ಬೆಂಗಳೂರು: ವಿದ್ಯುತ್ ದುಂದುವೆಚ್ಚ-ದುರುಪಯೋಗ ಮಾಡುವಂತೆ ಜನರಿಗೆ ಪ್ರತಿಪಕ್ಷಗಳು ಕುಮ್ಮಕ್ಕು ಕೊಡುತ್ತಿದೆ. ನಾವು ಅಗತ್ಯಕ್ಕೆ ತಕ್ಕಂತೆ ಬಳಸಲು ನಾಡಿನ ಜನತೆಗೆ ನೆರವಾಗುತ್ತೇವೆ. ದುಂದುವೆಚ್ಚ-ದುರುಪಯೋಗಕ್ಕೆ ಬ್ರೇಕ್ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪರಿಸರ ಇಲಾಖೆ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮನುಷ್ಯರಿಗೆ ವಿವೇಕ ಇರಬೇಕು. ನೀರು, ಗಾಳಿ, ವಿದ್ಯುತ್ ಯಾವುದನ್ನೂ ದುಂದುವೆಚ್ಚ ಮಾಡಬಾರದು. ದುಂದುವೆಚ್ಚ ಎನ್ನುವುದು ಪ್ರಕೃತಿ ವಿರೋಧಿ, ಜನ ವಿರೋಧಿ ಮತ್ತು ಪರಿಸರ ವಿರೋಧಿಯಾದದ್ದು ಎಂದು ಹೇಳಿದರು.
ಜನರು ಎಷ್ಟು ವಿದ್ಯುತ್ ಬಳಸುತ್ತಿದ್ದಾರೋ ಅಷ್ಟೇ ಬಳಸಬೇಕು. ಹೆಚ್ಚು ವಿದ್ಯುತ್ ಬಳಸಿದರೆ ದುಂದು ವೆಚ್ಚ ಆಗುತ್ತದೆ. ನಾವೂ ಬದುಕಬೇಕು, ಸಮಾಜದಲ್ಲಿರುವವರು ಬದುಕಬೇಕು. ಹಾಗಾಗಿ ಕೆಲವು ಮಿತಿ, ನಿಬಂಧನೆಗಳನ್ನು ಹಾಕಬೇಕಾಗುತ್ತದೆ ಎಂದು ಉಚಿತ ವಿದ್ಯುತ್‌ಗೆ ಮಿತಿ ಹೇರಿದ್ದನ್ನು ಸಮರ್ಥಿಸಿಕೊಂಡರು.
ಸಂಕಷ್ಟದಲ್ಲಿರುವ ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ನೆರವಿಗಾಗಿ ನಾವು ಉಚಿತ ವಿದ್ಯುತ್ ನೀಡಲು ಮುಂದಾಗಿದ್ದೇವೆ. ಒಂದು ವರ್ಷದ ಸರಾಸರಿ ಬಳಕೆಗಿಂತ ಶೇ.10ರಷ್ಟು ಹೆಚ್ಚು ಉಚಿತ ವಿದ್ಯುತ್ ಬಳಕೆಗೆ ನಾವು ಅವಕಾಶ ನೀಡಿದ್ದೇವೆ. ಇದನ್ನು ನಾಡಿನ ಜನತೆ ಸಂಭ್ರಮದಿಂದ ಒಪ್ಪಿಕೊಂಡಿದ್ದಾರೆ ಮತ್ತು ಸ್ವೀಕರಿಸಿದ್ದಾರೆ. ಆದರೆ ಜನರಿಂದ ತಿರಸ್ಕೃತಗೊಂಡಿರುವ ಬಿಜೆಪಿ, ವಿದ್ಯುತ್ ಅನ್ನು ಅನಗತ್ಯ ದುರ್ಬಳಕೆ-ದುಂದುವೆಚ್ಚ-ದುರುಪಯೋಗ ಮಾಡಲು ಕುಮ್ಮಕ್ಕು ಕೊಡುತ್ತಿದೆ. ಇದು ಅತ್ಯಂತ ಜನವಿರೋಧಿಯಾದದ್ದು. ನಾಡಿನ ಪ್ರಜ್ಞಾವಂತ ಜನತೆ ಇದಕ್ಕೆ ಸೊಪ್ಪಾಕುವುದಿಲ್ಲ ಎನ್ನುವ ಭರವಸೆ ನಮಗಿದೆ ಎಂದರು.