ಚಿಂಚೋಳಿ: ವಿವಿಧ ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ಬಸ್ ನಿಲ್ದಾಣ ಬಳಿ ರಸ್ತೆ ತಡೆ ನಡೆಸಿ ಕೇಂದ್ರ ಸರಕಾರ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದವು.
ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಗಳನ್ನು ಉದ್ದೇಶಿಸಿ ಹಿರಿಯ ಮುಖಂಡ ರಮೇಶ ಯಾಕಾಪುರ, ಸಿಪಿಐ (ಎಂ) ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಎಂಪಳ್ಳಿ, ಶರಣಬಸಪ್ಪ ಮಮಶೆಟ್ಟಿ, ಸೌಭಾಗ್ಯಮ್ಮ ಮಠಪತಿ, ಜಯಶ್ರೀ ದೊಡ್ಡಮನಿ, ಮಾರುತಿ ಗಂಜಗಿರಿ, ಎಸ್.ಎನ್. ದಂಡಿನಕುಮಾರ ಮಾತನಾಡಿದರು. ಕೇಂದ್ರ ಸರಕಾರ ಕಾರ್ಮಿಕರಿಗೆ ದುಡಿಮೆಗೆ ತಕ್ಕಂತೆ ಸಂಬಳ ನೀಡುತ್ತಿಲ್ಲ. ಬೆಲೆ ಏರಿಕೆ, ಭ್ರಷ್ಚಾಚಾರ, ನಿರುದ್ಯೋಗದಂತ ಪಿಡುಗುಗಳನ್ನು ನಿಯಂತ್ರಿಸಲಾಗಲಿಲ್ಲ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ನಿರಂತರ ತೈಲ ಬೆಲೆ ಏರಿಕೆ ಕ್ರಮಗಳಿಂದ ಜನ ಸಾಮಾನ್ಯರು ತೊಂದರೆ ಪಡಬೇಕಾಯಿತು.
ಬಂಡವಾಳಶಾಹಿ ಕೋಟ್ಯಧಿಪತಿಗಳು ಬ್ಯಾಂಕುಗಳಿಂದ ಪಡೆದ 2.25ಲಕ್ಷ ಕೋಟಿ ರೂ. ಸಾಲ ವಸೂಲಿ ಕೈಬಿಟ್ಟ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ. ಕಾರ್ಮಿಕರ ವೇತನ ಹೆಚ್ಚಳ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಭಾರತ ಬಂದ್ ಕರೆ ನೀಡಿರುವುದರಿಂದ ಅಂಗಡಿಗಳು ಮುಚ್ಚಿದ್ದವು. ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಾಹನಗಳ ಸಂಚಾರವಿಲ್ಲದ ಕಾರಣ ಪ್ರಯಾಣಿಕರು ತೊಂದರೆಗೆ ಒಳಗಾದರು. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಸರಕಾರಿ ಇಲಾಖೆ ಕಚೇರಿಗಳು ಸಿಬ್ಬಂದಿ ಕೊರತೆಯಿಂದ ಬಿಕೋ ಎನ್ನುತ್ತಿದ್ದವು. ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿತ್ತು. ಪೆಟ್ರೊಲ್ ಬಂಕ್‌ಗಳು ಮುಚ್ಚಿದ್ದವು. ಔಷಧಿ ಅಂಗಡಿಗಳು ತೆರೆದಿದ್ದವು. ಖಾಸಗಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಮೂರ್ಛೆ ಹೋದ ಮಹಿಳೆ: ಅಂಗನವಾಡಿ ಕಾರ್ಯಕರ್ತೆಯರ ಸಂಘ ಅಧ್ಯಕ್ಷೆ ಜಯಶ್ರೀ ದೊಡ್ಡಮನಿ ತೀವ್ರವಾಗಿ ಬಳಲಿ ಪ್ರತಿಭಟನೆ ಸ್ಥಳದಲ್ಲಿಯೇ ಮೂರ್ಛೆ ಹೋದರು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು, ಗ್ರಾಪಂ ದಿನಗೂಲಿ ನೌಕರರು, ಆಶಾ ಕಾರ್ಯಕರ್ತೆಯರು, ಅಡುಗೆ ಸಹಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.