Advertisement

ಕೊಯಿರಾ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಗೆ ವಿರೋಧ

04:49 PM Aug 25, 2021 | Team Udayavani |

ದೇವನಹಳ್ಳಿ: ರಾಜ್ಯಕ್ಕೆ ಕೊಯಿರಾ ಬೆಟ್ಟದ ಕಲ್ಲು ಪ್ರಸಿದ್ದವಾಗಿದ್ದು, ಜೀವ ವೈವಿಧ್ಯ ತಾಣ ಕೊಯಿರಾ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯ ಭೀತಿ ಶುರುವಾಗಿದೆ. ಕಲ್ಲು ಗಣಿಗಾರಿಕೆಗೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ.

Advertisement

ಕೊಯಿರಾ ಬೆಟ್ಟದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು 2005ರಿಂದ ಸರ್ಕಾರ ಕಲ್ಲುಗಣಿಗಾರಿಕೆಯನ್ನು ಅರ್ಕಾವತಿ ಕ್ಯಾಚ್‌ಮೆಂಟ್‌
ಪ್ರದೇಶವಾಗಿರುವುದರಿಂದ ಸ್ಥಗಿತಗೊಳಿಸಲಾಗಿತ್ತು. ಕೊಯಿರಾ ಬೆಟ್ಟದಲ್ಲಿ ಕಲ್ಲಿನ ನಿಕ್ಷೇಪ ತೆಗೆಯುವ ಮುನ್ನ ಬೆಟ್ಟದಲ್ಲಿ ಗಣಿಗಾರಿಕೆಯಿಂದ ಆಗುವ ದುಷ್ಪರಿಣಾಮಗಳ ಮಾಹಿತಿ ಪಡೆದು ಗಣಿಗಾರಿಕೆಗೆ ಕೈಹಾಕಬೇಕು. ಅರ್ಕಾವತಿ ನದಿ ಕ್ಯಾಚ್‌ ಮೆಂಟ್‌ ಪ್ರದೇಶ ಹಾದುಹೋಗುವ ಬೆಟ್ಟಗಳಲ್ಲಿ ಕಲ್ಲುಗಣಿಗಾರಿಕೆ ನಡೆಸಿದರೆ, ಭವಿಷ್ಯದಲ್ಲಿ ಬೆಟ್ಟದ ಸುತ್ತಲೂ ಇರುವ ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ತೊಂದರೆ ಯಾಗುವುದರಲ್ಲಿಸಂದೇಹವಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಜಲಾನಯನಕ್ಕೆ ತೊಂದರೆ:ಕಲ್ಲಿನ ನಿಕ್ಷೇಪ ತೆಗೆಯಲು ಸರ್ಕಾರಕ್ಕೆ ಸೆ.10, 2020ರಂದು ಪ್ರಸ್ತಾವನೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜುಲೈ 28ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪ್ರಸ್ತಾವನೆಯಲ್ಲಿ ತಿಪ್ಪಗೊಂಡನಹಳ್ಳಿ ಜಲಾನಯನಕ್ಕೆ ನೀರು ಹರಿಯುವ ಗ್ರಾಮಗಳ ವ್ಯಾಪ್ತಿಯಲ್ಲಿ ಹರಿಯುವುದರಿಂದ ಜಲಾನಯನಕ್ಕೆ ತೊಂದರೆ ಆಗಲಿದೆಯೆಂದು ಪ್ರಶ್ನಿಸಲಾಯಿತು. ವಾಸ್ತವದಲ್ಲಿ ಗಣಿಗಾರಿಕೆ ಪ್ರದೇಶವು ಅರ್ಕಾವತಿ ಕ್ಯಾಚ್‌ಮೆಂಟ್‌ ಏರಿಯ ಪ್ರದೇಶವಾಗಿದ್ದು, ಈ ಪ್ರದೇಶದಿಂದ ಮನಗೊಂಡನಹಳ್ಳಿ ಕೆರೆ, ರಾಮನಾಥಪುರ ಕೆರೆ, ಅರುವನಹಳ್ಳಿ ಕೆರೆಗಳಿಗೆ ನೀರು ಹರಿಯುತ್ತಿದ್ದು, ನೀರು ಹರಿಯುವ ಕಾಲುವೆ ಗ್ರಾಮಗಳನ್ನು ರಾಜ್ಯ ಸರ್ಕಾರ ಕಾವೇರಿ ನೀರಾವರಿ ನಿಯಮಿತ
ಯೋಜನೆಯಡಿ 2010 ಮತ್ತು 2011ನೇ ಸಾಲಿನಲ್ಲಿ ಕಾಮಗಾರಿಗಳು ಸಹ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ:ಹಾವಿಗೆ ರಾಖಿ ಕಟ್ಟಲು ಹೋಗಿ ಮೃತಪಟ್ಟ ಹಾವಾಡಿಗ

ಶಿಲ್ಪಕಲೆಗೆ ಬೆಟ್ಟದ ಕಲ್ಲು ಬಳಕೆ: ಕೊಯಿರಾ ಬೆಟ್ಟದಿಂದ ವಿಧಾನಸೌಧ ನಿರ್ಮಾಣಕ್ಕೆ ಕಲ್ಲು ತೆಗೆದುಕೊಂಡು ಹೋಗಲಾಗಿತ್ತು. ದೇಶ-ವಿದೇಶ ಹಾಗೂ ವಿವಿಧ ರಾಜ್ಯಗಳಲ್ಲಿ ದೇಗುಲ ಹಾಗೂ ಇತರೆ ಶಿಲ್ಪಕಲೆಗೆ ಈ ಕಲ್ಲನ್ನು ಬಳಸಿದ್ದಾರೆ. ಕೊಯಿರಾ ಬೆಟ್ಟಕ್ಕೆ ತನ್ನದೇ ಆದ ಇತಿಹಾಸ ಹೊಂದಿದೆ. ಬೆಟ್ಟದಲ್ಲಿ ಹಲವು ಬಗೆಯ ಪ್ರಾಣಿ, ಪಕ್ಷಿಗಳು ವಾಸಿಸುತ್ತಿವೆ. ಈ ಪ್ರದೇಶದಲ್ಲಿ ಆಗಾಗ ಚಿರತೆಗಳು ಸಂತಾನೋತ್ಪತ್ತಿಗಾಗಿ ಬಂದು ಹೋಗುತ್ತವೆ. 2020ರಲ್ಲಿ ಅರಣ್ಯ ಇಲಾಖೆಯಿಂದ ಕೊಯಿರಾ ಬೆಟ್ಟದಲ್ಲಿ ಚಿರತೆಗೆ ಬೋನ್‌ ಇಟ್ಟು ಸೆರೆಹಿಡಿದು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು. ಈ ಪ್ರದೇಶಗಳು ಹಲವು ಬಗೆಯ ಪ್ರಾಣಿ, ಪಕ್ಷಿಗಳು ಇರುವುದನ್ನು ಅರಣ್ಯಇಲಾಖೆಯಿಂದ ಮಾಹಿತಿ ಹಕ್ಕು ಅಡಿಯಲ್ಲಿ ದೃಢೀಕರಿಸಿದ್ದಾರೆ. ಈ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದ್ದಲ್ಲಿ ಪ್ರಾಣಿ, ಪಕ್ಷಿಗಳು, ಅಪಾರ ಪ್ರಮಾಣದ ಸಸ್ಯ ಸಂಕುಲಕ್ಕೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಕೊಯಿರಾ ಬೆಟ್ಟದಲ್ಲಿ ಉತ್ತಮ ಅರಣ್ಯವಾಗಿ ಮಾರ್ಪಾಡಾಗಿದ್ದು, ನೂರಾರು ಬಗೆಯ ಸಾವಿರಾರು ಮರಗಳಿದ್ದು,ಈ ಪ್ರದೇಶವನ್ನು ಪರಿಗಣಿಸ ಬಹುದಾದ ಅರಣ್ಯವಾಗಿ ನಮೂದಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ತಾಲೂಕಿನ ಕೊಯಿರಾ ಬೆಟ್ಟವು ಜಲಾನಯನ ಪ್ರದೇಶವೂ ದಿಬ್ಬಗಿರಿ ಬೆಟ್ಟ ಹೊಂದಿಕೊಂಡಂತಿರುವ ನಂದಿ ಗಿರಿಧಾಮದಲ್ಲಿ ಅರ್ಕಾವತಿ ನದಿಯ ಉಗಮಸ್ಥಾನವಾಗಿದೆ. ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬೆಟ್ಟದಲ್ಲಿ ಹಲವು ದೇಗುಲ: ಬೆಟ್ಟದಲ್ಲಿ ಸಾಕಷ್ಟು ಔಷಧಿ ಗುಣಗಳುಳ್ಳ ಗಿಡಮರಗಳು ಬೆಳೆದಿವೆ. ವಿವಿಧ ಜಾತಿಯ ಪಕ್ಷಿಗಳ ಕಲರವ ಹಾಗೂ ಬೆಟ್ಟದಲ್ಲಿ ಬೃಹತ್‌ ಬಂಡೆಯಲ್ಲಿ ಧಾರ್ಮಿಕ ದತ್ತಿಗೆ ಸೇರಿದ ಇತಿಹಾಸ ಪ್ರಸಿದ್ಧ ಭೀಮೇಶ್ವರ ಲಿಂಗ, ಪ್ರಾಚೀನ ಕಾಲದ ಮಂಟಪ, ಪುರಾತನ ಕಾಲದ ಗಣಪತಿ ದೇಗುಲ, ಮನಗೊಂಡನಹಳ್ಳಿ ಬಸವೇಶ್ವರ, ಎಲ್ಲಮ್ಮ ದೇವಾಲಯಗಳು ಇವೆ. ಕೊಯಿರಾ ಬೆಟ್ಟದಲ್ಲಿ ಗಣಿಗಾರಿಕೆಯಿಂದ ಇವೆಲ್ಲಾ ನಶಿಸಿಹೋಗಿ, ಪರಿಸರ ಅಸಮತೋಲನಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂಬುವುದು ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ.

ಕೊಯಿರಾಬೆಟ್ಟದಲ್ಲಿ ಸರ್ಕಾರ ಗಣಿಗಾರಿಕೆ ನಿಲ್ಲಿಸಲಾಗಿತ್ತು. ಇದೀಗ ಸರ್ಕಾರ ಗಣಿಗಾರಿಕೆ ನಡೆಸಲುಹೊರಟಿದೆ.ಯಾವುದೇಕಾರಣಕ್ಕೂ ಗಣಿಗಾರಿಕೆ ನಡೆಸ ಬಾರದು.ಬೆಟ್ಟವನ್ನು ಉಳಿಸಬೇಕು. ಬೆಟ್ಟದಲ್ಲಿ ಪುರಾತನ ದೇವಾಲಗಳು, ಚೋಳರ ಕಾಲದ ಗುಹೆಗಳು, ಮಂಟಪಗಳಿವೆ. ಈಗಾಗಲೇಡೀಸಿ, ಗಣಿಮತ್ತುಭೂವಿಜ್ಞಾನ ಅಧಿಕಾರಿಗಳಿಗೆಮನವಿಮಾಡಲಾಗಿದೆ. ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕು.
-ಕೊಯಿರಾ ಚಿಕ್ಕೇಗೌಡ, ಆರ್‌ಟಿಐ ಕಾರ್ಯಕರ್ತ

ಅರುವನಹಳ್ಳಿ ಭಾಗದಲ್ಲಿ ಎನ್‌ಜಿಒ ಸಂಘ-ಸಂಸ್ಥೆಗಳಿಂದಕೊಯಿರಾ ಬೆಟ್ಟದಲ್ಲಿ ಬೀಜದ ಉಂಡೆ ಹಾಕಲಾಗಿದೆ. ಪ್ರಾಕೃತಿಕವಾಗಿ ಅರಣ್ಯೀಕರಣ ವಾಗಿದೆ.ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅಧಿಕಾರಿಗಳು ಅವಕಾಶ ನೀಡಬಾರದು.
-ಕೆ.ಎಸ್‌. ಹರೀಶ್‌, ಜಿಲ್ಲಾ ಅಧ್ಯಕ್ಷ, ರೈತ ಸಂಘ

ಗಣಿ ಮತ್ತು ಭೂವಿಜ್ಞಾನ ಇಲಾಖೆ ರಾಜ್ಯಮಟ್ಟದ ಮೇಲಧಿಕಾರಿಗಳುಕೊಯಿರಾ ಬೆಟ್ಟವನ್ನು ವೈಜ್ಞಾನಿಕ ಸರ್ವೆ ಮಾಡಿ 6 ಜನರ ತಂಡ ವಸ್ತುಸ್ಥಿತಿ ಮಾಹಿತಿ ನೀಡುವಂತೆ ಸೂಚನೆ ನೀಡಿದೆ. ಅದರಂತೆ ಸರ್ವೆ ಕಾರ್ಯ ನಡೆಯುತ್ತಿದೆ. ಬೆಟ್ಟದಲ್ಲಿಕ್ಯಾಚ್‌ಮೆಂಟ್‌ ಏರಿಯ ಬರುವುದರಿಂದ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಅಲ್ಲಿನ ವಸ್ತುಸ್ಥತಿ ಬೆಟ್ಟವನ್ನು ಗಣಿಗಾರಿಕೆಗೆಕೊಡಬಹುದೊ, ಬೇಡವೋ. ಪ್ರಾಕೃತಿಕವಾಗಿ ಬೆಟ್ಟಯಾವರೀತಿ ಇದೆ ಎಂಬುದರ ಪರಿಶೀಲನೆ ನಡೆಸಲಾಗುತ್ತಿದೆ.
-ರೇಣುಕಾ, ಉಪನಿರ್ದೇಶಕಿ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ

– ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next