Advertisement

ಜಿಂದಾಲ್‌ಗೆ 3665 ಎಕರೆ ಭೂಮಿ ಪರಭಾರೆಗೆ ವಿರೋಧ

04:43 PM Apr 28, 2021 | Team Udayavani |

ಗದಗ: ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಬಳ್ಳಾರಿ ಜಿಲ್ಲೆಯ 3665 ಎಕರೆ ಭೂಮಿಯನ್ನು ಜಿಂದಾಲ್‌ಗೆ ಪರಭಾರೆ ವಿರೋಧಿಸಿ ಗಾಂಧಿ ಪುತ್ಥಳಿ ಎದುರು ಅಹೋರಾತ್ರಿ ಹೋರಾಟ ನಡೆಸಿದ್ದ ಬಿ.ಎಸ್‌. ಯಡಿಯೂರಪ್ಪ ಅವರೇ ಇದೀಗ ಪರಭಾರೆ ಮಾಡಿದ್ದಾರೆ. ಕೊರೊನಾದಿಂದ ಜನರು ಕಣ್ಣೀರಿಡುವ ವಿಷಮ ಪರಿಸ್ಥಿತಿಯಲ್ಲಿ ಸರಕಾರದ ಈ ನಿರ್ಣಯ ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಎಚ್‌.ಕೆ. ಪಾಟೀಲ ತೀವ್ರ ವಾಗ್ಧಾಳಿ ನಡೆಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಜಿಂದಾಲ್‌ ಕಂಪನಿಗೆ 3665 ಎಕರೆ ಜಮೀನು ಕ್ರಯ ಶುದ್ಧಿಗೆ ಮುಂದಾಗಿತ್ತು. ಅದಕ್ಕೆ ತಾವು ಸೇರಿದಂತೆ ಬಳ್ಳಾರಿ ಜಿಲ್ಲೆಯ ರೈತರಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಂದಿನ ವಿಪಕ್ಷ ನಾಯಕರಾಗಿದ್ದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಅಹೋರಾತ್ರಿ ಧರಣಿ ನಡೆಸಿದ್ದರು. ಅದಕ್ಕೆ ಸ್ಪಂದಿಸಿದ್ದ ಅಂದಿನ ಸಮ್ಮಿಶ್ರ ಸರಕಾರ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದರು. ಆದರೆ, ಇದೀಗ ಅದೇ ಜಿಂದಾಲ್‌ ಕಂಪನಿಗೆ ಇಂದಿನ 3665 ಎಕರೆ ಜಮೀನು ನೀಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಂಪುಟ ಸಭೆ ನಿರ್ಣಯಿಸಿದೆ. ಈ ಮೂಲಕ ರಾಜ್ಯ ಸರಕಾರ ಹಾಗೂ ಸಾರ್ವಜನಿಕರ ಬೊಕ್ಕಸಕ್ಕೆ ದೊಡ್ಡ ಧಕ್ಕೆ ತರುವ ಬಹುದೊಡ್ಡ ನಿರ್ಣಯ ಇದಾಗಿದೆ ಎಂದು ಟೀಕಿಸಿದರು.

ಕೆಐಎಡಿಬಿ ಅಭಿವೃದ್ಧಿ ಪಡಿಸಿರುವ ಜಮೀನು ಎಕರೆಗೆ 80 ರೂ. ದರದಲ್ಲಿ ಮಾರಾಟವಾಗುತ್ತದೆ. ಆದರೆ, ಜಿಂದಾಲ್‌ ಕಂಪನಿಗೆ ಕೇವಲ 1.22 ಲಕ್ಷ ರೂ. ಗೆ ಎಕರೆಯಂತೆ 3665 ಎಕರೆ ಜಮೀನು ಮಾರುವ ಅಗತ್ಯವೇನಿದೆ. ಕೊರೊನಾ ಸೊಂಕಿತರ ಚಿಕಿತ್ಸೆಗಾಗಿ ಜಮೀನು ಮಾರಲಾಗುತ್ತಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಇಂತಹ ಜನವಿರೋಧಿ ನಿರ್ಣಯವನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದರೆ, ಸರಕಾರಕ್ಕೂ ಒಳ್ಳೆಯದಾಗಲ್ಲ. ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.ಜಿ.ಪಂ. ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ತಾ.ಪಂ. ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಕಾಂಗ್ರೆಸ್‌ ಶಹರ ಅಧ್ಯಕ್ಷ ಗುರಣ್ಣ ಬಳಗಾನೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next