ನವದೆಹಲಿ:ಸಂಸತ್ ಅಧಿವೇಶನದ ದ್ವಿತೀಯಾರ್ಧ ಆರಂಭವಾಗಿ ಒಂದು ವಾರ ಕಳೆದರೂ, ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ಗುದ್ದಾಟದಿಂದಾಗಿ ಸದನಗಳ ಅಮೂಲ್ಯ ಸಮಯ ವ್ಯರ್ಥವಾಗಿದೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಈ ವಾರ ಸುಮಾರು 3,600 ನಿಮಿಷಗಳ ಕಾಲ ಕಲಾಪ ನಡೆಯಬೇಕಿತ್ತು. ಆದರೆ, ಸಂಸದರ ಗದ್ದಲದಿಂದ ಕಲಾಪಗಳು ಸತತ ಮುಂದೂಡಿಕೆಯಾದ ಕಾರಣ, ಕೇವಲ 218 ನಿಮಿಷಗಳ ಕಾಲ ಮಾತ್ರ ಕಲಾಪ ನಡೆದಿದೆ.
ಅಧಿವೇಶನ ಆರಂಭವಾದಾಗಿನಿಂದಲೂ, ಆಡಳಿತ ಪಕ್ಷ ಬಿಜೆಪಿ “ಲಂಡನ್‌ನಲ್ಲಿ ರಾಹುಲ್‌ಗಾಂಧಿ ನೀಡಿರುವ ಹೇಳಿಕೆಗೆ ಕ್ಷಮೆ ಯಾಚಿಸಬೇಕು’ ಎಂದು ಪಟ್ಟು ಹಿಡಿದರೆ, ಪ್ರತಿಪಕ್ಷಗಳು “ಅದಾನಿ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿಸಬೇಕು’ ಎಂದು ಒತ್ತಾಯಿಸಿ ಪ್ರತಿಭಟಿಸುತ್ತಲೇ ಇವೆ. ಪರಿಣಾಮ, ಕಲಾಪಗಳ ಅವಧಿ ಸದ್ವಿನಿಯೋಗ ಆಗಿಲ್ಲ. ಶುಕ್ರವಾರವೂ ಎರಡೂ ಸದನಗಳಲ್ಲಿ ಕೋಲಾಹಲ ಮುಂದುವರಿದ ಕಾರಣ, ಸೋಮವಾರಕ್ಕೆ ಕಲಾಪ ಮುಂದೂಡಲ್ಪಟ್ಟಿತು.
ಆರೋಪ-ಪ್ರತ್ಯಾರೋಪ:
ಶುಕ್ರವಾರ ಕಲಾಪ ಆರಂಭವಾದ ಸ್ವಲ್ಪಹೊತ್ತಲ್ಲೇ ಪ್ರತಿಪಕ್ಷಗಳ ನಾಯಕರು ಪ್ರತಿಭಟಿಸುತ್ತಿದ್ದಾಗ ಲೋಕಸಭೆಯ ಆಡಿಯೋ ಕೆಲ ಹೊತ್ತು ಆಫ್ ಆಗಿತ್ತು. ಇದರ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿದ ಕಾಂಗ್ರೆಸ್, “ಸರ್ಕಾರದ ವಿರುದ್ಧದ ಪ್ರತಿಭಟನೆಯ ಧ್ವನಿಯನ್ನು ಹತ್ತಿಕ್ಕಲು ಆಡಿಯೋವನ್ನೇ ಮ್ಯೂಟ್ ಮಾಡಲಾಗುತ್ತಿದೆ’ ಎಂದು ಆರೋಪಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, “ತಾಂತ್ರಿಕ ತೊಂದರೆಯಿಂದ ಆಡಿಯೋ ಮ್ಯೂಟ್ ಆಗಿತ್ತೇ ವಿನಾ ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ’ ಎಂದು ಹೇಳಿತು.
ಆಗಬೇಕಿದ್ದೆಷ್ಟು, ಆಗಿದ್ದೆಷ್ಟು?
– ಲೋಕಸಭೆಯಲ್ಲಿ ಕಲಾಪ ನಡೆಯಬೇಕಾಗಿದ್ದ ಅವಧಿ- 1,800 ನಿಮಿಷ
– ಕಲಾಪ ನಡೆದ ಅವಧಿ- 65 ನಿಮಿಷ
– ಶುಕ್ರವಾರ ಕಲಾಪ ನಡೆದಿದ್ದು- 21 ನಿಮಿಷ
– ಗುರುವಾರ ನಡೆದ ಅವಧಿ – 2 ನಿಮಿಷ
– ರಾಜ್ಯಸಭೆಯಲ್ಲಿ ಕಲಾಪ ನಡೆಯಬೇಕಾಗಿದ್ದ ಅವಧಿ- 1,800 ನಿಮಿಷ
– ಕಲಾಪ ನಡೆದ ಅವಧಿ- 152 ನಿಮಿಷ
– ಗುರುವಾರ ಕಲಾಪ ನಡೆದ ಅವಧಿ- 4 ನಿಮಿಷ
Related Articles
ಪ್ರಧಾನಿ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ನೋಟಿಸ್
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಕೆ.ಸಿ.ವೇಣುಗೋಪಾಲ್ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ. ದೇಶದ ಮೊದಲ ಪ್ರಧಾನಿ ದಿ.ಜವಾಹರ್‌ಲಾಲ್ ನೆಹರೂ ಕುಟುಂಬ ಸದಸ್ಯರು “ನೆಹರೂ’ ಎಂಬ ಹೆಸರನ್ನು ( ಸರ್‌ನೆಮ್) ಏಕೆ ಬಳಸಲಿಲ್ಲ ಎಂದು ಪ್ರಧಾನಿ ಫೆ.9ಂದು ಸದನದಲ್ಲಿ ಪ್ರಶ್ನಿಸಿದ್ದಕ್ಕಾಗಿ ರಾಜ್ಯಸಭೆ ಸಭಾಪತಿ ಜಗದೀಪ್ ಧನ್ಕರ್ ಅವರ ಮೂಲಕ ನೋಟಿಸ್ ನೀಡಲಾಗಿದೆ.
ಪ್ರಧಾನಿಯವರು ತಮ್ಮ ಮಾತಿನಲ್ಲಿ ನೆಹರೂ ಕುಟುಂಬದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಈ ಮಾತುಗಳನ್ನಾಡಲಾಗಿದೆ ಎಂದೂ ವೇಣುಗೋಪಾಲ್ ಆರೋಪಿಸಿದ್ದಾರೆ.
ರಾಹುಲ್ ಗಾಂಧಿಯವರು ದೇಶದ ವಿರುದ್ಧ ಕೆಲಸ ಮಾಡುತ್ತಿರುವ ಟೂಲ್‌ಕಿಟ್‌ನ ಶಾಶ್ವತ ಭಾಗವೇ ಆಗಿದ್ದಾರೆ. ದೇಶವಿರೋಧಿ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಅವರು ಕ್ಷಮೆ ಕೇಳಲೇಬೇಕು.
– ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವವರೆಲ್ಲ ದೇಶ ವಿರೋಧಿಗಳಾಗುತ್ತಾರಾ? ನಡ್ಡಾ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳದೇ, ಬ್ರಿಟಿಷರಿಗಾಗಿ ಕೆಲಸ ಮಾಡಿದ ಬಿಜೆಪಿಯೇ ನಿಜವಾದ ದೇಶವಿರೋಧಿ ಪಕ್ಷ.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ