Advertisement
ನಮ್ಮ ಪ್ರಣಾಳಿಕೆಯಲ್ಲಿ ಶೇ.30ರಷ್ಟನ್ನೂ ಅನುಷ್ಠಾನ ಮಾಡಿಲ್ಲ ಎಂದು ಸದನದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಆದರೆ ಇದು ತಪ್ಪು ಮಾಹಿತಿ. ಈ ಬಗ್ಗೆ ಚರ್ಚೆ ನಡೆಸುವುದಕ್ಕೆ ನಾನು ಸಿದ್ಧನಿದ್ದೇನೆ. ನಾನು ನೀಡಿದ 165 ಭರವಸೆಗಳ ಪೈಕಿ 157ನ್ನು ಈಡೇರಿಸಿದ್ದೇನೆ. ನುಡಿದಂತೆ ನಡೆ ಎಂಬ ಪುಸ್ತಕವನ್ನೂ ನಾನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹೊರ ತಂದಿದ್ದೆ. ಆದರೆ ನೀವು ಕೊಟ್ಟ ಭರವಸೆಯ ಪೈಕಿ ಶೇ.90ರಷ್ಟನ್ನು ಈಡೇರಿಸಿಲ್ಲ. ಈ ಕಾರಣಕ್ಕಾಗಿಯೇ ರಾಜ್ಯಪಾಲರ ಭಾಷಣ ಹಾಗೂ ಬಜೆಟ್ ಸುಳ್ಳಿನ ಕಂತೆ ಎಂದು ಟೀಕಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ನಾನು ಸಿಎಂ ಆಗಿದ್ದಾಗ 8 ಪ್ರಕರಣಗಳನ್ನು ಸಿಬಿಐ ತನಿಖೆ ಕೊಟ್ಟಿದ್ದೆ ಎಂದು ಹೇಳಿಕೆ ನೀಡಿದ ವಿಪಕ್ಷ ಸಿದ್ದರಾಮಯ್ಯ ಅವರಿಗೆ ಕಾರವಾರ ಶಾಸಕಿ ರೂಪಾಲಿ ನಾಯಕ್ ತಿರುಗೇಟು ನೀಡಿದ್ದಾರೆ. ಸಾಕ್ಷ್ಯ ನಾಶ ಮಾಡಿದ ಬಳಿಕ ಪರೇಶ್ ಮೇಸ್ತಾ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು. ಸಿದ್ದರಾಮಯ್ಯನವರು ಈ ವಿಚಾರ ಮಾತನಾಡಿದರೆ ನನಗೂ ಅವಕಾಶ ನೀಡಬೇಕು. ಪರಮೇಶ್ ಮೇಸ್ತಾ ಕೊಲೆಯಾದಾಗ ಪೊಲೀಸ್ ಇಲಾಖೆ ಹೇಗೆ ನಡೆದುಕೊಂಡಿದೆ ಎಂಬುದು ಗೊತ್ತಿದೆ. ಎಲ್ಲ ಸಾಕ್ಷ್ಯ ನಾಶ ಮಾಡಿದ ಬಳಿಕ ಸಿಬಿಐ ತನಿಖೆಗೆ ಕೊಟ್ಟಿದ್ದೀರಿ ಎಂದು ರೂಪಾಲಿ ನಾಯಕ್ ಆರೋಪಿಸಿದರು. ಇದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮಧ್ಯೆ ತುಸು ಹೊತ್ತು ವಾಗ್ವಾದ ನಡೆಯಿತು.
Related Articles
Advertisement
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಐದು ಬಾರಿಯೂ ರಾಜಸ್ವ ಹೆಚ್ಚಳದ ಬಜೆಟ್ ಮಂಡಿಸಿದ್ದೆ. ಆದರೆ ಈ ವರ್ಷ 402 ಕೋಟಿ ರೂ. ರಾಜಸ್ವ ಹೆಚ್ಚಳ ಬಜೆಟ್ ಮಂಡನೆ ಮಾಡಿದ್ದೇನೆ ಎಂದು ಬೊಮ್ಮಾಯಿ ಹೇಳಿಕೊಂಡಿದ್ದಾರೆ. ಆದರೆ ಇದು ಈ ವರ್ಷಕ್ಕೆ ಅನ್ವಯವಾಗುವುದಿಲ್ಲ. ಮುಂದೆ ಬಂದ ಸರ್ಕಾರಕ್ಕೆ ಸಂಬಂಧಪಟ್ಟಿದ್ದು. ನಿಮ್ಮ ಕಾಲದಲ್ಲೇ ಆಗಿದ್ದರೆ ಪ್ರಶಂಸೆ ಮಾಡಬಹುದಿತ್ತು ಎಂದು ವ್ಯಂಗ್ಯವಾಡಿದರು.
ಇದು ಚುನಾವಣಾ ಬಜೆಟ್ ಮಾತ್ರವಲ್ಲ, ನಿರ್ಗಮನ ಬಜೆಟ್. ನೀವು ಕೊಟ್ಟ 206 ಹೊಸ ಕಾರ್ಯಾದೇಶಗಳ ಪೈಕಿ 57 ಇನ್ನೂ ಜಾರಿಯಾಗಿಲ್ಲ. ಬಜೆಟ್ ಗಾತ್ರದಲ್ಲಿ ಶೇ.56ರಷ್ಟು ಮಾತ್ರ ಖರ್ಚಾಗಿದೆ. ಜನವರಿ ಅಂತ್ಯದೊಳಗೆ ಉಳಿದ ಹಣ ವೆಚ್ಚ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಬಜೆಟ್ ಮೂಲಕ ರಾಜ್ಯದ ಜನತೆಯನ್ನು ದಾರಿ ತಪ್ಪಿಸುವ ಕೆಲಸ ಯಾವುದೇ ಕಾರಣಕ್ಕೂ ಆಗಬಾರದು. ಬಜೆಟ್ ಯಾವಾಗಲೂ ಪಾರದರ್ಶಕತೆ ಹಾಗೂ ಉತ್ತರದಾಯಿತ್ವದಿಂದ ಕೂಡಿರಬೇಕು. ಈ ಬಜೆಟ್‌ನಲ್ಲಿ ಜನರಿಗೆ ಸತ್ಯ ಹೇಳುವ ಯಾವುದೇ ಸಂಗತಿಗಳು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.