ಮರವಂತೆ: ಸೌಪರ್ಣಿಕಾ ನದಿಯಲ್ಲಿ ಯಾಂತ್ರೀಕೃತ ಮರಳುಗಾರಿಕೆಗೆ ವಿರೋಧ ವ್ಯಕ್ತಪಡಿಸಿ ಹೊಸಾಡು, ತ್ರಾಸಿ ಮತ್ತು ನಾಡ ಗ್ರಾಮದ ನದಿ ಪಾತ್ರದ ನಿವಾಸಿಗಳು ಮಂಗಳವಾರ ಹೊಸಾಡು ಕಾಳುಮನೆ ಪರಿಸರದಲ್ಲಿ ಮತ್ತೆ ಪ್ರತಿಭಟನೆ ನಡೆಯಿತು.
ಖಾಸಗಿ ಗುತ್ತಿಗೆದಾರರು ಟೆಂಡರ್ ಪಡೆದು ಸೌಪರ್ಣಿಕಾ ನದಿಯಲ್ಲಿ ಬೃಹತ್ ಯಂತ್ರದ ಮೂಲಕ ಕಳೆದೆರಡು ವಾರಗಳಿಂದ ಜನವಸತಿ ಪ್ರದೇಶವಾದ ಕಾಳುಮನೆ ಪರಿಸದಲ್ಲಿ ಮರಳನ್ನು ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಸೌಪರ್ಣಿಕಾ ನದಿಯಲ್ಲಿ ಯಾಂತ್ರೀಕೃತ ಮರಳುಗಾರಿಕೆಗೆ ಅವಕಾಶ ನೀಡಬಾರದೆಂದು ನಾಡ, ಹೊಸಾಡು ಮತ್ತು ತ್ರಾಸಿ ಗ್ರಾಮ ಪಂಚಾಯತ್ ನಿರ್ಣಯ ಕೈಗೊಂಡಿದೆ. ಜಿಲ್ಲಾಧಿಕಾರಿ, ತಹಶೀಲ್ದಾರ್, ಗಣಿ ಇಲಾಖೆ, ಗ್ರಾ.ಪಂ.ಗೆ ಸ್ಥಳೀಯರು ಮನವಿ ಸಲ್ಲಿಸಿದ್ದರು. ಮರಳುಗಾರಿಕೆಯನ್ನು ವಿರೋಧಿಸಿ ನದಿ ತೀರ ಪ್ರದೇಶವಾದ ಕಾಳುಮನೆ ಪರಿಸರದಲ್ಲಿ ಮಾ. 21ರಂದು ಪ್ರತಿಭಟನೆ ನಡೆದಿತ್ತು.
ಸಮಸ್ಯೆಯೇನು?
ಯಂತ್ರದ ಮೂಲಕ ಮರಳು ತೆಗೆಯುವುದರಿಂದ ನದಿಯ ಆಳ ಹೆಚ್ಚಾಗಿ ನದಿ ದಂಡೆ ಕುಸಿತವಾಗಲಿದೆ. ನದಿ ಪಾತ್ರದ ಮನೆಗಳಿಗೂ ಅಪಾಯವಿದೆ. ಅಂತರ್ಜಲ ಮಟ್ಟವೂ ಕುಸಿತವಾಗಿ, ಬಾವಿ ನೀರು ಉಪ್ಪು ನೀರಾಗುವ ಆತಂಕವಿದೆ. ಸ್ಥಳೀಯ ರಸ್ತೆಗಳಲ್ಲಿ ಮರಳು ತುಂಬಿದ ಲಾರಿಗಳು ಚಲಿಸುವುದರಿಂದ ರಸ್ತೆ ಹಾಳಾಗಲಿದೆ. ಮಾತ್ರವಲ್ಲದೆ ವಿವಿಧ ಜಾತಿಯ ಕಪ್ಪೆ ಚಿಪ್ಪುಗಳು, ಮೀನಿನ ಸಂತತಿ ನಾಶವಾಗಿ ಸ್ಥಳೀಯ ಮೀನುಗಾರಿಕೆಗೂ ತೊಂದರೆ ಆಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ನಾಡ ಗ್ರಾ.ಪಂ. ಅಧ್ಯಕ್ಷ ದಿನೇಶ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಗಂಗೊಳ್ಳಿ ಠಾಣಾಧಿಕಾರಿ ನಂಜಾ ನಾಯ್ಕ, ಪ್ರಣಯ್ ಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ಕಡೆR, ಸ್ಥಳೀಯರಾದ ಸರೋಜಾ ಪೂಜಾರಿ, ಸವಿತಾ ಕೋಟೆಮಕ್ಕಿ, ಶಿವರಾಮ ಶೆಟ್ಟಿ, ಗುರುಕಿರಣ್, ಮಂಜುನಾಥ್, ವಿಶ್ವನಾಥ್, ರಾಘವೇಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.