Advertisement
ಚುನಾವಣಾ ನೀತಿ ಸಂಹಿತೆ ಮೇ 27ರವರೆಗೆ ಜಾರಿಯಲ್ಲಿದ್ದರೂ ಪಾಲಿಕೆಯಲ್ಲಿ ಶನಿವಾರ “ನವ ಬೆಂಗಳೂರು’ ಯೋಜನೆಯಲ್ಲಿನ ಕಾಮಗಾರಿಗಳನ್ನು ಟೆಂಡರ್ ಕರೆಯದೆ ನೇರವಾಗಿ ಕೆಆರ್‌ಐಡಿಎಲ್ ಮೂಲಕ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವ ವಿಷಯಕ್ಕೆ ಅನುಮೋದನೆ ಪಡೆಯಲಾಯಿತು.
Related Articles
Advertisement
ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಚುನಾವಣೆ ಸಂದರ್ಭದಲ್ಲಿ ಹಣ ಕೊಟ್ಟಿರುವ ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲು ಕೆಆರ್‌ಐಡಿಎಲ್ ಸಂಸ್ಥೆಗೆ ಗುತ್ತಿಗೆ ನೀಡುತ್ತಿದ್ದೀರ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಘೋಷಣೆ ಮಾಡಿದ 7300 ಕೋಟಿ ರೂ.ಗಳಲ್ಲಿ ಇನ್ನೂ 4000 ಕೋಟಿ ರೂ. ಬಂದಿಲ್ಲ. ಹೀಗಿರುವಾಗ ಜನರ ಹಣ ಲೂಟಿ ಮಾಡಲು ಪಾಲಿಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದಕ್ಕೆ ಉತ್ತರಿಸಿದ ಕಾಂಗ್ರೆಸ್ ಹಿರಿಯ ಸದಸ್ಯ ಗುಣಶೇಖರ್, ಕುಡಿಯುವ ನೀರು, ಮಳೆ ನೀರು ಕಾಲುವೆಗಳ ದುರಸ್ತಿಗೆ ಟೆಂಡರ್ ಆಹ್ವಾನಿಸಲು ತಡವಾಗಲಿದೆ. ಹೀಗಾಗಿ ಕೆಆರ್‌ಐಡಿಎಲ್ ಮೂಲಕ ಅಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸುವ ಅಧಿಕಾರ ಪಾಲಿಕೆಗಿದೆ ಎಂದರು.
ಚುನಾವಣಾ ಆಯೋಗಕ್ಕೆ ದೂರು: ಪಾಲಿಕೆಯಲ್ಲಿ ಕೈಗೊಂಡ ನಿರ್ಣಯ ಹಿಂಪಡೆಯಬೇಕೆಂದು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದ ಬಿಜೆಪಿ ಸದಸ್ಯರು, ಪದ್ಮನಾಭ ರೆಡ್ಡಿ ನೇತೃತ್ವದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕುಡಿಯುವ ನೀರು ಹಾಗೂ ಪ್ರಕೃತಿ ವಿಕೋಪ ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಕಾಮಗಾರಿಗಳನ್ನು ನಡೆಸಲು ಅವಕಾಶ ನೀಡಬಾರದು ಎಂದು ದೂರಿನಲ್ಲಿ ಕೋರಿದ್ದಾರೆ. ಪಾಲಿಕೆಯಲ್ಲಿ ನಿರ್ಣಯ ಕೈಗೊಂಡಿರುವ ಕುರಿತಂತೆ ವರದಿ ನೀಡುವಂತೆ ವಿಶೇಷ ಆಯುಕ್ತ ಮನೋಜ್ ಕುಮಾರ್ ಮೀನಾ ಅವರಿಗೆ, ಆಯೋಗ ಮೌಖೀಕವಾಗಿ ತಿಳಿಸಿದೆ ಎನ್ನಲಾಗಿದೆ.
ತೆರವು ಕಾರ್ಯಾಚರಣೆ: ಪಾಲಿಕೆಯ ವ್ಯಾಪ್ತಿಯ ಹಳೆಯ, ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕು ಎಂದು ಪಕ್ಷಾತೀತವಾಗಿ ಪಾಲಿಕೆ ಸದಸ್ಯರು ಒತ್ತಾಯಿಸಿದರು. ಉಪಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜನ್ ಮಾತನಾಡಿ, ಮಳೆಗಾಲದ ಹಿನ್ನೆಲೆಯಲ್ಲಿ ಈವರೆಗೆ 615 ಮರಗಳನ್ನು ತೆರವುಗೊಳಿಸಿದ್ದು, 3037 ರೆಂಬೆ-ಕೊಂಬೆಗಳನ್ನು ಕತ್ತರಿಸಲಾಗಿದೆ.
ಅದರಂತೆ ತೆರವುಗೊಳಿಸಿದ ಮರಗಳಿಂದ ಪಾಲಿಕೆಗೆ 10 ಲಕ್ಷ ರೂ. ಆದಾಯ ಬಂದಿದೆ. ಪಾಲಿಕೆಯ ನಾಲ್ಕು ಡಿಪೋಗಳಲ್ಲಿರುವ ದಾಸ್ತಾನು ಹರಾಜು ಹಾಕಲಾಗುವುದು. ಮಳೆಗಾಲದ ಹಿನ್ನೆಲೆಯಲ್ಲಿ ಅರಣ್ಯ ತಂಡಗಳನ್ನು ಹೆಚ್ಚಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮರ ಕಡಿಯಲು ಕೆಲವು ಸಂಸ್ಥೆಗಳು ಅಡ್ಡಿಪಡಿಸುತ್ತಿವೆ. ದಿನಕ್ಕೆ 20-30 ಎನ್‌ಜಿಒಗಳು ನಮ್ಮ ಕಚೇರಿಗೆ ಬಂದು ನಗರದಲ್ಲಿ ಮರ ಕಡಿಯದಂತೆ ಮನವಿ ಮಾಡುತ್ತಿವೆ. ಆದರೂ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಶುಕ್ರವಾರ ಸಂಜೆಯಿಂದ, ಅಲ್ಲಿ ಹಾವು ಬಂದಿದೆ, ಇಲ್ಲಿ ಹಾವು ನುಗ್ಗಿದೆ ಎಂದು ಸಾಕಷ್ಟು ಸುಳ್ಳು ಕರೆಗಳು ನನಗೆ ಬಂದಿವೆ. ವನ್ಯಜೀವಿ ಸಂರಕ್ಷಕರಿಗೆ ಗೌರವಧನ ನೀಡಿಲ್ಲವೆಂದು ಹೀಗೆ ಸಾಕಷ್ಟು ಕರೆಗಳು ಬಂರುತ್ತಿದ್ದು, ರಾತ್ರಿಯಿಡಿ ಕರೆಗಳು ಬರುತ್ತಲೇ ಇದ್ದು, ನನ್ನನ್ನು ಬೆದರಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.