Advertisement

ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧ

09:38 PM Jun 30, 2019 | sudhir |

ಹೆಬ್ರಿ: ಹೆಬ್ರಿಯ ಇಂದಿರಾನಗರ ವಾರ್ಡ್‌ ಪೊಲೀಸ್‌ ವಸತಿಗೃಹದ ಹತ್ತಿರ ಜನವಸತಿ ಇರುವ ಪ್ರದೇಶದಲ್ಲಿ ಹೆಬ್ರಿ ಗ್ರಾ.ಪಂ. ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಜೂ.30ರಂದು ಸಭೆ ನಡೆದಿದ್ದು ತ್ಯಾಜ್ಯ ಘಟಕ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಉಗ್ರಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲಿ ವಾರ್ಡಿಗೆ ಸಂಬಂಧಪಟ್ಟ ಮುಳ್ಳುಂಬ್ರಿ, ರಾಗಿಹಕ್ಲು, ಸೇಳಂಜೆ, ಅಡಾಲ್ಬೆಟ್ಟು, ವಿನೂ ನಗರ ಹಾಗೂ ಮಠದಬೆಟ್ಟು ಗ್ರಾಮಸ್ಥರಿದ್ದರು.

ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾದರೆ ಅಂತರ್ಜಲ ಹಾನಿಯಾಗುತ್ತದೆ. ಸಮೀಪದಲ್ಲೇ ಹರಿಯುವ ಸೀತಾನದಿ ಕಲ್ಮಶಗೊಂಡು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಯೋಜನೆಯನ್ನು ಇಂದಿರಾನಗರ ವಾರ್ಡ್‌ ನಿಂದ ಸ್ಥಳಾಂತರಿಸಬೇಕು ಎಂದು ಗಣಪತಿ ನಾಯಕ್‌ ಆಗ್ರಹಿಸಿದರು.

ಜನವಸತಿ ಇರುವ ಸ್ಥಳದಿಂದ ಯೋಜನೆ ಸ್ಥಳಾಂತರಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಪಂಚಾಯತ್‌ ಮಾಜಿ ಸದಸ್ಯ ಕರುಣಾಕರ್‌ ರಾವ್‌, ಶ್ರೀಧರ ಹೆಗ್ಡೆ ಹೇಳಿದರು. ಈ ಸಂದರ್ಭ ಹೆಬ್ರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ ನಾಯ್ಕ,ನಾಗರಾಜ್‌, ಶ್ರೀಕಾಂತ್‌ ಹೆಗ್ಡೆ, ಸುನಿಲ್ ಭಂಡಾರಿ ಮೊದಲಾದವರಿದ್ದರು.

ಜನವಸತಿ ಇಲ್ಲದ ಪ್ರದೇಶದಲ್ಲಿ ನಿರ್ಮಿಸಿ

2016ರಲ್ಲಿ ಈ ಭಾಗದಲ್ಲಿ ಕಸದ ತೊಟ್ಟಿ ನಿರ್ಮಾಣ ಮಾಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ ಈಗ ಬೃಹತ್‌ ಪ್ರಮಾಣದ ತ್ಯಾಜ್ಯ ವಿಲೇವಾರಿ ಘಟಕವಾಗುವುದರಿಂದ ಈ ಭಾಗದ ಜನರಿಗೆ ಸಮಸ್ಯೆಯಾಗುತ್ತಿದೆ. ಇತ್ತೀಚೆಗೆ ಪಕ್ಕದಲ್ಲಿಯೇ ನೀರಿನ ಟ್ಯಾಂಕ್‌ ನಿರ್ಮಾಣವಾದ್ದರಿಂದ ತ್ಯಾಜ್ಯ ಘಟಕದಿಂದ ಸೊಳ್ಳೆ, ಕ್ರಿಮಿಕೀಟಗಳ ಮೂಲಕ ರೋಗಭೀತಿ ಇದೆ. ಆದ್ದರಿಂದ ಜನವಸತಿ ಇಲ್ಲದ ಪ್ರದೇಶದಲ್ಲಿ ಘಟಕ ನಿರ್ಮಾಣ ಮಾಡಿ.
– ಸುರೇಶ್‌ ಭಂಡಾರಿ, ಹೆಬ್ರಿ ಗ್ರಾ.ಪಂ. ಸದಸ್ಯರು
ಭಯಪಡುವ ಆವಶ್ಯಕತೆ ಇಲ್ಲ

ಈಗಾಗಲೇ ಹೆಬ್ರಿ ಹೃದಯ ಭಾಗದ ಸಮಾಜ ಮಂದಿರದಲ್ಲಿ ತ್ಯಾಜ್ಯ ವಿಲೇವಾರಿ ಘಟಕವಿದ್ದು ಇದರಿಂದ ಯಾರಿಗೂ ಸಮಸ್ಯೆ ಇಲ್ಲ. ಈಗ ಸೇಳಂಜೆಯಲ್ಲಿ ನಿರ್ಮಾಣವಾಗಲಿರುವ ತ್ಯಾಜ್ಯ ವಿಲೇವಾರಿ ಘಟಕ ಕೇವಲ ಒಣ ಹಸಿ ಕಸಗಳನ್ನು ಬೇರ್ಪಡಿಸಿ ಅಲ್ಲಿಂದ ಅವುಗಳನ್ನು ಸಂಪನ್ಮೂಲಗಳನ್ನಾಗಿ ಮೂಡುವುದೇ ವಿನಾ ಡಂಪಿಂಗ್‌ ಯಾರ್ಡ್‌ ಅಲ್ಲ. ಇದರಿಂದ ಸ್ಥಳೀಯರಿಗೆ ಯಾವುದೇ ಸಮಸ್ಯೆ ಇಲ್ಲ.
– ಎಚ್.ಕೆ. ಸುಧಾಕರ, ಅಧ್ಯಕ್ಷರು,ಗ್ರಾ.ಪಂ. ಹೆಬ್ರಿ
Advertisement

Udayavani is now on Telegram. Click here to join our channel and stay updated with the latest news.

Next