Advertisement

ನಮಗೇ ಸಾಕಾಗದೆ, ಬೇರೆಯವರಿಗೆ ಕೊಡೊದ್ಹೇಗೆ ?

04:12 PM Jun 15, 2022 | Team Udayavani |

ಯಲ್ಲಾಪುರ: ನಮಗೇ ಸಾಕಾಗದೆ ಇರುವ ನೀರನ್ನು ಬೇರೆಯವರಿಗೆ ಕೊಡುವ ಪ್ರಸ್ತಾಪ ಅತ್ಯಂತ ಅವೈಜ್ಞಾನಿಕ. ಈ ಕುರಿತು ಜನಾಂದೋಲನವಾಗಬೇಕು. ರಾಜಕೀಯ ಒತ್ತಡ ಮತ್ತು ಸಹಿ ಅಭಿಯಾನದ ಮೂಲಕ ನದಿ ಜೋಡಣೆ ಯೋಜನೆ ವಿರೋಧಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

Advertisement

ಮಂಚಿಕೇರಿಯ ಸಮಾಜ ಮಂದಿರದಲ್ಲಿ ಮಂಗಳವಾರ ನಡೆದ ಬೇಡ್ತಿ ಮತ್ತು ವರದಾ ನದಿ ಜೋಡಣೆ ಕುರಿತ ಜಾಗೃತಿ ಸಭೆಯ ಸಾನ್ನಿದ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಾರಣವಿಲ್ಲದೇ ಯೋಜನೆ ವಿರೋಧಿಸುತ್ತಿದ್ದಾರೆನ್ನುವವರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಯೋಜನೆ ವಿರೋಧಿಸಲು ಸಾಕಷ್ಟು ಕಾರಣಗಳಿವೆ. ಘಟ್ಟದ ಮೇಲೆ ಕೆಳಗಿನ ರೈತರು, ಮೀನುಗಾರಿಗೆ ಹೊಡೆತವುಂಟಾಗುತ್ತದೆ. ಈ ಯೋಜನೆ ಯಾರಿಗೂ ಪ್ರಯೋಜನವಾಗದು. ಬಯಲುಸೀಮೆ ಜನರ ನೀರಿನ ಬರ ನೀಗಿಸಲು ಮಳೆನೀರು ಕೊಯ್ಲು ಮೂಲಕ ನೀರಿನ ಕೊರತೆ ನೀಗಿಸಲಿ. ಇಂತಹ ಯೋಜನೆ ಅನುಷ್ಠಾನದಲ್ಲಿ ಪ್ರಾಮಾಣಿಕತೆ ಬೇಕಿಲ್ಲ. ಯಾವುದೋ ದುರ್ಲಾಭಗೋಸ್ಕರ ಯೋಜನೆ ಮಾಡುವುದಾಗಿದೆ. ವಿನಾಶಕಾರಿ ಯೋಜನೆ ಬೇಡವೇ ಬೇಡ. ನಮ್ಮ ವಿರೋಧ ಪ್ರಕೃತಿಯ ಉಳಿವಿಗಾಗಿ. ಅದು ಉಳಿದು ಮಾನವ ಕುಲವೂ ಉಳಿಯಬೇಕು ಎಂದರು.

ಸೋಂದಾ ಶ್ರೀ ಕ್ಷೇತ್ರ ಸ್ವಾದಿ ಜೈನ ಮಠದ ಶ್ರೀ ಭಟ್ಟಾಕಳಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಪಶ್ಚಿಮ ಘಟ್ಟ ಶ್ರೇಣಿಯನ್ನು ನಾವೇ ರಕ್ಷಿಸಿಕೊಳ್ಳಬೇಕು. ನಮ್ಮ ಬಳಿ ಇದ್ದರೆ ನಾವು ಬೇರೆಯವರಿಗೆ ಕೊಡಬಹುದು. ನಮ್ಮ ಬಳಿಯಲ್ಲಿಯೇ ಇಲ್ಲದೇ ಕೊಡುವುದು ಹೇಗೆ?. ಪರಿಸರ ನಾಶ ಮಾಡಿ ಯೋಜನೆ ರೂಪಿಸುವ ವಿಧಾನ ತಪ್ಪು. ನದಿ ತಿರುವು ವರದಿಯನ್ನು ನೋಡಿದಾಗಲೇ ಇದು ಗುರಿ ಮುಟ್ಟದು ಎಂಬುದು ವೇದ್ಯವಾಗುತ್ತದೆ. ನಮ್ಮ ಜಲ, ನೆಲವನ್ನು ಸಂರಕ್ಷಿಸೋಣ. ನಮ್ಮ ಯೋಜನೆಗಳು ಎತ್ತಿನ ಹೊಳೆ ಯೋಜನೆಯಂತಾಗಬಾರದು ಎಂದರು.

ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ್‌ ಮಾತನಾಡಿ, ಯೋಜನೆಯ ಸಾಧಕ ಬಾಧಕದ ಬಗ್ಗೆ ಈ ಜಿಲ್ಲೆಯ ಶಾಸಕರ ಕೂಡಿಸಿಕೊಂಡು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ಜಿಲ್ಲೆಯಲ್ಲಿ ಸಾಕಷ್ಟು ಕಳೆದುಕೊಂಡಿದ್ದೇವೆ. ಒಂದ ಕಡೆ ಯೋಜನೆ ಸ್ವಾಗತಿಸುತ್ತೇವೆ. ಇನ್ನೊಂದೆಡೆ ಯೋಜನೆ ವಿರೋಧಿಸುತ್ತಿದ್ದೇವೆ. ಶ್ರೀಗಳ ಮತ್ತು ಜಿಲ್ಲೆಯ ಜನರಿಗೆ ನೋವಾಗುವ ಯಾವ ಯೋಜನೆಗೂ ನನ್ನ ವೈಯಕ್ತಿಕವಾದ ಸಹಮತಿಯೂ ಇಲ್ಲ ಎಂದರು.

Advertisement

ಭೂಗರ್ಭ ಶಾಸ್ತ್ರಜ್ಞ ಡಾ| ಜಿ.ವಿ. ಹೆಗಡೆ ಮಾತನಾಡಿ, ನದಿ ತಿರುವು ಅವೈಜ್ಞಾನಿಕವೇ ಆಗಿದೆ. ದುಂದುವೆಚ್ಚ ಮಾಡಿ ನೀರಿನ ಯೋಜನೆ ರೂಪಿಸಿದೆ. ಮುಂದೆ ಈ ಯೋಜನೆ ಗುರಿ ಕೂಡಾ ತಲುಪದು. ನಮಗಿರುವ ನೀರಿನ ಬೇಡಿಕೆ ಬಗ್ಗೆ ಮೊದಲು ಸರ್ವೆà ನಡೆಯಬೇಕು. ನಂತರ ಈ ನೀರು ಬೇರೆಯವರಿಗೆ ಕೊಡಬೇಕೆ ಬಿಡಬೇಕೆ ಪ್ರಶ್ನೆ. ಏಕಾಏಕಿ ಡಿಪಿಆರ್‌ ಸಿದ್ಧಪಡಿಸುವುದಲ್ಲ ಎಂದು ಹೇಳಿದರು.

ವಿ.ಪ. ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ವಾಸ್ತವವಾಗಿ ನದಿ ತಿರುವು ಪ್ರದೇಶ ಅತೀ ಸೂಕ್ಷ್ಮವಾದುದು. ಇಲ್ಲಿ ಯಾವುದೇ ಚಟುವಟಿಕೆಗೆ ಯೋಗ್ಯವಲ್ಲದ ಪ್ರದೇಶವಾಗಿದೆ. ಇಲ್ಲಿರುವ ಜೀವ ವೈವಿಧ್ಯತೆ ರಕ್ಷಣೆಯೂ ಆಗಬೇಕು ಎಂದ ಅವರು, ಈ ನದಿ ಜೋಡಣೆ ಯೋಜನೆ ವಿರೋಧಿಸಬೇಕು. ವಿಧಾನ ಪರಿಷತ್‌ ನಲ್ಲಿ ಈ ವಿಷಯ ಪ್ರಸ್ತಾಪಿಸಿ ಜನವಿರೋಧದ ನಿಲುವು ತಿಳಿಸುವುದಾಗಿ ಹೇಳಿದರು.

ಮುಖಂಡ ಶಶಿಭೂಷಣ ಹೆಗಡೆ ದೊಡ್ಮನೆ ಮಾತನಾಡಿ, ಸರಕಾರ ಈ ಯೋಜನೆಯನ್ನು ಕೈಬಿಡುವ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸರಕಾರಕ್ಕೆ ಯೋಜನೆಯ ವಿರೋಧದ ಬಿಸಿ ತಲುಪಿಸಲು ಜನರ ಧ್ವನಿಯೇ ಬೇಕು. ಸ್ವಾಮೀಜಿಗಳ ನೇತೃತ್ವದ ಹೋರಾಟದಲ್ಲಿ ನಮಗೆ ಯಶಸ್ಸು ಸಿಗುತ್ತದೆಂಬ ವಿಶ್ವಾಸ ನಮಗಿದೆ. ಗ್ರಾಪಂಗಳು ಯೋಜನೆ ವಿರೋಧಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿದರು.

ವಾ.ಕ.ರ.ಸಾ. ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ್‌ ಮಾತನಾಡಿ, ಸರಕಾರ ಪರಿಸರ ನಾಶ ಮಾಡಲು ಯೋಜನೆ ತರದೇ ಪರಿಸರ ಉಳಿಸುವ ಯೋಜನೆ ಜನತೆಗೆ ಬೇಕು ಎಂದರು.

ಹಾಸಣಗಿ ಗ್ರಾ.ಪಂ ಅಧ್ಯಕ್ಷ ಪುರಂದರ ನಾಯ್ಕ, ಕಂಪ್ಲಿ ಗ್ರಾ.ಪಂ ಅಧ್ಯಕ್ಷ ವಿನಾಯಕ ನಾಯ್ಕ, ಹಿರಿಯ ಸಹಕಾರಿ ಆರ್‌.ಎನ್‌. ಹೆಗಡೆ ಗೋರ್ಸಗದ್ದೆ, ರಂಗ ಸಮೂಹದ ಅಧ್ಯಕ್ಷ ಆರ್‌.ಎನ್‌. ದುಂಡಿ, ಸಸ್ಯವಿಜ್ಞಾನಿ ಬಾಲಚಂದ್ರ ಸಾಯಿಮನೆ, ಸಸ್ಯ ಶಾಸ್ತ್ರಜ್ಞ ಡಾ| ಕೇಶವ ಕೂರ್ಸೆ, ಪರಿಸರ ಬರಹಗಾರ ಶಿವಾನಂದ ಕಳವೆ, ಕೆ.ಎಂ.ಎಫ್‌. ನಿರ್ದೇಶಕ ಸುರೇಶ್ಚಂದ್ರ ಕೇಶಿನಮನೆ, ಶ್ರೀಪಾದ ಹೆಗಡೆ ಶಿರನಾಲಾ, ನಾರಾಯಣ ಹೆಗಡೆ ಗಡಿಕೈ, ಎಂ.ಜಿ. ಭಟ್ಟ ಸಂಕದಗುಂಡಿ ಮತ್ತಿತರರು ಇದ್ದರು.

ಬೇಡ್ತಿ ಅಘನಾಶಿನಿ ಕೊಳ್ಳಸಂರಕ್ಷಣಾ ಸಮಿತಿ ಅಧ್ಯಕ್ಷ ವಿ.ಎಂ. ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು.

ಪ್ರಧಾನ ಕಾರ್ಯದರ್ಶಿ ಅಶೀಸರ ಅನಂತ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಗೆ ಒಕ್ಕೋರಲಿನ ವಿರೋಧ ವ್ಯಕ್ತವಾಗಬೇಕು. ಪಂಚಾಯತಗಳು ಈ ಬಗ್ಗೆ ಯೋಜನೆ ವಿರೋಧಿಸಿ ನಿರ್ಣಯ ಸ್ವೀಕರಿಸಬೇಕು ಎಂದು ಹೇಳಿದರು.

ಎಂ.ಕೆ. ಭಟ್ಟ ಯಡಳ್ಳಿ, ಅನಂತ ಹೆಗಡೆ ಹುಳಗೋಳ ನಿರ್ವಹಿಸಿದರು. ಬೇಡ್ತಿ ಸಮಾವೇಶ ಸಂಚಾಲಕ ಹೆಗಡೆ ಭಟ್ರಕೇರಿ ವಂದಿಸಿದರು. ರಾಧಾ ಹೆಗಡೆ ಬೆಳಗುಂದ್ಲಿ ಸಮಾವೇಶದ ನಿರ್ಣಯಗಳನ್ನು ಮಂಡಿಸಿದರು. ಯಲ್ಲಾಪುರ, ಅಂಕೋಲಾ, ಶಿರಸಿ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು ಎರಡು ಸಾವಿರದಷ್ಟು ಜನ ಪಾಲ್ಗೊಂಡಿದ್ದರು.

ಯೋಜನೆ ಕೈ ಬಿಡಲು ಆಗ್ರಹಿಸಿ ನಿರ್ಣಯ: ಬೇಡ್ತಿ-ವರದಾ ನದಿ ಜೋಡಣೆ ಅವೈಜ್ಞಾನಿಕವಾಗಿದೆ. ಅರಣ್ಯ, ವನವಾಸಿ, ವನ್ಯಜೀವಿ, ರೈತರಿಗೆ ಆಪತ್ತು ತರಲಿದೆ ಎಂಬ ಕಾರಣದಿಂದ 20 ವರ್ಷಗಳಿಂದ ಜನ ವಿರೋಧಿಸುತ್ತ ಬಂದಿದ್ದು, ಮಂಚಿಕೇರಿಯಲ್ಲಿ ಮಂಗಳವಾರ ನಡೆದ ಬೇಡ್ತಿ ಕಣಿವೆ ಸಂರಕ್ಷಣಾ ಸಮಾವೇಶದಲ್ಲಿ ಈ ಯೋಜನೆ ಕೈ ಬಿಡಲು ಆಗ್ರಹಿಸಿ ನಿರ್ಣಯ ಕೈಗೊಂಡಿತು. ಇದರ ಡಿಪಿಆರ್‌ ರದ್ದು ಮಾಡಲು ಆಗ್ರಹಿಸಿತು. ಜಿಲ್ಲೆಯ ಎಲ್ಲ ಸ್ಥರದ ಜನಪ್ರತಿನಿಧಿಗಳು ಒಕ್ಕೋರಲಿನಿಂದ ವಿರೋಧಿಸಿ ಈ ಯೋಜನೆ ಅನುಷ್ಠಾನ ಮಾಡದಂತೆ ಸರಕಾರಕ್ಕೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿತು. ಕಾಳಿ ಕಣಿವೆಯ ಕಾಳಿ ನದಿ ತಿರುಗಿಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿದೆ. ಎತ್ತಿನ ಹೊಳೆ ನದಿ ತಿರುವು ಬೃಹತ್‌ ಯೋಜನೆ ವಿಫಲವಾದ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ನದಿ, ನೀರಿನ ಸುರಕ್ಷತೆಯ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬೇಡ್ತಿ, ಕಾಳಿ, ಶರಾವತಿ ಈ ಮೊದಲಾದ ನದಿ ತಿರುವುಗಳ ನದಿ ಜೋಡಣೆಯನ್ನು ಕೈಗೆತ್ತಿಕೊಳ್ಳಬಾರದು ಎಂದು ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಬೇಡ್ತಿ ಸಮಾವೇಶ ಆಗ್ರಹ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next