ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ಜಾಹೀರಾತು ಕರಡು-2019ಕ್ಕೆ ಕೊನೆಗೂ ಪಾಲಿಕೆ ಆಕ್ಷೇಪಣೆ ಸಲ್ಲಿಸಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿರುವ ಮೇಯರ್ ಗಂಗಾಂಬಿಕೆ, ಈ ಹಿಂದೆ ಬಿಬಿಎಂಪಿ ರೂಪಿಸಿರುವ 2018ರ ಜಾಹೀರಾತು ಬೈಲಾಗೆ ಅನುಮೋದನೆ ನೀಡುವಂತೆ ಕೋರಿದ್ದಾರೆ.
ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿ ಜಾಹೀರಾತು ಕರಡು -2019 ಬಗ್ಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಗುರುವಾರ (ಆ.8) ಕೊನೆಯ ದಿನವಾಗಿತ್ತು. ಕೊನೆಯ ದಿನದವರೆಗೆ ಪಾಲಿಕೆ ಆಕ್ಷೇಪಣೆ ಸಲ್ಲಿಸದೆ ಇದ್ದದ್ದು, ಟೀಕೆಗೆ ಗುರಿಯಾಗಿತ್ತು. ಪಾಲಿಕೆ ಹಾಗೂ ನಗರಾಭಿವೃದ್ಧಿ ಇಲಾಖೆ ನಡುವೆ ಇದು ಸಂಘರ್ಷಕ್ಕೂ ಕಾರಣವಾಗಿತ್ತು.
ಗುರುವಾರ ಈ ಕುರಿತು ವಿವರವಾದ ಪತ್ರ ಬರೆದಿರುವ ಮೇಯರ್, ಬೆಂಗಳೂರಿನ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಆಡಳಿತ ವ್ಯವಸ್ಥೆಗೆ ಅನುಕೂಲವಾಗುವಂತೆ ಕೌನ್ಸಿಲ್ ಸಭೆಯಲ್ಲಿ ಅನುಮೋದನೆಗೊಂಡಿರುವ ‘ಬಿಬಿಎಂಪಿ ಜಾಹೀರಾತು ಬೈಲಾ-2018’ಕ್ಕೆ ಅನುಮೋ ದನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕೆಎಂಸಿ ಕಾಯ್ದೆ ಪ್ರಕಾರ ಕಟ್ಟಡಗಳ ಮೇಲೆ ಜಾಹೀರಾತು ಫಲಕ ಅಳವಡಿಸಲು ಕಟ್ಟಡ ಸ್ವಾಧೀನಾನುಭವ ಪತ್ರ ಕಡ್ಡಾಯವಾಗಿ ಇರಬೇಕು. ಈ ನಿಯಮ ನಗರಾಭಿವೃದ್ಧಿ ಇಲಾಖೆಯ ಹೊಸ ಕರಡಿನಲ್ಲಿ ಇಲ್ಲ. ಹೋರ್ಡಿಂಗ್ ಅವಕಾಶ ಮತ್ತು ಕಡಿಮೆ ಶುಲ್ಕದ ಪ್ರಸ್ತಾವನೆಗಳು ಇದರಲ್ಲಿವೆ. ಇದರಿಂದ ಜನರಿಗೆ ತೊಂದರೆಯಾಗುವ ಜತೆಗೆ ಪಾಲಿಕೆಗೂ ಆರ್ಥಿಕ ಹೊರೆಯಾಗಲಿದೆ. ಹೀಗಾಗಿ, ಇದಕ್ಕೆ ಅನುಮೋದನೆ ನೀಡಬಾರದು ಎಂದು ಪತ್ರದಲ್ಲಿ ಮೇಯರ್ ವಿವರಿಸಿದ್ದಾರೆ.
ನಗರದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಸುತ್ತಿರುವ ಗುತ್ತಿಗೆ ಅವಧಿ ಆ.15ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಹಾಲಿ ಗುತ್ತಿಗೆ ಸಂಸ್ಥೆಯನ್ನೇ ಮೂರು ತಿಂಗಳು ಮುಂದುವರಿಸಲು ಬಿಬಿಎಂಪಿ ತೀರ್ಮಾನಿಸಿದೆ.
ಹೊಸದಾಗಿ ಟೆಂಡರ್ ಪ್ರಕ್ರಿಯೆ ಆರಂಭವಾಗದಿರುವ ಕಾರಣ ಆ.15ರ ನಂತರ ಆಹಾರ ಪೂರೈಕೆ ಸ್ಥಗಿತಗೊಂಡು ಇಂದಿರಾ ಕ್ಯಾಂಟೀನ್ ಮುಚ್ಚುವ ಆತಂಕ ಎದುರಾಗಿತ್ತು. ಹೀಗಾಗಿ, ಮುಂದಿನ ಮೂರು ತಿಂಗಳು ಹಾಲಿ ಗುತ್ತಿಗೆ ಸಂಸ್ಥೆಯನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ.
ಆ.9ರ ನಂತರ ಹೊಸ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆ.15ರ ವೇಳೆಗೆ ಪ್ರಕ್ರಿಯೆ ಪೂರ್ಣ ಗೊಳ್ಳುವುದು ಅನುಮಾನ. ಹೀಗಾಗಿ, ಆ.15ರೊಳಗೆ ಹೊಸ ಗುತ್ತಿಗೆದಾರರು ನಿಗದಿಯಾಗದಿದ್ದರೆ ಈಗಿನ ಗುತ್ತಿಗೆದಾರರಿಗೆ ಮುಂದಿನ 3 ತಿಂಗಳ ಅವಧಿಗೆ ಆಹಾರ ಪೂರೈಸುವಂತೆ ಸೂಚಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.