Advertisement

ಕರಾವಳಿಯಲ್ಲಿ ಯುವಕರಿಗೆ ಅವಕಾಶ; ಚುನಾವಣೆ ಲೆಕ್ಕಾಚಾರ

12:24 AM Apr 11, 2022 | Team Udayavani |

ಮಂಗಳೂರು: ಕೆಪಿಸಿಸಿಯ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 13 ಮತ್ತು ಉಡುಪಿ ಜಿಲ್ಲೆಗೆ 3 ಸ್ಥಾನಗಳು ದೊರಕಿವೆ.

Advertisement

ನೂತನ ಪಟ್ಟಿಯಲ್ಲಿ ಕೆಲವು ಯುವನಾಯಕರಿಗೆ ಪ್ರಾತಿನಿಧ್ಯ ನೀಡಿರುವುದರ ಹಿಂದೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಲೆಕ್ಕಚಾರವಿದೆ.

ಕೆಪಿಸಿಸಿಯ ಒಟ್ಟು 40 ಉಪಾಧ್ಯಕ್ಷ ಸ್ಥಾನಗಳಲ್ಲಿ ದ.ಕ.ದ ಐವರು ಮತ್ತು ಉಡುಪಿ ಜಿಲ್ಲೆಯ ಇಬ್ಬರಿಗೆ ಅವಕಾಶ ನೀಡಲಾಗಿದೆ. ದ.ಕ.ದಿಂದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್‌, ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಎಐಸಿಸಿ ಕಾರ್ಯದರ್ಶಿಗಳಾದ ಪಿ.ವಿ. ಮೋಹನ್‌, ಐವನ್‌ ಡಿ’ಸೋಜಾ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.

ಉಡುಪಿಯಿಂದ ಪ್ರಮೋದ್‌ ಮಧ್ವರಾಜ್‌ ಮತ್ತು ವಿನಯ ಕುಮಾರ್‌ ಸೊರಕೆ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.

109 ಪ್ರ. ಕಾರ್ಯದರ್ಶಿಗಳ ಪೈಕಿ ದ.ಕ. ಜಿಲ್ಲೆಯ 8 ಮತ್ತು ಉಡುಪಿಯ ಒಬ್ಬರು ಸ್ಥಾನ ಪಡೆದಿದ್ದಾರೆ. ಧನಂಜಯ ಅಡ³ಂಗಾಯ, ಜಿ.ಎ. ಬಾವಾ, ಕೃಪಾ ಆಳ್ವ, ಮಮತಾ ಗಟ್ಟಿ, ಮಿಥುನ್‌ ರೈ, ದೀಪಕ್‌ ಪೂಜಾರಿ, ರಕ್ಷಿತ್‌ ಶಿವರಾಂ, ಇನಾಯತ್‌ ಅಲಿ ಅವರಿಗೆ ದ.ಕ. ದಿಂದ ಸ್ಥಾನ ನೀಡಿದ್ದರೆ ಉಡುಪಿಯಿಂದ ಎಂ.ಎ. ಗಫೂರ್‌ ಅವರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಹೊಸ ಪದಾಧಿಕಾರಿಗಳ ಆಯ್ಕೆ ಸಂದರ್ಭ ಕಂಡುಬರುವ ಅಸಮಾಧಾನ ಈ ಬಾರಿಯೂ ಪಕ್ಷದೊಳಗೆ ಕಂಡುಬಂದಿದ್ದು, ಶಮನಗೊಳಿಸುವ ಕಾರ್ಯವನ್ನು ಪಕ್ಷದ ಹಿರಿಯ ನಾಯಕರು ಮಾಡುತ್ತಿದ್ದಾರೆ ಎನ್ನಲಾಗಿದೆ.

Advertisement

ಚುನಾವಣೆ ಲೆಕ್ಕಚಾರ:
ಯುವಕರಿಗೆ ಅವಕಾಶ
ದ.ಕ. ಜಿಲ್ಲೆಗೆ ಸಂಬಂಧಿಸಿ ಕೆಪಿಸಿಸಿ ಕೆಲವು ಯುವಕರಿಗೆ ಅವಕಾಶ ನೀಡಿರುವುದರ ಹಿಂದೆ ವಿಧಾನಸಭೆ ಚುನಾವಣೆಯ ನೆರಳಿದೆ ಎಂದು ವಿಶ್ಲೇಪಿಸಲಾಗುತ್ತಿದೆ. ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಯುವನಾಯಕ ರಕ್ಷಿತ್‌ ಶಿವರಾಂ ವಿಧಾನಪರಿಷತ್‌ ವಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರ ಸಹೋದರ ಬಿ.ಕೆ. ಶಿವರಾಂ ಅವರ ಪುತ್ರ; ಬೆಳ್ತಂಗಡಿಯಲ್ಲಿ ನೆಲೆಸಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಮೂಡುಬಿದಿರೆ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಯುವನಾಯಕ ಮಿಥುನ್‌ ರೈ ಈ ಬಾರಿಯೂ ಈ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಎನ್‌ಎಸ್‌ಐಯು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಮೂಲ್ಕಿಅವರು ಮಂಗಳೂರು ಉತ್ತರ ಕ್ಷೇತ್ರದತ್ತಗಮನ ಹರಿಸಿದ್ದಾರೆ ಎನ್ನಲಾಗಿದೆ. ಪುತ್ತೂರು ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯಲ್ಲಿ ಧನಂಜಯ ಅಡ³ಂಗಾಯ
ಅವರ ಹೆಸರು ಕೂಡ ಕೇಳಿಬರುತ್ತಿದೆ ಎನ್ನಲಾಗಿದೆ.

ಜನಾರ್ದನ ಪೂಜಾರಿ ಪುತ್ರನಿಗೆ ಅವಕಾಶ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ದೀಪಕ್‌ ಪೂಜಾರಿ ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರ ಪುತ್ರ. ಇದೊಂದು ಅಚ್ಚರಿಯ ಆಯ್ಕೆ ಎನ್ನಲಾಗಿದೆ. ಪಕ್ಷದ ಬೆಳವಣಿಗೆಗೆ ಪೂಜಾರಿ ಅವರು ನೀಡಿರುವ ಮಹತ್ತರ ಕೊಡುಗೆಯನ್ನು ಗೌರವಿಸಿ ಅವರ ಪುತ್ರನಿಗೆ ಈ ಹುದ್ದೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಪೂಜಾರಿ ಅಸಮ್ಮತಿ
ಪುತ್ರನಿಗೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ನೀಡಿರುವುದಕ್ಕೆ ಜನಾರ್ದನ ಪೂಜಾರಿ ಅಸಮ್ಮತಿ ಸೂಚಿಸಿದ್ದಾರೆ. ನನ್ನ ಕುಟುಂಬದವರು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಮತ್ತು ರಾಜಕೀಯ ರಂಗದ ಯಾವುದೇ ಹುದ್ದೆಗಳನ್ನು ಸ್ವೀಕರಿಸುವುದಿಲ್ಲ ಎಂದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನನ್ನ ಇಬ್ಬರು ಪುತ್ರರು ಕೂಡ ಉನ್ನತ ಹುದ್ದೆಯಲ್ಲಿದ್ದಾರೆ ಮತ್ತು ಸಮಾಜ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಕೆಪಿಸಿಸಿಗೆ ಪೂಜಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next