Advertisement

ಅಧಿವೇಶನ: ಮುಂದುವರಿದ ಅನಿಶ್ಚಿತತೆ; ಸರ್ವಪಕ್ಷ ಸಭೆಯೂ ವಿಫ‌ಲ

07:59 PM Mar 21, 2023 | Team Udayavani |

ನವದೆಹಲಿ: ಸಂಸತ್‌ನ ಬಜೆಟ್‌ ಅಧಿವೇಶನದ ದ್ವಿತೀಯಾರ್ಧವು ಆರಂಭವಾದಾಗಿನಿಂದ ಇಲ್ಲಿಯವರೆಗೂ ಆಡಳಿತ ಹಾಗೂ ಪ್ರತಿಪಕ್ಷಗಳ ಗದ್ದಲದಿಂದಾಗಿ ಕಲಾಪಗಳು ಕೊಚ್ಚಿಹೋಗಿವೆ.

Advertisement

ಮಂಗಳವಾರವೂ ಇದೇ ಸ್ಥಿತಿ ಮುಂದುವರಿದಿದ್ದು, ಉಭಯ ಸದನಗಳೂ ಮುಂದೂಡಲ್ಪಟ್ಟಿವೆ. ಈ ಬೆಳವಣಿಗೆಯು ಅನಿಶ್ಚಿತತೆಯನ್ನು ಸೃಷ್ಟಿಸಿದ್ದು, ಇಡೀ ಬಜೆಟ್‌ ಅಧಿವೇಶನವೇ ವ್ಯರ್ಥವಾಗಲಿದೆಯೇ ಎಂಬ ಅನುಮಾನ ಮೂಡಿಸಿದೆ.

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಹಣಕಾಸು ಮಸೂದೆ ಸೇರಿದಂತೆ ಬಜೆಟ್‌ಗೆ ಅಂಗೀಕಾರ ಪಡೆಯಲು ಸರ್ಕಾರ ಪರ್ಯಾಯ ದಾರಿ ಕಂಡುಕೊಳ್ಳಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಏ.6ರಂದು ಅಧಿವೇಶನ ಸಮಾಪ್ತಿಯಾಗಲಿದೆ. ಆದರೆ, ಕಳೆದೊಂದು ವಾರದಿಂದಲೂ, ಒಂದು ಕಡೆ “ಲಂಡನ್‌ನಲ್ಲಿ ಮಾಡಿದ ಭಾಷಣಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕ್ಷಮೆ ಕೇಳಬೇಕು’ ಎಂದು ಆಡಳಿತಾರೂಢ ಬಿಜೆಪಿ ಸದಸ್ಯರು ಪ್ರತಿಭಟಿಸುತ್ತಿದ್ದರೆ, ಮತ್ತೂಂದು ಕಡೆ “ಅದಾನಿ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿಸಬೇಕು’ ಎಂದು ಕಾಂಗ್ರೆಸ್‌ ಪಟ್ಟುಹಿಡಿದಿದೆ. ಎರಡೂ ಕಡೆ ಗದ್ದಲ ಮುಂದುವರಿದಿರುವ ಕಾರಣ ಕಲಾಪಗಳು ಪ್ರತಿ ದಿನವೂ ಮುಂದೂಡಲ್ಪಡುತ್ತಿವೆ.

ಸರ್ವಪಕ್ಷ ಸಭೆಯೂ ವಿಫ‌ಲ:
ಸುಗಮ ಸಂಸತ್‌ ಕಲಾಪಕ್ಕಾಗಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಮಂಗಳವಾರ ಕರೆದಿದ್ದ ಸರ್ವಪಕ್ಷ ಸಭೆಯೂ ವಿಫ‌ಲವಾಗಿದೆ. ಅದಾನಿ ಪ್ರಕರಣವನ್ನು ಜೆಪಿಸಿ ತನಿಖೆಗೆ ಒಪ್ಪಿಸಲೇಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದರೆ, ರಾಹುಲ್‌ ಕ್ಷಮೆ ಕೋರಲೇಬೇಕು ಎಂದು ಬಿಜೆಪಿ ಹಠ ಹಿಡಿಯಿತು. ಈ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಒಮ್ಮತ ಮೂಡದ ಕಾರಣ, ಸಭೆಯ ಉದ್ದೇಶ ಈಡೇರಲಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

ಇನ್ನು, ಮಂಗಳವಾರವೂ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ವ್ಯರ್ಥವಾಗಿದ್ದು, ಬುಧವಾರ ಯುಗಾದಿ ಹಬ್ಬವಿರುವ ಕಾರಣ ಗುರುವಾರಕ್ಕೆ ಮುಂದೂಡಿಕೆಯಾಗಿವೆ.

ಅನುಮತಿ ಕೇಳಿದ ರಾಹುಲ್‌:
ಈ ನಡುವೆ, ಮಂಗಳವಾರವೂ ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, “ನನ್ನ ವಿರುದ್ಧ ಬಿಜೆಪಿಯ ಹಿರಿಯ ನಾಯಕರು ಸಂಪೂರ್ಣ ಆಧಾರರಹಿತ, ನ್ಯಾಯಸಮ್ಮತವಲ್ಲದ ಆರೋಪಗಳನ್ನು ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಲು ನನಗೆ ಅವಕಾಶ ಕೊಡಿ’ ಎಂದು ಮನವಿ ಮಾಡಿದ್ದಾರೆ.

ರಾಹುಲ್‌ರನ್ನು ಮೀರ್‌ ಜಾಫ‌ರ್‌ಗೆ ಹೋಲಿಕೆ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಬಿಜೆಪಿ ಭಾರತೀಯ ರಾಜಕಾರಣದ ಮೀರ್‌ ಜಾಫ‌ರ್‌ಗೆ ಹೋಲಿಸಿದೆ. “ಮೀರ್‌ ಜಾಫ‌ರ್‌ ಭಾರತದಲ್ಲಿ “ನವಾಬ’ನಾಗಲು ವಿದೇಶಿ ಶಕ್ತಿಗಳ ಬೆಂಬಲ ಕೋರಿ ಹೊರದೇಶಕ್ಕೆ ಹೋಗಿದ್ದ. ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ಮಾಡಿದ್ದೂ ಇದನ್ನೇ. ಹೀಗಾಗಿ ಅವರನ್ನು ಈ ಕಾಲ ಮೀರ್‌ ಜಾಫ‌ರ್‌ ಎಂದು ಕರೆಯಬಹುದು’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಹೇಳಿದ್ದಾರೆ. ಅಲ್ಲದೇ, ರಾಹುಲ್‌ ಅವರು ವಿದೇಶಿ ನೆಲದಲ್ಲಿ ಭಾರತದ ವಿರುದ್ಧ ಮಾತನಾಡಿದ್ದು ಇದೇ ಮೊದಲಲ್ಲ. ಪ್ರತಿ ಬಾರಿಯೂ ಅವರು ಹೀಗೇ ಮಾಡುತ್ತಾರೆ. ಕಾಂಗ್ರೆಸ್‌ ಪಕ್ಷ ಮತ್ತು ಗಾಂಧಿ ಕುಟುಂಬದ ಸಂಚಿದು. ರಾಹುಲ್‌ ಕ್ಷಮೆ ಕೇಳದೇ ನಾವು ಬಿಡುವುದಿಲ್ಲ ಎಂದೂ ಪಾತ್ರಾ ಆರೋಪಿಸಿದ್ದಾರೆ.

ಪ್ರತಿಪಕ್ಷ ಸದಸ್ಯರ ಪ್ರತಿಭಟನೆ
ಹಲವು ಪ್ರತಿಪಕ್ಷಗಳ ಸದಸ್ಯರು ಮಂಗಳವಾರವೂ ಸಂಸತ್‌ಭವನದ ಕಾರಿಡಾರ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. “ವೀ ವಾಂಟ್‌ ಜೆಪಿಸಿ’ ಎಂಬ ಫ‌ಲಕಗಳನ್ನು ಹಿಡಿದು, ಅದಾನಿ ಪ್ರಕರಣವನ್ನು ಜೆಪಿಸಿ ತನಿಖೆಗೆ ಒಪ್ಪಿಸಲೇಬೇಕು ಎಂದು ಘೋಷಣೆಗಳನ್ನು ಕೂಗಿದ್ದಾರೆ. ಟಿಎಂಸಿ ಸದಸ್ಯರು ಪ್ರತ್ಯೇಕವಾಗಿ ಸಂಸತ್‌ ಭವನದ ಮುಂದೆ ಪ್ರತಿಭಟಿಸಿ, “ಅದಾನಿ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next