದಕ್ಕಾಗಿ ಪ್ರಗತಿಪರರು ತಮ್ಮ
ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು ಎಂದರು. ಇದು ಪರೋಕ್ಷವಾಗಿ ಬಾಲಿವುಡ್ ಸಿನಿಮಾ ಪದ್ಮಾವತಿ ಬಿಡುಗಡೆ ವಿರೋಧಿಗಳಿಗೆ ನೀಡಿದ ಚಾಟಿಯೇಟಿನಂತಿತ್ತು. ಪದ್ಮಾವತಿಯಲ್ಲಿ ನಟಿಸಿದ ದೀಪಿಕಾ ಪಡುಕೋಣೆಯ ತಲೆ ಕತ್ತರಿಸಬೇಕೆಂದು ಸಮಾಜವಾದಿ ಪಕ್ಷದ ನಾಯಕ ಅಭಿಷೇಕ್ ಸೋಮ್ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಪ್ರತಿನಾಯಕತ್ವದ ಕಲ್ಪನೆಯಿದೆ: ಕನ್ನಡ ಸಾಹಿತ್ಯದಲ್ಲಿ ಖಳನಾಯಕರಿಲ್ಲ, ಆದರೆ ಪ್ರತಿನಾಯಕರಿ¨ªಾರೆ. ಪಂಪ, ರನ್ನ ದುರ್ಯೋಧನನನ್ನು ಉದಾತ್ತೀಕರಿಸಿದ್ದಾರೆ, ಕುಮಾರವ್ಯಾಸ ವ್ಯಾಧನನ್ನು ಧರ್ಮವ್ಯಾಧ ಎಂದಿದ್ದಾನೆ. ಕುವೆಂಪು ರಾವಣನಲ್ಲಿ ರಾಮತ್ವವನ್ನು ಹುಡುಕಿದ್ದಾರೆ. ವಚನಕಾರರು ಶಿವಮಾನವನನ್ನು, ದಾಸರು ಹರಿಮಾನವನನ್ನು, ಕನಕದಾಸರು
ರಾಗಿಮಾನವನನ್ನು ತೋರಿದರು. ಕನ್ನಡ ಸಾಹಿತ್ಯದಲ್ಲಿ ಮನುಷ್ಯತ್ವದ ಕಲ್ಪನೆಯಿದೆ. ಸದ್ಯ ಅಂತಹ ಪ್ರತಿನಾಯಕತ್ವ ಸೃಷ್ಟಿಯಾಗಬೇಕು ಎನ್ನುವುದು ಬರಗೂರು ಆಸೆ ಮತ್ತು ಆಶಯ.
ಕೆ. ಪೃಥ್ವಿಜಿತ್