Advertisement

ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆಗೆ ಪರ-ವಿರೋಧ

04:51 PM Jun 14, 2022 | Team Udayavani |

ಕೊಪ್ಪಳ: ಎಜಿಎಂಡ್‌ಪಿ ಪ್ರಥಮ್‌ ಕಂಪನಿಯಿಂದ ಸೋಮವಾರ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ನೈಸರ್ಗಿಕ ಅನಿಲ ಸರಬರಾಜು ಕುರಿತ ಪ್ರಸ್ತುತಿ ಕಾರ್ಯಕ್ರಮದಲ್ಲಿ ಅನುಷ್ಠಾನ ಸಂಸ್ಥೆಯ ವೈಖರಿ ಬಗ್ಗೆ ನಗರಸಭೆ ಸದಸ್ಯರು ಪರ, ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಸಂಸದ ಸಂಗಣ್ಣ ಕರಡಿ ಅವರು ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ ಘಟನೆ ನಡೆಯಿತು.

ಕೇಂದ್ರ ಸರ್ಕಾರವು ಮನೆ ಮನೆಗೆ ನೈಸರ್ಗಿಕ ಗ್ಯಾಸ್‌ ಪೈಪ್‌ ಅಳವಡಿಕೆಗೆ ಯೋಜನೆ ರೂಪಿಸಿ ಖಾಸಗಿ ಸಂಸ್ಥೆಯ ನೇತೃತ್ವದಲ್ಲಿ ಕಾಮಗಾರಿ ಆರಂಭಿಸಲು ಮುಂದಾಗಿದೆ. ಹಾಗಾಗಿ ಎಜಿಎಂಡ್‌ಪಿ ಸಂಸ್ಥೆ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಈಚೆಗೆ ನಗರಸಭೆಯಲ್ಲಿ ಸದಸ್ಯರು ನೈಸರ್ಗಿಕ ಅನೀಲ ಪೈಪ್‌ಲೈನ್‌ ಕಾಮಗಾರಿ ಕುರಿತು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಸಂಸ್ಥೆಯ ಪ್ರತಿನಿ ಗಳ ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮ ಜರುಗಿತು.

ಸಭೆಯಲ್ಲಿ ನಗರಸಭೆ ಸದಸ್ಯರಾದ ಮುತ್ತು ಕುಷ್ಟಗಿ, ಅಮ್ಜದ್‌ ಪಟೇಲ್‌, ಮಹೇಂದ್ರ ಛೋಪ್ರಾ ಮಾತನಾಡಿ, ನೈಸರ್ಗಿಕ ಗ್ಯಾಸ್‌ ಪೈಪ್‌ ಅಳವಡಿಕೆಗೆ ನಮ್ಮ ವಿರೋಧವಿಲ್ಲ. ಅಭಿವೃದ್ಧಿಗೆ ನಮ್ಮ ಸಹಕಾರವಿದೆ. ಆದರೆ ಈ ಯೋಜನೆಯ ಬಗ್ಗೆ ಯಾರಿಗೂ ಸರಿಯಾದ ಮಾಹಿತಿಯೇ ಇಲ್ಲ. ನಗರದಲ್ಲಿ ಬಿ.ಟಿ. ಪಾಟೀಲ್‌ ನಗರ ಸೇರಿ ವಿವಿಧ ಬಡವಾಣೆಗಳಲ್ಲಿ ರಸ್ತೆಗಳ ಕಿತ್ತುಹಾಕಿ ಪೈಪ್‌ಲೈನ್‌ ಕಾಮಗಾರಿ ನಡೆಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಯುಜಿಡಿ ಕಾಮಗಾರಿಯಿಂದಾಗಿ ಜನ ರೋಸಿ ಹೋಗಿದ್ದರು. ಈಗ ನಗರದ ರಸ್ತೆಗಳು ಸುಂದರವಾಗಿವೆ. ಮತ್ತೆ ಅವುಗಳನ್ನು ಕಿತ್ತುಹಾಕುವ ಕೆಲಸ ನಡೆದಿದೆ. ಆದರೆ ಅವುಗಳ ಪುನರ್‌ ನಿರ್ಮಾಣದ ಮಾಹಿತಿಯಿಲ್ಲ. ಜಿಯೋ ಕೇಬಲ್‌, ಬಿಎಸ್‌ಎನ್‌ಎಲ್‌ ಕೇಬಲ್‌ ಸೇರಿ ನೀರಿನ ಪೈಪ್‌ಗಳಿವೆ. ಅದರ ಪಕ್ಕದಲ್ಲೇ ಇವುಗಳನ್ನು ಹಾಕಲಾಗುತ್ತಿದೆ. ಬೆಂಕಿಯ ಜೊತೆಗೆ ನಾವು ಆಟವಾಡುವುದಲ್ಲ. ಇದರ ಸುರಕ್ಷತೆಯ ಬಗ್ಗೆ ಸ್ಪಷ್ಟತೆಯಿಲ್ಲ. ಏನಾದರೂ ಅವಘಡ ನಡೆದರೆ ಇದಕ್ಕೆ ಯಾರು ಹೊಣೆ? ಜನರ ಜೀವದ ಭದ್ರತೆ, ವಿಮಾ ವ್ಯವಸ್ಥೆ, ಹಾನಿಯ ಪರಿಹಾರದ ಜವಾಬ್ದಾರಿ ಯಾರು ಎಂದು ಪ್ರಶ್ನೆ ಮಾಡಿದರು.

ಇನ್ನು ಅಕ್ಬರ್ ಪಾಷಾ, ಚನ್ನಪ್ಪ ಕೊಟ್ಯಾಳ, ರಾಜಶೇಖರ ಆಡೂರು ಮಾತನಾಡಿ, ಈ ಯೋಜನೆ ನೈಸರ್ಗಿಕ ಸ್ನೇಹಿ ಯೋಜನೆಯಾಗಿದೆ. ನಗರಸಭೆಯಿಂದ ಪರವಾನಗಿ ಪಡೆದುಕೊಂಡೇ ಕಾಮಗಾರಿ ಆರಂಭಿಸಿದ್ದಾರೆ. ಕಾನೂನು ಅಡಿಯಲ್ಲಿಯೇ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಸಕಾಲಕ್ಕೆ ಕಾಮಗಾರಿ ನಿರ್ಮಿಸಲಿ ಎನ್ನುವ ಸಲಹೆ ನೀಡಿದರು.

Advertisement

ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ನೈಸರ್ಗಿಕ ಅನಿಲ ಪೈಪ್‌ಲೈನ್‌ ಅಳವಡಿಕೆಯು ಒಂದು ಉತ್ತಮ ಯೋಜನೆಯಾಗಿದೆ. ಆದರೆ ಈ ಯೋಜನೆಯ ಬಗ್ಗೆ ನಮಗೆ ಯಾವುದೇ ಸರಿಯಾದ ಮಾಹಿತಿಯೂ ಇಲ್ಲ. ಅಧಿಕಾರಿಗಳು ಪರವಾನಗಿ ನೀಡಿದ್ದಾರೆ. ಜಿಲ್ಲಾಧಿಕಾರಿಗೂ ಸಹ ಈ ಬಗ್ಗೆ ಮಾಹಿತಿಯಿಲ್ಲ. ಮೊದಲು ಸಂಸ್ಥೆ ಎಲ್ಲ ಜನಪ್ರತಿನಿಧಿಗಳಿಗೆ ಯೋಜನೆಯ ಕಾರ್ಯ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಲಿ. ನಂತರದಲ್ಲಿ ಸಾಧಕ, ಬಾಧಕ ವಿವರಿಸಲಿ. ಜನರಿಗೆ ಆಗುವ ಅನುಕೂಲದ ಕುರಿತು ಮಾಹಿತಿ ನೀಡಲಿ. ಸಂಸ್ಥೆಯ ಕೆಲವು ಪ್ರತಿನಿಧಿಗಳಿಗೆ ಈ ಬಗ್ಗೆ ಪೂರ್ಣ ಮಾಹಿತಿಯಿಲ್ಲ. ಎಲ್ಲವನ್ನೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒಂದು ಸಭೆಯನ್ನು ನಡೆಸಿ ನಂತದಲ್ಲಿ ಕಾಮಗಾರಿ ಆರಂಭಿಸಿ, ನಾವು ಕೆಲವೊಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವೆವು. ಆ ಬಳಿಕ ನಗರದಲ್ಲಿ ಕಾಮಗಾರಿ ಆರಂಭಿಸಿ. ಅಲ್ಲಿವರೆಗೂ ಯಾವುದೇ ಕಾಮಗಾರಿ ನಿರ್ವಹಿಸಬೇಡಿ ಎಂದು ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌, ನಗರಸಭೆ ಅಧ್ಯಕ್ಷೆ ಶಿವಗಂಗಾ ಬೊಮ್ಮಕ್ಕನವರ್‌, ನಗರಸಭೆ ಉಪಾಧ್ಯಕ್ಷೆ ಆಯೇಷಾ ರುಬಿನಾ, ನಗರಸಭೆಯ ಎಇಇ ಮಂಜುನಾಥ, ಎಜಿಪಿ ಪ್ರಥಮ್‌ ಕಂಪನಿಯ ವಿಭಾಗೀಯ ಮುಖ್ಯಸ್ಥ ಸುವೇಂದು ಮೊಪಾತ್ರ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next