Advertisement

ಖಾಸಗಿ ವನ್ಯಜೀವಿಧಾಮಕ್ಕೆ ವಿರೋಧ

12:11 PM Jun 26, 2018 | Team Udayavani |

ಬೆಂಗಳೂರು: ರಾಜ್ಯದ ಸಂರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಂತೆ ಖಾಸಗಿ ವನ್ಯಜೀವಿಧಾಮಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವ ಪ್ರಸ್ತಾವನೆಗೆ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿಗಳಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇಷ್ಟಾದರೂ ಸಲಹೆಗಳನ್ನು ಸ್ವೀಕರಿಸಿ ಪ್ರಸ್ತಾವನೆಯನ್ನು ಪುನರ್‌ರೂಪಿಸುವುದಾಗಿ ಇಲಾಖೆ ಹೇಳುವ ಮೂಲಕ ಕರಡು ಸಿದ್ಧಪಡಿಸುವ ಕಾರ್ಯದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶ ಸಾರಿದಂತಿದೆ.

Advertisement

ಸಂರಕ್ಷಿತ ಅರಣ್ಯಗಳ ಪಕ್ಕದಲ್ಲಿ ಖಾಸಗಿ ವನ್ಯಜೀವಿ ಧಾಮಗಳ ಸ್ಥಾಪನೆಗೆ ಅವಕಾಶ ನೀಡಲು ರಾಜ್ಯ ಅರಣ್ಯ ಇಲಾಖೆ ಮುಂದಾಗಿದೆ. ಅದರಂತೆ ಕರ್ನಾಟಕ ಅರಣ್ಯ ಕಾಯ್ದೆ 1963 ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿ ಈ ರೀತಿಯ ಧಾಮಗಳನ್ನು ಸ್ಥಾಪಿಸಲು ಕರಡು ಸಿದ್ಧಪಡಿಸಿದೆ.

ಈ ಕುರಿತು ಚರ್ಚಿಸಲು ಅರಣ್ಯ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಇಲಾಖೆಯ ಮಹತ್ವಾಕಾಂಕ್ಷಿ ಪ್ರಸ್ತಾವಕ್ಕೆ ಹಲವು ನಿವೃತ್ತ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವರು ಪ್ರಸ್ತಾವವನ್ನು ಬೆಂಬಲಿಸಿದ್ದು, ಮನುಷ್ಯ ಮತ್ತು ಪ್ರಾಣಿ ಸಂಘರ್ಷ ತಡೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ಮಾತನಾಡಿ, ಪ್ರಸ್ತಾಪಿತ ಖಾಸಗಿ ವನ್ಯಜೀವಿಧಾಮ ಸ್ಥಾಪನೆ ಚಿಂತನೆಗಿಂತ ಸಮುದಾಯ ಮೀಸಲು ಪ್ರದೇಶವಿರುವುದೇ ಸೂಕ್ತ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿ ಇದಕ್ಕೆ ಅವಕಾಶವೂ ಇದೆ. ವನ್ಯಜೀವಿ ಸಂರಕ್ಷಣೆಯು ಇಲಾಖೆಯ ಮುಖ್ಯ ಉದ್ದೇಶವಾಗಿದ್ದರೆ ಖಾಸಗಿ ವನ್ಯಜೀವಿ ಧಾಮ ಪೀಠಿಕೆಯನ್ನೇ ಮಾರ್ಪಾಡು ಮಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವನಿ ಕುಮಾರ್‌ ವರ್ಮ ಅವರು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರವಾಸೋದ್ಯಮ ಮತ್ತು ಸಂಶೋಧನೆಗೆ ಅವಕಾಶವಿದೆ. ಹಾಗಾಗಿ ಖಾಸಗಿ ವನ್ಯಜೀವಿಧಾಮದ ಹೆಸರಿನಲ್ಲಿ ವ್ಯಾಪ್ತಿ ವಿಸ್ತರಿಸುವ ಅಗತ್ಯವಿಲ್ಲ ಎಂದು ತಿಳಿಸಿದರು ಎನ್ನಲಾಗಿದೆ.

Advertisement

ಮತ್ತೂಬ್ಬ ನಿವೃತ್ತ ಪಿಸಿಸಿಎಫ್ ದೀಪಕ್‌ ಸರ್ಮಾ ಅವರು ಖಾಸಗಿ ವನ್ಯಜೀವಿ ಧಾಮ ರಚನೆಗಿರುವ ಕಾನೂನು ಬಲದ ಬಗ್ಗೆಯೇ ಪ್ರಶ್ನೆಗಳನ್ನೆತ್ತಿದರು. ಜತೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಭಿಪ್ರಾಯ ಪಡೆಯಬೇಕು. ಪರಿಸರ ಸೂಕ್ಷ್ಮವಲಯಕ್ಕೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಭಿಪ್ರಾಯವನನೂ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ಒಂದೆಡೆ ಅರಣ್ಯ ಭೂಮಿ ಒತ್ತುವರಿಯಾಗಿರುವ ಬಗ್ಗೆ ಇಲಾಖೆಗೆ ಮಾಹಿತಿಯಿದ್ದು, ಮತ್ತೂಂದೆಡೆ ಖಾಸಗಿ ವನ್ಯಜೀವಿ ಧಾಮ ನಿರ್ಮಾಣಕ್ಕೆ ಅವಕಾಶ ನೀಡಲು ಮುಂದಾಗಿದೆ. ಸರ್ಕಾರ ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ಕೂಡಲೇ ವಶಪಡಿಸಿಕೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಖಾಸಗಿ ವನ್ಯಜೀವಿ ಧಾಮ ಸ್ಥಾಪನೆಗೆ ಅನುಮತಿ ನೀಡುವ ಬದಲಿಗೆ ಭೋಗ್ಯ ಇಲ್ಲವೇ ಬಾಡಿಗೆ ರೂಪದಲ್ಲಿ ಭೂಮಿವನ್ನು ಸ್ವಾಧೀನಪಡಿಸಿಕೊಂಡು ಬಳಸುವ ಬಗ್ಗೆಯೂ ಚಿಂತಿಸಬಹುದು ಎಂದು ಕೆಲವರು ಸಲಹೆ ನೀಡಿದ್ದಾರೆ.ಯಾರು ತಮ್ಮ ಭೂಮಿಯನ್ನು ಖಾಸಗಿ ವನ್ಯಜೀವಿ ಧಾಮವಾಗಿ ರೂಪಿಸಲು ಮುಂದೆ ಬರುತ್ತಾರೋ ಮೊದಲಿಗೆ ಆ ಭೂಮಿಯನ್ನು ಖಾಸಗಿ ಅರಣ್ಯವೆಂದು ಘೋಷಿಸಲಾಗುತ್ತದೆ.

ಈ ಪ್ರಕ್ರಿಯೆ ಮುಗಿದರೆ ಅದು ಅರಣ್ಯ ಸಂರಕ್ಷಣಾ ಕಾಯ್ದೆ ವ್ಯಾಪ್ತಿಗೆ ಒಳಪಡಲಿದೆ. ಇದರಿಂದ ಶೇ.5ರಷ್ಟು ಕಟ್ಟಡ ನಿರ್ಮಾಣ ಅವಕಾಶವನ್ನು ಮೊಟಕುಗೊಳಿಸಲು ಸಾಧ್ಯವಿದೆ ಎಂದು ಸಭೆಯಲ್ಲಿದ್ದ ಹಿರಿಯ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಮುಖ್ಯ ವನ್ಯಜೀವಿ ವಾರ್ಡನ್‌ ಸಿ.ಜಯರಾಂ, ವನ್ಯಜೀವಿಗಳ ಕಾರಿಡಾರ್‌ ಬಲವರ್ಧನೆಗೆ 30 ಹೆಕ್ಟೇರ್‌ ಅರಣ್ಯ ಭೂಮಿ ಅಗತ್ಯವಿದೆ. ಸಲಹೆಗಳ ಆಧಾರದ ಮೇಲೆ ಕರಡು ಪ್ರಸ್ತಾವವನ್ನು ಪುನರ್‌ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next