ಕೂಟ್ಟೂರು: ಪಟ್ಟಣದ ಮೂಲಕ ಹಾದು ಹೋಗಲಿರುವ ಅರಭಾವಿ-ಜಗಳೂರು ಹೆದ್ದಾರಿಯನ್ನು ನಿರ್ಮಿಸಬಾರದು ಎಂದು ಆಗ್ರಹಿಸಿ ಕೊಟ್ಟೂರು ಚಾನುಕೋಟಿ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಗುರುವಾರ ಮೌನಪ್ರತಿಭಟನೆ ನಡೆಸಿದರು.
ಉಜ್ಜಯಿನಿ ರಸ್ತೆಯ ಸೋಮಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೌನ ಪ್ರತಿಭಟನೆ ಪಟ್ಟಣದ ರೇಣುಕಾ ಟಾಕೀಸ್ ರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿತು. ಕಚೇರಿ ಮುಂದೆ ಪ್ರತಿಭಟನಕಾರರು ಕೆಲ ಹೊತ್ತು ಧರಣಿ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಚಾನುಕೋಟಿ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ರಾಷ್ಟ್ರೀಯ ಹೆದ್ದಾರಿಯನ್ನು ಪಟ್ಟಣದೊಳಗಿಂದ ಹಾದು ಹೋಗುವಂತೆ ನಿರ್ಮಿಸುವುದಕ್ಕೆ ನಮ್ಮ ವಿರೋಧವಿದೆ. ಹಾಲಿ ರಸ್ತೆಯ ಅಗಲೀಕರಣಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಅಗಲೀಕರಣಕ್ಕೂ ಮುನ್ನ, ತೆರವುಗೊಳಿಸುವ, ನಂತರ ಕಾಮಗಾರಿ ಕೈಗೊಳ್ಳುವ, ಸಂತ್ರಸ್ತರಿಗೆ ಪರಿಹಾರದ ರೂಪುರೇಷೆಗಳ ಕುರಿತು ಲೋಕೋಪಯೋಗಿ ಇಲಾಖೆ ಸ್ಪಷ್ಟ ಪಡಿಸಬೇಕು ಹೊರತು ಅಗಲೀಕರಣ ಕಾರ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ಪಟ್ಟಣದ ಹೊರ ವಲಯದಿಂದ ಹಾದು ಹೋಗುವಂತೆ ನಿರ್ಮಿಸಬೇಕು. ಅದನ್ನು ಬಿಟ್ಟು, ಪಟ್ಟಣದ ಒಳಗಿಂದ ಹಾದು ಹೋಗುವಂತೆ ನಿರ್ಮಿಸಿದರೆ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಲಿದೆ. ರಸ್ತೆ ಅಗಲೀಕರಣದಿಂದ ಸ್ಥಳೀಯ ಹಲವು ಜನರು ತೊಂದರೆ ಅನುಭವಿಸಲಿದ್ದಾರೆ.
ಹೀಗಾಗಿ ಮೊದಲು ಬೇಡಿಕೆಗಳನ್ನು ಈಡೇರಿಸಿದ ಬಳಿಕ ರಸ್ತೆ ನಿರ್ಮಾಣ ಮತ್ತು ಅಗಲೀಕರಣ ಕಾರ್ಯಕ್ಕೆ ಮುಂದಾಗುವಂತೆ ಸ್ವಾಮೀಜಿಗಳು ಒತ್ತಾಯಿಸಿದರು. ಬಳಿಕ ತಹಶೀಲ್ದಾರ್ ಕೆ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಂಜುನಾಥ್, ಮೌನ ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಧರಣಿ ಕೈಬಿಟ್ಟರು. ಈ ಸಂದರ್ಭದಲ್ಲಿ ಸ್ಥಳೀಯ ಹಲವಾರು ನಿವಾಸಿಗಳು ವಾಣಿಜ್ಯ ಮಳಿಗೆ ಮಾಲೀಕರು, ಬಾಡಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.