ಕುಣಿಗಲ್: ತಾಲೂಕಿನ ಕುಣಿಗಲ್- ಹುಲಿಯೂರು ದುರ್ಗ ರಾಜ್ಯ ಹೆದ್ದಾರಿ 33 ಮಾರ್ಗದ ದೊಡ್ಡ ಮಾವತ್ತೂರು ಬಳಿ ಕೆಶಿಫ್ ರಸ್ತೆಯಲ್ಲಿ ಅನಧಿಕೃತವಾಗಿ ಟೋಲ್ ನಿರ್ಮಿಸುತ್ತಿರುವ ಕೆಆರ್ ಐಡಿಎಲ್ ವಿರುದ್ಧ ರಾಜ್ಯ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಹಾಗೂ ರೈತರು ಸೋಮವಾರ ಟಿ.ಎಂ. ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್, ತಾಲೂಕು ಅಧ್ಯಕ್ಷ ಅನಿಲ್‌ಗೌಡ ಹಾಗೂ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನೆ ವೇದಿಕೆ ಅಧ್ಯಕ್ಷ ನಿಡಸಾಲೆ ಸತೀಶ್ ನೇತೃತ್ವದಲ್ಲಿ ಹುಲಿಯೂರು ದುರ್ಗ ಪ್ರವಾಸಿ ಮಂದಿರದ ಆವರಣದಲ್ಲಿ ಸಮಾವೇಶಗೊಂಡ ರೈತರು ಹಾಗೂ ಸಂಘದ ಪದಾಧಿ ಕಾರಿಗಳು ಬಳಿಕ ದೊಡ್ಡಮಾವತ್ತೂರು ಬಳಿ ಟೋಲ್ ನಿರ್ಮಾಣ ಸ್ಥಳಕ್ಕೆ ತೆರಳಿ ಕೆಶಿಪ್ ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಆನಂದ್ ಪಟೇಲ್ ಮಾತನಾಡಿ, ಸರ್ವೀಸ್ ರಸ್ತೆ ಸೇರಿ ಯಾವುದೇ ಮೂಲಸೌಕರ್ಯ ಕಲ್ಪಿಸದೇ ಅಧಿಕಾರಿಗಳು ಅವೈಜ್ಞಾನಿಕ ಹಾಗೂ ಅಕ್ರಮವಾಗಿ ಟೋಲ್ ನಿರ್ಮಿಸುತ್ತಿರುವುದು ಖಂಡನೀಯ. ರಸ್ತೆ ಕೆಶಿಫ್‌ಗೆ ಸೇರಿದರೂ ಅನುಮತಿ ಪಡೆಯದೇ ಕೆಆರ್ ಐಡಿಎಲ್‌ನ ಅಧಿಕಾರಿಗಳು ಅಕ್ರಮವಾಗಿ ಟೋಲ್ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದರು. ರೈತರು ಹಾಗೂ ಸಾರ್ವಜನಿಕರ ಸಂಚಾರ ದೃಷ್ಟಿ ಯಿಂದ ಕೃಷಿ ಜಮೀನು ಬಿಟ್ಟು ಕೊಟ್ಟು ಕೆಶಿಫ್ ರಸ್ತೆ ನಿರ್ಮಿಸಲಾಗಿದೆ. ರೈತರು ಜಮೀನು ಬಿಟ್ಟುಕೊಟ್ಟಿರು ವುದಲ್ಲದೇ ಟೋಲ್ ಕಟ್ಟಿ ಸಂಚರಿಸುವ ಸ್ಥಿತಿಗೆ ಬಂದು ನಿಂತ್ತಿದ್ದಾರೆ. ವಾಹನ ಖರೀದಿಸುವಾಗ ಸರ್ಕಾರಕ್ಕೆ ತೆರೆಗೆ ಕಟ್ಟಿದ್ದೇವೆ. ಈಗ ಸಂಚಾರಕ್ಕೂ ತೆರಿಗೆ ಕಟ್ಟ ಬೇಕಿದೆ. ಸರ್ಕಾರ ಜನರ ಭಿಕ್ಷೆಗೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ನಮ್ಮದೇ ತೆರಿಗೆ ಹಣ: ನಿಡಸಾಲೆ ಸತೀಶ್ ಮಾತನಾಡಿ, ಕೆಶಿಪ್ ರಸ್ತೆ ನಿರ್ಮಿಸಲು ನಮ್ಮದೇ ತೆರಿಗೆ ಹಣ ವೆಚ್ಚ ಮಾಡಲಾಗಿದೆ. ಜೊತೆಗೆ ಸುತಮುತ್ತಲಿನ ಬೆಟ್ಟ ಗುಡ್ಡ ಕಡಿದು ರಸ್ತೆಗೆ ಜೆಲ್ಲಿ ಹಾಕಲಾಗಿದೆ. ರೈತರ ಜಮೀನಿನ ಮಣ್ಣನ್ನೇ ಬಳಸಿ ರಸ್ತೆ ನಿರ್ಮಿಸಲಾಗಿದೆ. ಎಲ್ಲವನ್ನೂ ನಮ್ಮಿಂದಲೇ ಪಡೆದು ರಸ್ತೆ ನಿರ್ಮಿಸಿ ನಮ್ಮಿಂದಲೇ ಟೋಲ್ ವಸೂಲಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಹರಿಹಾಯ್ದರು. ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ತಾಲೂಕಿನ= ವಿವಿಧೆಡೆ ರಸ್ತೆ ಅಪಘಾತ ಸಂಭವಿಸಿ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕೆಶಿಪ್ ಅಧಿಕಾರಿ ಗಳೇ ಕಾರಣ. ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಕಾರ್ಯದರ್ಶಿ ವೆಂಕಟೇಶ್‌ಗೌಡ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಲಕ್ಷ್ಮಣ್, ಮಾನವ ಹಕ್ಕು ಮತ್ತು ಭ್ರಷ್ಟಚಾರ ನಿರ್ಮೂಲನೆ ವೇದಿಕೆ ಕಾರ್ಯದರ್ಶಿ ಎಂ.ಎಂ.ಯೋಗೀಶ್, ಮುಖಂಡ ನಿಡಸಾಲೆ ಪ್ರಸಾದ್ ಇತರರಿದ್ದರು.