Advertisement

ವೈದ್ಯಕೀಯ ಆಯೋಗ ವಿಧೇಯಕಕ್ಕೆ ವಿರೋಧ

09:15 AM Dec 31, 2017 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ ಪ್ರಸ್ತಾಪಿತ “ರಾಷ್ಟ್ರೀಯ ವೈದ್ಯಕೀಯ ಆಯೋಗ- 2017’ರ (ಎನ್‌ಎಂಸಿ) ವಿಧೇಯಕವು ದೇಶದ ವೈದ್ಯ ಚಿಕಿತ್ಸಾ ವ್ಯವಸ್ಥೆಗೆ ಮಾತ್ರವಲ್ಲದೆ ಜನರ ಆರೋಗ್ಯ ಸೇವೆಗೂ ಮಾರಕವಾಗಿದ್ದು, ಇದನ್ನು ಕೈಬಿಡುವಂತೆ ರಾಷ್ಟ್ರವ್ಯಾಪಿ ಸಂಸದರಿಗೆ ಒತ್ತಡ ಹೇರಲು ನಿರ್ಧರಿಸಲಾಗಿದೆ ಎಂದು ಭಾರತೀಯ ವೈದ್ಯ ಪರಿಷತ್‌ (ಎಂಸಿಐ) ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಚ್‌.ಎನ್‌.ರವೀಂದ್ರ ತಿಳಿಸಿದ್ದಾರೆ.

Advertisement

ನಗರದಲ್ಲಿರುವ ಕರ್ನಾಟಕ ವೈದ್ಯ ಪರಿಷತ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಐದೂವರೆ ವರ್ಷ ವೈದ್ಯ ಪದವಿ ಮುಗಿಸಿದವರು ನೀಡುವ ಚಿಕಿತ್ಸೆ, ಅಲೋಪಥಿ ಚಿಕಿತ್ಸಾ ಪದ್ಧತಿಯ ಅಧ್ಯಯನ ನಡೆಸದೆ ಪೂರಕ
ಕೋರ್ಸ್‌ಗಳ (ಬ್ರಿಡ್ಜ್ ಕೋರ್ಸ್‌) ಮೂಲಕ ನೀಡುವ ಅಲೋಪಥಿ ಚಿಕಿತ್ಸೆ ಒಂದೇ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಗುಣಮಟ್ಟದ ವೈದ್ಯ ಶಿಕ್ಷಣ ವ್ಯವಸ್ಥೆಯಿರುವ ಜಗತ್ತಿನ ಆರು ರಾಷ್ಟ್ರಗಳಲ್ಲಿ ಭಾರತವು ಒಂದು. ಎಂಸಿಐನ ಮಾನ 
ದಂಡ ಅಷ್ಟರ ಮಟ್ಟಿಗೆ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಕಾಯ್ದುಕೊಂಡಿದೆ. ಆದರೆ ಎಂಸಿಐನಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳುವುದಿಲ್ಲ.

ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐಗೆ ವಹಿಸಲಿ, ಆರೋಪಿಗಳನ್ನು ಜೈಲಿಗೆ ಕಳುಹಿಸಲಿ. ಅದನ್ನು ಬಿಟ್ಟು ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ಕಾರಣಕ್ಕೆ ಎಂಸಿಐ ಸಂಸ್ಥೆಯನ್ನೇ ಮುಚ್ಚಿ ಹೊಸದಾಗಿ ಎನ್‌ಎಂಸಿ ರಚನೆಗೆ ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಇಂದು ಸಭೆ: ಹೊಸದಾಗಿ ಎನ್‌ಎಂಸಿ ಸ್ಥಾಪಿಸಬೇಕೆಂಬ ನೀತಿ ಆಯೋಗದ ಸಲಹೆಯಂತೆ ಕೇಂದ್ರ ಆರೋಗ್ಯ ಸಚಿವರು ಲೋಕಸಭೆಯಲ್ಲಿ ಶುಕ್ರವಾರ ಕರಡು ವಿಧೇಯಕ ಮಂಡಿಸಿದ್ದು, ಜ.2ರಂದು ಚರ್ಚೆಗೆ ಬರಲಿದೆ. ಆ ಹಿನ್ನೆಲೆಯಲ್ಲಿ ಭಾರತೀಯ ವೈದ್ಯ ಪರಿಷತ್‌ನ ಕೋರ್‌ ಸಮಿತಿ ಸಭೆ ಭಾನುವಾರ ನವದೆಹಲಿಯಲ್ಲಿ ನಡೆಯಲಿದ್ದು, ಅಲ್ಲಿ
ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು. ವಿಧೇಯಕ ವಿರೋಧಿಸಿ ವೈದ್ಯಕೀಯ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಸೋಮವಾರ ಸಂಜೆ ಮೇಣದಬತ್ತಿ ಬೆಳಗಿಸಿ ಕರಾಳ ದಿನ ಆಚರಿಸುವ ಸಾಧ್ಯತೆ ಇದೆ ಎಂದು ಹೇಳಿದರು.

Advertisement

ಭ್ರಷ್ಟಾಚಾರದ ಕಾರಣಕ್ಕೆ ಎಂಸಿಐ ಮುಚ್ಚಲು ಕೇಂದ್ರ ಮುಂದಾಗಿದೆ. ಆದರೆ, ಎನ್‌ಎಂಸಿ ಅನುಷ್ಠಾನಕ್ಕೆ ಬಂದರೆ ಅದು ಮತ್ತಷ್ಟು ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸುವ ಸಾಕಷ್ಟು ಅಂಶಗಳಿವೆ. ಮುಖ್ಯವಾಗಿ ಎನ್‌ಎಂಸಿ ಅಧೀನದಲ್ಲೇ
ಪದವಿ ವೈದ್ಯಕೀಯ ಶಿಕ್ಷಣ ಮಂಡಳಿ, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿ,ವೈದ್ಯಕೀಯ ಮೌಲ್ಯಮಾಪನ ಮಂಡಳಿ ಹಾಗೂ ವೈದ್ಯಕೀಯ ನೋಂದಣಿ ಮಂಡಳಿ ಎಂಬ 4 ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತದೆ. ಸ್ವಾಯತ್ತ ಸಂಸ್ಥೆಗಳು ಹೆಚ್ಚಾದಷ್ಟೂ ಅಕ್ರಮಗಳಿಗೆ ಹೆಚ್ಚು ಆಸ್ಪದ ನೀಡಿದಂತಾಗುತ್ತದೆ ಎಂದು ದೂರಿದರು.

ಸದ್ಯ ಶೇ.80ರಷ್ಟು ವೈದ್ಯಕೀಯ ಸೀಟುಗಳ ಶುಲ್ಕವನ್ನು ಸರ್ಕಾರಗಳೇ ನಿಗದಿಪಡಿಸುತ್ತವೆ. ಆದರೆ, ಉದ್ದೇಶಿತ ಎನ್‌
ಎಂಸಿ ವಿಧೇಯಕದಡಿ ಶೇ.40ರಷ್ಟು ಸೀಟುಗಳಿಗಷ್ಟೇ ಸರ್ಕಾರಗಳು ಶುಲ್ಕ ನಿಗದಿಪಡಿಸಲಿವೆ. ಇದರಿಂದ
ಸಾಮಾನ್ಯ ಕುಟುಂಬದ ವಿದ್ಯಾರ್ಥಿಗಳಿಗೆ ವೈದ್ಯ ಪದವಿ ಇನ್ನಷ್ಟು ದುಬಾರಿಯಾಗಲಿದೆ. ಐದೂವರೆ ವರ್ಷ ವೈದ್ಯಕೀಯ ಪದವಿ ಮುಗಿಸಿದವರು ನಂತರ ಎಕ್ಸಿಟ್‌ ಪರೀಕ್ಷೆ ಪಾಸಾದರಷ್ಟೇ ವೃತ್ತಿ ಆರಂಭಿಸಲು ಸಾಧ್ಯವೆಂಬ ನಿಯಮ ರೂಪಿಸಲಾಗುತ್ತಿದೆ. ಇದು ಸಹ ವೈದ್ಯ ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ ಎಂದು ಹೇಳಿದರು.

ಹಾಲಿ ಎಂಸಿಐನಲ್ಲಿ 125 ಸದಸ್ಯರಿದ್ದು, 107 ಮಂದಿ ಚುನಾಯಿತರಿದ್ದಾರೆ. ಆದರೆ, ಎನ್‌ಎಂಸಿಯಲ್ಲಿ ಕೇವಲ ಐದು ಮಂದಿ ಚುನಾಯಿತ ಸದಸ್ಯರಿದ್ದು, 59 ಮಂದಿ ನಾಮನಿರ್ದೇಶಿತ ಸದಸ್ಯರಿರುತ್ತಾರೆ. ನಾಮನಿರ್ದೇಶಿತರು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವುದೇ ಇಲ್ಲ. ಇದರಿಂದ ಸಾಮಾನ್ಯ ಜನರಿಗೆ ಮಾರಕವಾಗುವ ಆದೇಶಗಳು ಜಾರಿ 
ಯಾಗುವ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ.ಹಾಗಾಗಿ, ಈ ವಿಧೇಯಕವನ್ನು ವಾಪಸ್‌ ಪಡೆಯುವಂತೆ ಎಲ್ಲ ಸಂಸದರಿಗೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next