Advertisement

ರೋಪ್‌ ವೇ ನಿರ್ಮಾಣಕ್ಕೆ ಸಂಘ ಪರಿವಾರ ವಿರೋಧ

04:39 PM Jun 14, 2022 | Team Udayavani |

ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಯಲ್ಲಿ ರೋಪ್‌ ವೇ ಮೂಲಕ ಸಂಚಾರ ವ್ಯವಸ್ಥೆ ಕಲ್ಪಿಸಲು ಭಜರಂಗದಳ, ಸಂಘ ಪರಿವಾರ ಸೇರಿ ಕೆಲವರ ವಿರೋಧ ಹಿನ್ನೆಲೆಯಲ್ಲಿ ಮತ್ತೂಮ್ಮೆ ಪರಿಶೀಲಿಸಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿದರು.

Advertisement

ಅವರು ಸೋಮವಾರ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಪ್ರವಾಸೋದ್ಯಮ ಇಲಾಖೆ, ವಿಭಾಗೀಯ ಆಯುಕ್ತರು ಹಾಗೂ ಜಿಲ್ಲಾಡಳಿತದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರಕಾರ ಈಗಾಗಲೇ 120 ಕೋಟಿ ರೂ. ಅನುದಾನ ಕಲ್ಪಿಸಿದ್ದು, ಅಂಜನಾದ್ರಿ ಸುತ್ತ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವಸತಿ ನಿಲಯ, ವಾಹನ ಪಾರ್ಕಿಂಗ್‌, ಅಂಜನಾದ್ರಿಯ ಪರಿಕ್ರಮ ರಸ್ತೆ ಹೀಗೆ ಅನೇಕ ಸೌಕರ್ಯ ಕಲ್ಪಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಯೋಜನಾ ಅನುಷ್ಠಾನ ಮಾಡಲು ಜೂ. 15ರಂದು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಅಂಜನಾದ್ರಿ ಅಭಿವೃದ್ಧಿ ಕುರಿತು ಸಭೆ ನಡೆಸುತ್ತಿದ್ದು, ಪ್ರವಾಸೋದ್ಯಮ, ಕಂದಾಯ, ಅರಣ್ಯ, ಕನ್ನಡ ಸಂಸ್ಕೃತಿ, ಆರ್‌ಡಿಪಿಆರ್‌ ಇಲಾಖೆಗಳ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸೇರಿ ಜಿಲ್ಲೆಯ ಶಾಸಕರು, ಸಂಸದರು ಪಾಲ್ಗೊಂಡು ಯೋಜನೆ ಕುರಿತು ಚರ್ಚೆ ಮಾಡಲಾಗುತ್ತದೆ.

ಸದ್ಯ 60 ಎಕರೆ ರೈತರ ಭೂಮಿಯನ್ನು ವಶಕ್ಕೆ ಪಡೆದು ಮೂಲ ಸೌಕರ್ಯಗಳ ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ವಶಪಡೆಸಿಕೊಳ್ಳುವ ಭೂಮಿಗೆ 50 ಲಕ್ಷ ಪರಿಹಾರ ನೀಡಬೇಕು. ಅಥವಾ ರೈತರ ಜತೆಗೂಡಿ ತಮ್ಮ ಹೊಲ, ಗದ್ದೆಗಳಲ್ಲಿ ಪ್ರವಾಸಿಗರಿಗೆ ವಸತಿ, ಪಾರ್ಕಿಂಗ್‌ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲು ಯೋಜನೆ ಅನುಷ್ಠಾನದ ಕುರಿತು ಸಾಧಕ, ಬಾಧಕಗಳ ಕುರಿತು ಚರ್ಚೆ ಮಾಡಲಾಗುತ್ತದೆ. ಹನುಮ ಜನ್ಮಭೂಮಿ ವಿವಾದಗಳ ಕುರಿತು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ರಾಮಾಯಣ ಸೇರಿ ಪ್ರಮುಖ ಗ್ರಂಥಗಳು, ಶಿಲಾ ಶಾಸನಗಳು ಹಾಗೂ ಜನಪದದಲ್ಲಿ ಆನೆಗೊಂದಿ ಹತ್ತಿರದ ಕಿಷ್ಕಿಂದಾ ಅಂಜನಾದ್ರಿಯ ಗುಡ್ಡಗಾಡು ಪ್ರದೇಶವೇ ಹನುಮಂತ ಹುಟ್ಟಿದ ಸ್ಥಳ ಎಂದು ಉಲ್ಲೇಖೀಸಲಾಗಿದೆ. ಮುಖ್ಯಮಂತ್ರಿಗಳ ಸಭೆಯಲ್ಲಿ ಈ ಕುರಿತು ಇನ್ನಷ್ಟು ಸ್ಪಷ್ಟತೆ ಸಿಗಲಿದೆ ಎಂದರು.

ಶಾಸಕ ಪರಣ್ಣ ಮುನವಳ್ಳಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ವೆಂಕಟೇಶ, ವಿಭಾಗೀಯ ಆಯುಕ್ತ ಎನ್‌.ವಿ. ಪ್ರಸಾದ, ಜಿಲ್ಲಾ ಧಿಕಾರಿ ಸುರಳ್ಕರ್‌ ವಿಕಾಶ ಕಿಶೋರ್‌, ಸಿಇಒ ಪೌಜಿಯಾ ತರನ್ನುಮ್‌, ಹಂಪಿ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಸಿದ್ಧರಾಮೇಶ, ಧಾರ್ಮಿಕ ದತ್ತಿ ಇಲಾಖೆ ಅರವಿಂದ ಸುತಗುಂಡಿ, ತಹಶೀಲ್ದಾರ್‌ ಯು. ನಾಗರಾಜ ಸೇರಿ ಕಂದಾಯ, ಲೋಕೊಪಯೋಗಿ, ಪ್ರವಾಸೋದ್ಯಮ ಅಧಿಕಾರಿಗಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next