Advertisement

ಇಂದಿನಿಂದ ಸಿನೆಮಾ ಪ್ರದರ್ಶನಕ್ಕೆ ಅವಕಾಶ

01:21 AM Oct 15, 2020 | mahesh |

ಮಂಗಳೂರು/ಉಡುಪಿ: ಕೋವಿಡ್ ಕಾರಣದಿಂದ ಕಳೆದ ಏಳು ತಿಂಗಳಿನಿಂದ ಬಾಗಿಲು ಹಾಕಿರುವ ಕರಾವಳಿಯ ಸಿನೆಮಾ ಮಂದಿರಗಳ ಪೈಕಿ ಕೆಲವು ಮಾತ್ರ ಅ. 15ರಿಂದ ಆರಂಭವಾಗಲಿದ್ದು, ಉಳಿದವು ಇನ್ನೂ ಕೆಲವು ದಿನಗಳ ಅನಂತರವಷ್ಟೇ ತೆರೆಯಲಿವೆ.

Advertisement

ಮಂಗಳೂರಿನ ಮಲ್ಟಿಪ್ಲೆಕ್ಸ್‌ಗಳಾಗಿರುವ ಭಾರತ್‌ ಮಾಲ್‌ನ ಬಿಗ್‌ ಸಿನೆಮಾಸ್‌ ಹಾಗೂ ಸಿಟಿ ಸೆಂಟರ್‌ನಲ್ಲಿರುವ ಸಿನೆಪೊಲಿಸ್‌ನ ಕೆಲವು ಸ್ಕ್ರೀನ್‌ಗಳಲ್ಲಿ ಗುರುವಾರ ಪ್ರದರ್ಶನ ಆರಂಭವಾಗಲಿದೆ. ಮಾರ್ಚ್‌ ವೇಳೆಗೆ ಪ್ರದರ್ಶನ ಸ್ಥಗಿತಗೊಂಡಿದ್ದ ಕನ್ನಡ, ಹಿಂದಿ ಸಿನೆಮಾಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.

ಮಲ್ಟಿಪ್ಲೆಕ್ಸ್‌ಗಳು ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಪ್ರೇಕ್ಷಕರನ್ನು ಸೆಳೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿವೆ. ಸಾಮಾಜಿಕ ಅಂತರಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಅದರಂತೆ ಆಸನದ ವ್ಯವಸ್ಥೆ ಮಾಡಲಾಗಿದೆ. ಆನ್‌ಲೈನ್‌ ಬುಕ್ಕಿಂಗ್‌ಗೆ ಆದ್ಯತೆ ನೀಡಲಾಗಿದೆ. ಮಂಗಳೂರಿನ ಫೋರಂ ಮಾಲ್‌ನ ಪಿವಿಆರ್‌ನಲ್ಲಿ ಕೆಲವು ದಿನಗಳ ಬಳಿಕವಷ್ಟೇ ಚಿತ್ರ ಪ್ರದರ್ಶನ ಆರಂಭವಾಗಲಿದೆ. ಮಣಿಪಾಲದ ಐನಾಕ್ಸ್‌ ಚಿತ್ರ ಪ್ರದರ್ಶನದ ಬಗ್ಗೆ ಅಧಿಕೃತ ನಿರ್ಧಾರ ತಳೆದಿಲ್ಲ. ಮಣಿಪಾಲದ ಭಾರತ್‌ ಸಿನೆಮಾ ಅ. 15ರಿಂದ ಚಿತ್ರ ಪ್ರದರ್ಶನಕ್ಕೆ ಸಿದ್ಧವಾಗಿದೆ.

ಮಂಗಳೂರಿನ ಜ್ಯೋತಿ, ರಾಮಕಾಂತಿ, ರೂಪವಾಣಿ, ಸುಚಿತ್ರ, ಪ್ರಭಾತ್‌, ಸುರತ್ಕಲ್‌ನ ನಟರಾಜ್‌, ಮೂಡುಬಿದಿರೆಯ ಅಮರಶ್ರೀ, ಪುತ್ತೂರಿನ ಅರುಣ, ಸುಳ್ಯದ ಸಂತೋಷ್‌, ಬೆಳ್ತಂಗಡಿಯ ಭಾರತ್‌, ಉಡುಪಿ ಜಿಲ್ಲೆಯ ಅಲಂಕಾರ್‌, ಕಲ್ಪನಾ, ಆಶೀರ್ವಾದ, ಡಯಾನ, ವಿನಾಯಕ, ರಾಧಿಕಾ, ಪ್ಲಾನೆಟ್‌ ಸಿನೆಮಾ ಮಂದಿರಗಳು ಚಿತ್ರಪ್ರದರ್ಶ ನಕ್ಕೆ ಸಿದ್ಧತೆ ಮಾಡಿಕೊಂಡಿವೆ. ಆದರೆ ಆರಂಭದ ದಿನಾಂಕ ನಿರ್ಣಯವಾಗಿಲ್ಲ.

ಸಿಂಗಲ್‌ ಸ್ಕ್ರೀನ್‌ ಮಾಲಕರ ಅಳಲೇನು?
ಸಿಂಗಲ್‌ ಸ್ಕ್ರೀನ್‌ಗಳು 7 ತಿಂಗಳಿನಿಂದ ಬಂದ್‌ ಆಗಿರುವುದರಿಂದ ಪ್ರಸ್ತುತ ಇದರ ನಿರ್ವಹಣೆ ಹಾಗೂ ದುರಸ್ತಿಗೆ ಮಾಲಕರು ಕನಿಷ್ಠ 75,000 ರೂ. ವ್ಯಯಿಸಬೇಕಾಗಿದೆ. ಒಮ್ಮೆ ಪ್ರದರ್ಶನ ಪ್ರಾರಂಭಗೊಂಡರೆ ಸಿಬಂದಿಯ ಮಾಸಿಕ ವೇತನ 1.20 ಲ.ರೂ., ವಿದ್ಯುತ್‌ ಬಿಲ್‌ 20,000 ರೂ.ಗಳಂತೆ ಸುಮಾರು 1.50 ಲ.ರೂ. ಖರ್ಚು ಬರುತ್ತದೆ. ಹೊಸ ಚಿತ್ರಗಳ ಬಿಡುಗಡೆ ಇಲ್ಲದಿರುವುದರಿಂದ ಮಾಲಕರು ಕೈಯಿಂದ ಖರ್ಚು ಹಾಕಬೇಕಾಗುತ್ತದೆ. ಕೊರೊನಾದಿಂದಾಗಿ ಮತ್ತೆ ಬಂದ್‌ ಮಾಡುವ ಪರಿಸ್ಥಿತಿ ಎದುರಾದರೆ ಮಾಲಕರು ಸಂಕಷ್ಟಕ್ಕೆ ಒಳಗಾಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಂದಿರಗಳನ್ನು ತೆರೆಯುವ ನಿರ್ಧರ ಮಾಡಿಲ್ಲ ಎಂದು ಸಿಂಗಲ್‌ ಸ್ಕ್ರೀನ್‌ ಮಾಲಕರೊಬ್ಬರು ಉದಯವಾಣಿಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next